ಕಟಕ್(ಒಡಿಶಾ): ದೇಶದ ಮೊಟ್ಟ ಮೊದಲ ವಿಶ್ವವಿದ್ಯಾಲಯ ಮಟ್ಟದ ಖೇಲೋ ಇಂಡಿಯಾ ಕ್ರೀಡಾಕೂಟಕ್ಕೆ ಕಟಕ್ನ ಜವಾಹರ್ ಲಾಲ್ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಶನಿವಾರ ಉದ್ಘಾಟನೆ ಮಾಡಿದ್ದಾರೆ.
ರಾಷ್ಟ್ರಮಟ್ಟದ ಈ ಬೃಹತ್ ಕ್ರೀಡಾಕೂಟ ಇಂದಿನಿಂದ ಒಡಿಶಾದಲ್ಲಿ ಆರಂಭವಾಗಿದ್ದು, ಮಾರ್ಚ್ 1ರವರೆಗೆ ನಡೆಯಲಿದೆ. ಇಲ್ಲಿಗೆ ದೇಶದ ಸುಮಾರು 159 ವಿಶ್ವವಿದ್ಯಾಲಯಗಳಿಂದ 3,400 ಅಥ್ಲೀಟ್ಗಳು 7 ತಂಡಗಳ ವಿಭಾಗ ಸೇರಿದಂತೆ 17 ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಲಿದ್ದಾರೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ಈ ಬೃಹತ್ ಕ್ರೀಡಾಕೂಟವನ್ನು ಉದ್ಘಾಟಿಸಿದ ನರೇಂದ್ರ ಮೋದಿ ಭಾರತದ ಕ್ರೀಡಾ ಇತಿಹಾಸದಲ್ಲಿ ಇದೊಂದು ಐತಿಹಾಸಿಕ ಕ್ಷಣ ಎಂದು ತಿಳಿಸಿದ್ದಾರೆ.
" ಇಂದು ದೇಶದ ಕ್ರೀಡಾ ಕ್ಷೇತ್ರದಲ್ಲಿ ಕ್ರಾಂತಿಯ ಹೆಜ್ಜೆಯನ್ನು ಇಡಲಾಗಿದೆ ಎಂದ ಅವರು, ಇಂದು ಒಡಿಶಾದಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿ ಮಾಡಲಾಗಿದೆ. ಒಡಿಶಾದಲ್ಲಿ ಮಾತ್ರವಲ್ಲ, ಭಾರತದ ಕ್ರೀಡಾ ಕ್ಷೇತ್ರದಲ್ಲೇ ಐತಿಹಾಸಿಕ ಕ್ಷಣ, ಹಾಗೆಯೇ ಭಾರತದ ಕ್ರೀಡೆಗಳ ಭವಿಷ್ಯಕ್ಕಾಗಿ ಇಟ್ಟಿರುವ ಬಹುದೊಡ್ಡ ಹೆಜ್ಜೆ" ಎಂದು ಈ ಖೇಲೋ ಇಂಡಿಯಾ ಕ್ರೀಡಾಕೂಟವನ್ನ ಪ್ರಧಾನಿ ಬಣ್ಣಿಸಿದ್ದಾರೆ.
ಹಾಗೆಯೇ ಮುಂದುವರಿದು " ಕಳೆದ ನಾಲ್ಕೈದು ವರ್ಷಗಳಲ್ಲಿ ದೇಶದ ಕ್ರೀಡಾ ಕ್ಷೇತ್ರದಲ್ಲಿ ಗಮನಾರ್ಹ ಸುಧಾರಣೆಯಾಗಿದೆ. ನಮ್ಮ ಕ್ರೀಡಾಪಟುಗಳು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾರೆ. ಇದೇ ವರ್ಷ ನಡೆಯಲಿರುವ ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾರತದ ಕ್ರೀಡಾಪಟುಗಳಿಂದ ಹೆಚ್ಚಿನ ಪದಕಗಳನ್ನು ನಿರೀಕ್ಷೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಈ ಕಾರ್ಯಕ್ರಮದಲ್ಲಿ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್, ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಮತ್ತು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್, ಭಾರತ ಓಟಗಾರ್ತಿ ಹಾಗೂ ಕ್ರೀಡಾಕೂಟವನ್ನು ಆಯೋಜನೆ ಮಾಡಿರುವ KIIT ವಿಶ್ವವಿದ್ಯಾಲಯದ ದ್ಯುತಿ ಚಾಂದ್ ಭಾಗವಹಿಸಿದ್ದರು.
ಮಂಗಳೂರು ವಿಶ್ವವಿದ್ಯಾಲಯದ ತ್ರಿಪಲ್ ಜಂಪರ್ ಜಯ್ ಶಾ ಕೂಡ ಹಾಜರಿದ್ದರು.