ನವದೆಹಲಿ: ಐಎಸ್‌ಎಸ್‌ಎಫ್ ವಿಶ್ವಕಪ್ನ ಮಹಿಳೆಯರ 25 ಮೀಟರ್ ಪಿಸ್ತೂಲ್ ವಿಭಾಗದ ಸ್ಪರ್ಧೆಯಲ್ಲಿ ಶೂಟರ್ ಚಿಂಕಿ ಯಾದವ್ ಚಿನ್ನದ ಪದಕಕ್ಕೆ ಮುತ್ತಿಕ್ಕಿದರೆ, ಬೆಳ್ಳಿ ಮತ್ತು ಕಂಚು ಕೂಡ ಭಾರತದ ಪಾಲಾಗಿವೆ.
ನವದೆಹಲಿಯ ಡಾ. ಕರ್ಣಿ ಸಿಂಗ್ ಶೂಟಿಂಗ್ ರೇಂಜ್‌ನಲ್ಲಿ ನಡೆಯುತ್ತಿರುವ ವಿಶ್ವಕಪ್ನ 6ನೇ ದಿನ 23 ವರ್ಷದ ಚಿಂಕಿ ಯಾದವ್ 32 ಅಂಕ ಪಡೆಯುವ ಮೂಲಕ ಚಿನ್ನದ ಪದಕ ಪಡೆದರೆ, ಭಾರತದವರೇ ಆದ ರಾಹಿ ಸರ್ನೋಬತ್ 30 ಮತ್ತು ಮನು ಭಾಕರ್ 28 ಅಂಕ ಪಡೆದು ಕ್ರಮವಾಗಿ ಬೆಳ್ಳಿ ಮತ್ತು ಕಂಚು ಗೆದ್ದರು.
ಚಿಂಕಿ ಯಾದವ್ ಅವರ ಈ ಗೆಲುವಿನೊಂದಿಗೆ ಭಾರತದ ಚಿನ್ನದ ಬೇಟೆ 9ಕ್ಕೆ ಏರಿಕೆಯಾಗಿದೆ. ಒಟ್ಟಾರೆ ಪದಕಗಳ ಸಂಖ್ಯೆ 19ಕ್ಕೇರಿದೆ. ವಿಶೇಷವೆಂದರೆ ಈ ಮೂವರು ಮಹಿಳಾ ಶೂಟರ್ಗಳು ಟೋಕಿಯೋ ಒಲಿಂಪಿಕ್ಸ್ಗೆ ಅರ್ಹತೆ ಗಿಟ್ಟಿಸಿದ್ದಾರೆ.
ಇದನ್ನು ಓದಿ:ಐಎಸ್‌ಎಸ್‌ಎಫ್ ವಿಶ್ವಕಪ್.. 50 ಮೀ. ರೈಫಲ್ನಲ್ಲಿ ಐಶ್ವರ್ಯ ತೋಮರ್ಗೆ ಚಿನ್ನ
ಇದಕ್ಕೂ ಮೊದಲು ಐಶ್ವರ್ಯ ಪ್ರತಾಪ್ ಸಿಂಗ್ ತೋಮರ್ ವಿಶ್ವದ ನಂಬರ್ 1 ಹಂಗೆರಿಯ ಇಸ್ತ್ವಾನ್ ಪೆನಿ ಅವರನ್ನು ಸೋಲಿಸಿ ಭಾರತಕ್ಕೆ 8ನೇ ಚಿನ್ನದ ಪದಕ ತಂದುಕೊಟ್ಟಿದ್ದರು.