ಅಬುಧಾಬಿ: ರಾಸಿ ವ್ಯಾನ್ಡರ್ ಡಸೆನ್ ಅವರ ಅಬ್ಬರದ ಶತಕದ ನೆರೆವಿನಿಂದ ಪಾಕಿಸ್ತಾನ ತಂಡದ ವಿರುದ್ಧ ದಕ್ಷಿಣ ಆಫ್ರಿಕಾ ಕೊನೆಯ ಓವರ್ನಲ್ಲಿ ಗೆಲ್ಲಲು ಅಗತ್ಯವಿದ್ದ 19 ರನ್ ಸಿಡಿಸಿ ಅಭ್ಯಾಸ ಪಂದ್ಯವನ್ನು ಗೆದ್ದು ಕೊಂಡಿದೆ. ವಿಶ್ವಕಪ್ನ ತನ್ನ ಮೊದಲ ಪಂದ್ಯದಲ್ಲಿ ಭಾರತದ ವಿರುದ್ಧ ಗೆಲ್ಲಬೇಕೇಂಬ ಮಹದಾಸೆಯನ್ನಿಟ್ಟುಕೊಂಡಿರುವ ಬಾಬರ್ ಪಡೆಯ ಆತ್ಮವಿಶ್ವಾಸವನ್ನು ಈ ಸೋಲು ಕುಗ್ಗಿಸಿದೆ.
ಬುಧವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ಫಖರ್ ಜಮಾನ್(52) ಆಸಿಫ್ ಅಲಿ(32) ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 186 ರನ್ಗಳಿಸಿತ್ತು. ಈ ಬೃಹತ್ ಮೊತ್ತವನ್ನು ಕೊನೆಯ ಎಸೆತದಲ್ಲಿ ತಲುಪುವ ಮೂಲಕ ದಕ್ಷಿಣ ಆಫ್ರಿಕಾ ಗೆಲುವು ಸಾಧಿಸಿತು.
187 ರನ್ಗಳ ಬೃಹತ್ ಮೊತ್ತವನ್ನು ಹಿಂಬಾಲಿಸಿದ ದಕ್ಷಿಣ ಆಫ್ರಿಕಾ ಒಂದು ಹಂತದಲ್ಲಿ 15ಕ್ಕೆ 2 ವಿಕೆಟ್ ಕಳೆದುಕೊಂಡು ಸೋಲಿನತ್ತ ಮುಖ ಮಾಡಿತ್ತು. ಆದರೆ, 3ನೇ ವಿಕೆಟ್ಗೆ ನಾಯಕ ಬವುಮಾ ಮತ್ತು ಡಸೆನ್ 107 ರನ್ಗಳ ಜೊತೆಯಾಟ ನೀಡಿದರು. ಬವುಮಾ 42 ಎಸೆತಗಳಲ್ಲಿ 2 ಬೌಂಡರಿ ಮತ್ತು2 ಸಿಕ್ಸರ್ಗಳ ನೆರವಿನಿಂದ 46 ರನ್ಗಳಿಸಿ ವಿಕೆಟ್ ಒಪ್ಪಿಸಿದರು.
ಕೊನೆಯ 5 ಓವರ್ಗಳಲ್ಲಿ ಹರಿಣಗಳಿಗೆ ಗೆಲ್ಲಲು 64 ರನ್ಗಳ ಅಗತ್ಯವಿತ್ತು. ಸ್ಫೋಟಕ ಬ್ಯಾಟಿಂಗ್ ನಡೆಸಿದ ಡಸೆನ್ ಅಜೇಯ ಶತಕ ಸಿಡಿಸಿ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು. ಅವರು 51 ಎಸೆತಗಳಲ್ಲಿ 10 ಬೌಂಡರಿ ಮತ್ತು 4 ಸಿಕ್ಸರ್ಗಳ ಸಹಿತ ಅಜೇಯ 101 ರನ್ಗಳಿಸಿದರು.
ಪಾಕಿಸ್ತಾನ ತಂಡ ಅಕ್ಟೋಬರ್ 24 ರಂದು ಭಾರತ ತಂಡವನ್ನು ಎದುರಿಸಲಿದೆ. ಈಗಾಗಲೇ ವಿಶ್ವಕಪ್ನಲ್ಲಿ 5-0ಯಲ್ಲಿ ಹಿನ್ನಡೆ ಅನುಭವಿಸುತ್ತಿರುವ ಪಾಕಿಸ್ತಾನ ಈ ಬಾರಿಯಾದರೂ ಗೆಲ್ಲಬೇಕೆಂಬ ಮಹದಾಸೆ ಇಟ್ಟುಕೊಂಡಿದೆ. ಆದರೆ ಬೃಹತ್ ಮೊತ್ತ ದಾಖಲಿಸಿಯೂ ಸೋಲು ಕಂಡಿರುವುದು ಅವರ ಆತ್ಮವಿಶ್ವಾಸಕ್ಕೆ ದೊಡ್ಡ ಹೊಡೆತ ತಂದಿದೆ.
ಇತ್ತ ಭಾರತ ತಂಡ ತನ್ನ ಅಭ್ಯಾಸ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 7 ವಿಕೆಟ್ ಮತ್ತು ಆಸ್ಟ್ರೇಲಿಯಾ ವಿರುದ್ಧ 8 ವಿಕೆಟ್ಗಳಿಂದ ಗೆಲ್ಲುವ ಮೂಲಕ ಭರ್ಜರಿ ಸಿದ್ಧತೆ ಮಾಡಿಕೊಂಡಿದೆ.
ಇದನ್ನು ಓದಿ:ಭಾರತ ವಿಶ್ವಕಪ್ ಗೆಲ್ಲುವ ಪ್ರಬಲ ಸ್ಪರ್ಧಿ, ಬಲಶಾಲಿ ತಂಡ ಹೊಂದಿದೆ ಎಂದ ಸ್ಟೀವ್ ಸ್ಮಿತ್