ಮ್ಯಾಂಚೆಸ್ಟರ್: 12 ವರ್ಷಗಳ ಬಳಿಕ ತಮ್ಮ ವೃತ್ತಿ ಜೀವನ ಆರಂಭಿಸಿದ ಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬ್ಗೆ ಮರಳಿರುವ ಪೋರ್ಚುಗಲ್ ಸ್ಟಾರ್ ಕ್ರಿಶ್ಚಿಯಾನೋ ರೊನಾಲ್ಡೊ, ಕ್ಲಬ್ ಕೋಚ್ ಸರ್ ಅಲೆಕ್ಸ್ ಫರ್ಗ್ಯುಸನ್ ತಮಗೆ ತಂದೆಯ ಸಮಾನರು ಎಂದು ಹೇಳಿದ್ದಾರೆ.
ಮ್ಯಾಂಚೆಸ್ಟರ್ ಯುನೈಟೆಡ್ಗೆ ತಾವೂ ಮರಳಲು ಸರ್ ಅಲೆಕ್ಸ್ ಪ್ರಮುಖ ಪಾತ್ರವಹಿಸಿದ್ದಾರೆ ಎಂದು ರೊನಾಲ್ಡೊ ಬಹಿರಂಗಪಡಿಸಿದ್ದಾರೆ. 2003 ರಿಂದ 2009ರವರೆಗೆ ಕ್ಲಬ್ ಪರ ಆಡಿರುವ ರೊನಾಲ್ಡೊ ಅಲೆಕ್ಸ್ ಮಾರ್ಗದರ್ಶನದಲ್ಲಿ 292 ಪಂದ್ಯಗಳಿಂದ 118 ಗೋಲು ಸಿಡಿಸಿದ್ದಾರೆ. ಜೊತೆಗೆ 3 ಬಾರಿ ಪ್ರೀಮಿಯರ್ ಲೀಗ್ ಗೆದ್ದ ತಂಡವನ್ನು ಮುನ್ನಡೆಸಿದ್ದರು.
ಎಲ್ಲರಿಗೂ ಗೊತ್ತಿರುವಂತೆ ನಾನು 18 ವರ್ಷದವನಾಗಿದ್ದಾಗ ಮ್ಯಾಂಚೆಸ್ಟರ್ ಕ್ಲಬ್ ಸೇರಿದ್ದೆ. ಅದರಲ್ಲಿ ಅಲೆಕ್ಸ್ ಫರ್ಗ್ಯುಸನ್ ಪ್ರಮುಖ ಕಾರಣರಾಗಿದ್ದರು. ಫುಟ್ಬಾಲ್ ಜೀವದಲ್ಲಿ ನನ್ನ ಪಾಲಿಗೆ ಸರ್ ಅಲೆಕ್ಸ್ ತಂದೆ ಸಮಾನರಾಗಿದ್ದಾರೆ. ಅವರು ನನಗೆ ಸಾಕಷ್ಟು ಸಹಾಯ ಮಾಡಿದ್ದಾರೆ, ತುಂಬಾ ಕಲಿಸಿದ್ದಾರೆ. ನಾನು ಇಂದು ಇಷ್ಟರ ಮಟ್ಟಿಗೆ ಬೆಳೆಯಲು ಅಲೆಕ್ಸ್ ಜೊತೆ ನಾನು ಹೊಂದಿರುವ ಬಾಂಧವ್ಯ ಕಾರಣ. ನಾವಿಬ್ಬರು ಯಾವಾಗಲೂ ಸಂಪರ್ಕದಲ್ಲಿರುತ್ತೇವೆ. ಅವರೊಬ್ಬ ಬಹಳ ಅಚ್ಚರಿಯ ವ್ಯಕ್ತಿತ್ವವುಳ್ಳವರು ಎಂದು ರೊನಾಲ್ಡೊ ಹೇಳಿದ್ದಾರೆ.
"ನಾನು ಅವರನ್ನು ನಿಜವಾಗಿಯೂ ತುಂಬಾ ಇಷ್ಟಪಡುತ್ತೇನೆ ಮತ್ತು ನಾನು ಮ್ಯಾಂಚೆಸ್ಟರ್ ಯುನೈಟೆಡ್‌ಗಾಗಿ ಸಹಿ ಮಾಡಲು ಮತ್ತು ನಾನು ಇಂದು ಈ ಸ್ಥಾನದಲ್ಲಿರಲು ಅವರೇ ಕಾರಣ" ಎಂದು ಪೋರ್ಚುಗಲ್ ತಂಡದ ನಾಯಕ ಹೇಳಿದ್ದಾರೆ.
ಮ್ಯಾಂಚೆಸ್ಟರ್ ಯುನೈಟೆಡ್ ಶುಕ್ರವಾರ ಜುವೆಂಟಸ್ ಕ್ಲಬ್ನೊಂದಿಗೆ 23 ಮಿಲಿಯನ್ ಯೂರೋ ಒಪ್ಪಂದ ಮಾಡಿಕೊಂಡು ರೊನಾಲ್ಡೊ ಅವರನ್ನು 2 ವರ್ಷಗಳ ಅವಧಿಗೆ ವರ್ಗಾವಣೆ ಮಾಡಿಕೊಂಡಿತ್ತು. ರೊನಾಲ್ಡೊ ಒಪ್ಪಂದದ ಪ್ರಕಾರ ಮ್ಯಾಂಚೆಸ್ಟರ್ ಕ್ಲಬ್ನಿಂದ ವಾರಕ್ಕೆ 4.85 ರೂಪಾಯಿಗಳನ್ನು ಪಡೆಯಲಿದ್ದಾರೆ.
ಇದನ್ನು ಓದಿ:ಸೇರಬೇಕಾದ ಸ್ಥಳಕ್ಕೆ ಹಿಂದಿರುಗಿದ್ದೇನೆ.. ಮಾತೃ ಕ್ಲಬ್ ಸೇರಿ ಸಂತಸ ಹಂಚಿಕೊಂಡ ರೊನಾಲ್ಡೊ