ಮ್ಯಾಂಚೆಸ್ಟರ್: ಪೋರ್ಚುಗಲ್ ಫುಟ್ಬಾಲ್ ಸ್ಟಾರ್ ಕ್ರಿಶ್ಚಿಯಾನೋ ರೊನಾಲ್ಡೊ 12 ವರ್ಷಗಳ ಬಳಿಕ ಇಂಗ್ಲೆಂಡ್ನ ಮ್ಯಾಂಚೆಸ್ಟರ್ ಯುನೈಟೆಡ್ಗೆ ಮರಳಿದ್ದಾರೆ ಎಂದು ಕ್ಲಬ್ ಅಧಿಕೃತವಾಗಿ ಘೋಷಿಸಿದೆ.
ಕಳೆದ ಮೂರು ವರ್ಷಗಳಿಂದ ರೊನಾಲ್ಡೊ ಇಟಲಿಯ ಜುವೆಂಟಸ್ ಕ್ಲಬ್ನಲ್ಲಿದ್ದರು. ಅವರ 3 ವರ್ಷಗಳ ಒಪ್ಪಂದ ಕೊನೆಗೊಂಡಿದ್ದರಿಂದ ಜುವೆಂಟಸ್ ದುಬಾರಿ ಒಪ್ಪಂದವನ್ನು ಮುಂದುವರಿಸುವುದಕ್ಕೆ ಮನಸ್ಸು ಮಾಡಲಿಲ್ಲ. ಜೊತೆಗೆ ರೊನಾಲ್ಡೊ ಕೂಡ ಇಂಗ್ಲೀಷ್ ಪ್ರೀಮಿಯರ್ ಲೀಗ್ನ ಮ್ಯಾಂಚೆಸ್ಟರ್ ಕ್ಲಬ್ ನೀಡಿದ ಆಫರ್ಗೆ ಒಪ್ಪಿಗೆ ಸೂಚಿಸಿದ್ದರು. 2003ರಲ್ಲಿ ಮ್ಯಾಂಚೆಸ್ಟರ್ ಕ್ಲಬ್ನಲ್ಲಿಯೇ ರೊನಾಲ್ಡೊ ತಮ್ಮ ವೃತ್ತಿಪರ ಜೀವನ ಆರಂಭಿಸಿದ್ದರು.
5 ಬಾರಿ ಬಲೋನ್ ಡಿ'ಓರ್ ಕ್ರಿಶ್ವಿಯಾನ್ ರೊನಾಲ್ಡೊ ತಮ್ಮ ವೃತ್ತಿ ಜೀವನದಲ್ಲಿ 5 UEFA ಚಾಂಪಿಯನ್ ಲೀಗ್ ಪ್ರಶಸ್ತಿ, 4 ಫಿಫಾ ಕ್ಲಬ್ ವಿಶ್ವಕಪ್, ಇಂಗ್ಲೆಂಡ್, ಸ್ಪೇನ್ ಮತ್ತು ಇಟಲಿ ಮತ್ತು ಯುರೋಪಿಯನ್ ಚಾಂಪಿಯನ್ಶಿಪ್ ಸೇರಿದಂತೆ 7 ಲೀಗ್ ಟೈಟಲ್ಸ್ ಸೇರಿದಂತೆ 30ಕ್ಕೂ ಹೆಚ್ಚು ಪ್ರಶಸ್ತಿ ಗೆದ್ದಿದ್ದಾರೆ.
ರೊನಾಲ್ಡೊ ಮ್ಯಾಂಚೆಸ್ಟರ್ ಯುನೈಟೆಡ್ನಂತರ 2009ರಿಂದ 2018ರವರೆಗೆ ರಿಯಲ್ ಮ್ಯಾಡ್ರಿಡ್ ಕ್ಲಬ್ನಲ್ಲಿ ಆಡಿದ್ದರು. ನಂತರ 2019ರಿಂದ 2021ರವರೆಗೆ ಜುವೆಂಟಸ್ ಕ್ಲಬ್ ಪರ ಆಡಿದ್ದರು. ಇದೀಗ ಜುವೆಂಟೆಸ್ನಿಂದ ಯುನೈಟೆಡ್ಗೆ ವರ್ಗಾವಣೆಗೊಂಡಿದ್ದಾರೆ.
2003-2007ರವರೆಗೆ ಮ್ಯಾಂಚೆಸ್ಟರ್ ಯುನೈಟೆಡ್ ತಂಡದ ಪರ ಆಡಿದ್ದ ರೊನಾಲ್ಡೊ, ಈ ಅವಧಿಯಲ್ಲಿ ತಂಡಕ್ಕೆ 8 ಟ್ರೋಫಿ ಗೆದ್ದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 292 ಪಂದ್ಯಗಳಿಂದ ರೊನಾಲ್ಡೊ 118 ಗೋಲುಗಳಿಸಿದ್ದರು.ಇದೀಗ ಮ್ಯಾಂಚೆಸ್ಟರ್ ತಂಡದ ಪರ ಮರಳಿ ಆಡಲು ರೊನಾಲ್ಡೊ ಪಡೆಯಲಿರುವ ಸಂಭಾವನೆ ಎಷ್ಟು ಎಂಬುದರ ಬಗ್ಗೆ ಅಧಿಕೃತ ಮಾಹಿತಿಗಳು ಹೊರಬಿದ್ದಿಲ್ಲ.