ಮುಂಬೈ: ಭಾರತ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್ ಹನುಮ ವಿಹಾರಿಯವರನ್ನು ತವರಿನಲ್ಲಿ ನಡೆಯುತ್ತಿರುವ ನ್ಯೂಜಿಲ್ಯಾಂಡ್ ಸರಣಿಗೆ ಆಯ್ಕೆ ಮಾಡದೇ, ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿರುವ ಭಾರತ ಎ ತಂಡಕ್ಕೆ ಏಕೆ ಆಯ್ಕೆ ಮಾಡಲಾಗಿದೆ. ತವರಿನಲ್ಲಿ ಅವರು ಆಡದಿರುವಂತಹ ತಪ್ಪೇನು ಮಾಡಿದ್ದಾರೆ ಎಂದು ಟೀಂ ಇಂಡಿಯಾ ಮಾಜಿ ಬ್ಯಾಟರ್ ಅಜಯ್ ಜಡೇಜಾ ಆಯ್ಕೆ ಸಮಿತಿ ವಿರುದ್ಧ ಹರಿಹಾಯ್ದಿದ್ದಾರೆ.
ನವೆಂಬರ್ 25ರಿಂದ ಕಾನ್ಪುರದಲ್ಲಿ ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡಗಳು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಭಾಗವಾಗಿ ತನ್ನ 2ನೇ ಸರಣಿಯನ್ನಾಡಲಿದೆ. ಆದರೆ ಈ ಟೆಸ್ಟ್ಗೆ ಆಯ್ಕೆ ಮಾಡುವಾಗ ವಿದೇಶದಲ್ಲಿ ಅವಕಾಶ ಸಿಕ್ಕಿದಾಗಲೆಲ್ಲಾ ಮಿಂಚಿರುವ ಆಲ್ರೌಂಡರ್ ಹನುಮ ವಿಹಾರಿಯವರನ್ನು ತಂಡದಿಂದ ಕೈಬಿಡಲಾಗಿದೆ. ಇದರ ಜೊತೆಗೆ ದಕ್ಷಿಣ ಆಫ್ರಿಕಾ ಎ ಪ್ರವಾಸಕ್ಕೂ ಅವರನ್ನು ಕಡೆಗಣಿಸಲಾಗಿತ್ತು. ಆದರೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾದ ನಂತರ ಅವರನ್ನು ಎ ತಂಡಕ್ಕೆ ಆಯ್ಕೆ ಮಾಡಲಾಗಿತ್ತು.
ಸೀನಿಯರ್ ತಂಡದಿಂದ ಕೈಬಿಟ್ಟು ಎ ತಂಡಕ್ಕೆ ಆಯ್ಕೆ ಮಾಡುವ ಅವಶ್ಯಕತೆಯಿತ್ತಾ?
"ವಿಹಾರಿ ಒಬ್ಬ ನತದೃಷ್ಟ, ಅವಕಾಶ ಸಿಕ್ಕಾಗ ಅವರು ಉತ್ತಮ ಪ್ರದರ್ಶನ ನೀಡಿದ್ದಾರೆ. ಕೆಲವು ಸಮಯಗಳಿಂದ ಭಾರತ ತಂಡದಲ್ಲಿದ್ದು, ತುಂಬಾ ಚೆನ್ನಾಗಿ ಆಡಿದ್ದಾರೆ. ಆದರೆ ಅವರೇನು ತಪ್ಪು ಮಾಡಿದ್ದಾರೆ? ಅವರೇಕೆ ಭಾರತ ಎ ಪ್ರವಾಸಕ್ಕೆ ಹೋಗಬೇಕು? ಅವರು ಏಕೆ ತವರಿನ ಟೆಸ್ಟ್ನಲ್ಲಿ ಆಡುತ್ತಿಲ್ಲ? ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಭಾರತ ತಂಡದಲ್ಲಿ ಆಡಿದ ಆಟಗಾರರನ್ನು ನೀಡುವ ಎ ತಂಡದ ಜೊತೆಗೆ ಪ್ರವಾಸಕ್ಕೆ ಕಳುಹಿಸಬೇಡಿ. ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದವರನ್ನು ಕೈಬಿಟ್ಟು ಹೊಸಬರಿಗೆ ತಂಡದಲ್ಲಿ ಅವಕಾಶ ನೀಡಿದಾಗ ಜನರ ಮನಸ್ಸಿನಲ್ಲಿ ತುಂಬಾ ಕೆಟ್ಟ ಭಾವನೆ ಮೂಡಬಹುದು" ಎಂದು ಜಡೇಜಾ ಕ್ರಿಕ್ಬಜ್ ಜೊತೆ ಮಾತನಾಡುವ ವೇಳೆ ತಿಳಿಸಿದ್ದಾರೆ.
ಹನುಮ ವಿಹಾರಿಯನ್ನು ಬಹುತೇಕ ವಿದೇಶಿ ಪ್ರವಾಸದ ವೇಳೆ ಮಾತ್ರ ಆಡಿಸಲಾಗುತ್ತಿದೆ. ಕಳೆದ ಆಸ್ಟ್ರೇಲಿಯಾ ಪ್ರವಾಸದ ವೇಳೆ ಹ್ಯಾಮ್ಸ್ಟಿಂಗ್ ನಡುವೆಯೂ ಸುದೀರ್ಘ ಇನ್ನಿಂಗ್ಸ್ ಸೋಲುವ ಪಂದ್ಯವನ್ನು ಡ್ರಾನಲ್ಲಿ ಅಂತ್ಯವಾಗುವಂತೆ ಮಾಡಿದ್ದರು. ಆದರೂ ಸ್ವದೇಶಿ ಟೆಸ್ಟ್ ಸರಣಿಯಲ್ಲಿ ಅವರನ್ನು ಮ್ಯಾನೇಜ್ಮೆಂಟ್ ತೀರಾ ಕಡೆಗಣಿಸುತ್ತಿರುವುದು ಕೆಲವು ಕ್ರಿಕೆಟ್ ತಜ್ಞರ ಆಸಮಾಧಾನಕ್ಕೆ ಕಾರಣವಾಗುತ್ತಿದೆ.
ಪ್ರಿಯಾಂಕ್ ಪಾಂಚಾಲ್ ನೇತೃತ್ವದ ಭಾರತ ಎ ತಂಡ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿದ್ದು, 4 ದಿನಗಳ 3 ಟೆಸ್ಟ್ ಪಂದ್ಯಗಳನ್ನಾಡಲಿದೆ.
ಇದನ್ನು ಓದಿ: ಶತಕದ ಬಗ್ಗೆ ಚಿಂತೆಯಿಲ್ಲ, ತಂಡಕ್ಕೆ ಅಗತ್ಯವಾದ ರನ್ಗಳಿಸುವುದರಲ್ಲೇ ನನಗೆ ತೃಪ್ತಿ: ಚೇತೇಶ್ವರ್ ಪೂಜಾರ