ಲೀಡ್ಸ್: ಭಾರತ ತಂಡದ ಎರಡನೇ ಗೋಡೆ ಎಂದೇ ಖ್ಯಾತರಾಗಿರುವ ಚೇತೇಶ್ವರ್ ಪೂಜಾರ ಕಳೆದ ಕೆಲವು ಟೆಸ್ಟ್ಗಳಲ್ಲಿ ನೀರಸ ಪ್ರದರ್ಶನ ತೋರಿರುವುದರಿಂದ ಅವರ ವಿರುದ್ಧ ಸಾಕಷ್ಟು ಟೀಕೆಗಳು ಕೇಳಿಬರುತ್ತಿವೆ. ಆದರೆ ರೋಹಿತ್ ಶರ್ಮಾ ಮಾತ್ರ ಡ್ರೆಸ್ಸಿಂಗ್ ರೋಮಿನಲ್ಲಿ ಪೂಜಾರ ಫಾರ್ಮ್ ಬಗ್ಗೆ ಯಾವುದೇ ಸಮಸ್ಯೆಯಿಲ್ಲ ಎಂದು ಹೇಳಿದ್ದಾರೆ.
ಶುಕ್ರವಾರ ಅದ್ಭುತವಾಗಿ ಬ್ಯಾಟಿಂಗ್ ಮಾಡಿದ ಪೂಜಾರ 180 ಎಸೆತಗಳಲ್ಲಿ 91 ರನ್ಗಳಿಸಿ ತಮ್ಮ ವಿರುದ್ಧದ ಟೀಕೆ ಮಾಡುವವರ ಬಾಯಿ ಮುಚ್ಚಿಸಿದ್ದರು. ಯಾವಾಗಲೂ ನಿಧಾನಗತಿ ಬ್ಯಾಟಿಂಗ್ನಿಂದ ಟೀಕೆಗೊಳಗಾಗುತ್ತಿದ್ದ ಪೂಜಾರ 3ನೇ ದಿನ 15 ಬೌಂಡರಿ ಬಾರಿಸುವ ಮೂಲಕ ತಾವೂ ವೇಗವಾಗಿ ರನ್ಗಳಿಸಬಲ್ಲೆ ಎಂದು ತೋರಿಸಿದ್ದರು.
ಪ್ರಮಾಣಿಕವಾಗಿ ಹೇಳುತ್ತೇನೆ, ಇದುವರೆಗೂ ಪೂಜಾರ ಬ್ಯಾಟಿಂಗ್ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಕೇವಲ ಅದು ಹೊರಗೆ ನಡೆಯುತ್ತಿದೆ ಎಂದು ನಾನು ಭಾವಿಸುತ್ತೇನೆ. ನಮ್ಮ ಡ್ರೆಸ್ಸಿಂಗ್ ರೂಮಿನಲ್ಲಿ ಪೂಜಾರ ಫಾರ್ಮ್ ಕುರಿತು ಇದುವರೆಗೆ ಒಂದೇ ಒಂದು ಸಣ್ಣ ಮಾತುಕತೆ ಕೂಡ ನಡೆದಿಲ್ಲ. ಅವರ ಯಾವ ರೀತಿ ಗುಣಮಟ್ಟದ ಇನ್ನಿಂಗ್ಸ್ ಕಟ್ಟುತ್ತಾರೆ ಎಂಬುದು ನಮಗೆ ಗೊತ್ತಿದೆ. ಅವರ ಅನುಭವ ತಂಡಕ್ಕೆ ಏನನ್ನು ಒದಗಿಸಿಕೊಡಲಿದೆ ಎಂಬುದು ನಮಗೆ ಗೊತ್ತಿದೆ. ನೀವು ಅಂತಹ ವ್ಯಕ್ತಿಯನ್ನು ಹೊಂದಿದ್ದಾಗ, ಆತನ ಬಗ್ಗೆ ಹೆಚ್ಚು ಚರ್ಚೆ ಮಾಡುವ ಅಗತ್ಯವಿಲ್ಲ ಎಂದು ನಾನು ಭಾವಿಸುತ್ತೇನೆ ಎಂದು ರೋಹಿತ್ ವರ್ಚುವಲ್ ಮಾಧ್ಯಮ ಗೋಷ್ಠಿಯಲ್ಲಿ ಎಎನ್ಐ ಪ್ರಶ್ನೆಗೆ ಉತ್ತರಿಸಿದ್ದಾರೆ.
"ನೀವು ಅವರ ಈಗಿನ ಪ್ರದರ್ಶನದ ಬಗ್ಗೆ ಮಾತ್ರ ಮಾತನಾಡುತ್ತಿದ್ದೀರಾ, ಹೌದು ಆತ ಹೆಚ್ಚು ರನ್ಗಳಿಸುತ್ತಿಲ್ಲ, ಆದರೆ ಲಾರ್ಡ್ಸ್ ಟೆಸ್ಟ್ನಲ್ಲಿ ಅಜಿಂಕ್ಯ ಮತ್ತು ಅವರು ಎಂತಹ ನಿರ್ಣಾಯಕ ಜೊತೆಯಾಟ ನೀಡಿದರು ಎಂದು ನಾವು ನೋಡಿದ್ದೇವೆ. ಅಲ್ಲದೆ ಆಸ್ಟ್ರೇಲಿಯಾದಲ್ಲಿ ಅವರು ನೀಡಿದ ಪ್ರದರ್ಶನವನ್ನು ಎಂದಿಗೂ ಮರೆಯುವ ಆಗಿಲ್ಲ. ಆಸ್ಟ್ರೇಲಿಯಾದಲ್ಲಿ ಸರಣಿ ಗೆಲ್ಲಲು ಅವರು ಆಡಿದ ಎಲ್ಲ ಇನ್ನಿಂಗ್ಸ್ಗಳು ನಿರ್ಣಾಯಕವಾಗಿದ್ದವು. ನಮ್ಮ ನೆನಪಿನ ಶಕ್ತಿ ಚಿಕ್ಕದಾಗಿರುವುದರಿಂದ ಅವುಗಳನ್ನು ಮರೆಯಲು ಒಲುವು ತೋರುತ್ತೇವೆ" ಎಂದು ಪೂಜಾರ ಬೆನ್ನಿಗೆ ನಿಂತಿದ್ದಾರೆ.
ಇದನ್ನು ಓದಿ:ಇಂಗ್ಲೆಂಡ್ ವಿರುದ್ಧದ ಈ ಇನ್ನಿಂಗ್ಸ್ ಅಸ್ತಿತ್ವಕ್ಕಾಗಿ ಆಡಿಲ್ಲ: ರೋಹಿತ್ ಶರ್ಮಾ