ದುಬೈ: ಐಸಿಸಿ ಟಿ-20 ವಿಶ್ವಕಪ್ನ ಮೊದಲ ಪಂದ್ಯದಲ್ಲೇ ಪಾಕ್ ವಿರುದ್ಧ ಸೋಲು ಕಾಣುವ ಮೂಲಕ ಟೀಂ ಇಂಡಿಯಾ ನಿರಾಸೆಗೊಳಗಾಗಿದೆ. ಆದರೆ ಕ್ಯಾಪ್ಟನ್ ವಿರಾಟ್ ಕೊಹ್ಲಿ ನಿನ್ನೆಯ ಪಂದ್ಯದಲ್ಲಿ ವಿಶೇಷ ದಾಖಲೆ ನಿರ್ಮಾಣ ಮಾಡಿದ್ದಾರೆ.
ದುಬೈನ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಭಾರತ ಆರಂಭದಲ್ಲೇ ಆಘಾತಕ್ಕೊಳಗಾಯಿತು. ಮೇಲಿಂದ ಮೇಲೆ ವಿಕೆಟ್ ಪತನವಾಗ್ತಿದ್ರೂ ಮೈದಾನದಲ್ಲಿ ಕಚ್ಚಿ ನಿಂತು ಬ್ಯಾಟಿಂಗ್ ಪ್ರದರ್ಶನ ನೀಡಿದ ವಿರಾಟ್ ಅರ್ಧಶತಕ ಸಿಡಿಸಿ ಮಿಂಚಿದರು.
ದಾಖಲೆ ಬರೆದ ವಿರಾಟ್
49 ಎಸೆತಗಳಲ್ಲಿ 1 ಸಿಕ್ಸರ್, 5 ಬೌಂಡರಿ ಸೇರಿದಂತೆ 57ರನ್ಗಳಿಕೆ ಮಾಡಿದ ವಿರಾಟ್ ಕೊಹ್ಲಿ ವಿಶ್ವಕಪ್ನಲ್ಲಿ ಅತಿ ಹೆಚ್ಚು ಅರ್ಧಶತಕ ಸಿಡಿಸಿರುವ ದಾಖಲೆ ಬರೆದಿದ್ದಾರೆ. ಈ ಹಿಂದೆ ವೆಸ್ಟ್ ಇಂಡೀಸ್ನ ದೈತ್ಯ ಆಟಗಾರ ಕ್ರಿಸ್ ಗೇಲ್ ಹೆಸರಿನಲ್ಲಿ ಈ ಸಾಧನೆ ಇತ್ತು. ಗೇಲ್ ಇಲ್ಲಿಯವರೆಗೆ ವಿಶ್ವಕಪ್ನಲ್ಲಿ 9 ಸಲ ಅರ್ಧಶತಕ ಸಾಧನೆ ಮಾಡಿದ್ದಾರೆ. ಆದರೆ ಇದೀಗ ವಿರಾಟ್ 10ನೇ ಸಲ ಫಿಫ್ಟಿ ಹೊಡೆದು, ಹೊಸ ಇತಿಹಾಸ ನಿರ್ಮಿಸಿದರು.
ಉಳಿದಂತೆ ಶ್ರೀಲಂಕಾದ ಮಹೇಲಾ ಜಯವರ್ಧನೆ 7 ಸಲ ಟಿ-20 ವಿಶ್ವಕಪ್ನಲ್ಲಿ ಅರ್ಧಶತಕ ಬಾರಿಸಿದ್ದು, ತದನಂತರ ರೋಹಿತ್ ಶರ್ಮಾ 4ನೇ ಸ್ಥಾನದಲ್ಲಿದ್ದು 6 ಅರ್ಧಶತಕ ಹೊಡೆದಿದ್ದಾರೆ.
ಎದುರಾಳಿ ವಿರುದ್ಧ ಅತಿ ಹೆಚ್ಚಿನ ರನ್
ಟಿ-20 ವಿಶ್ವಕಪ್ನಲ್ಲಿ ವಿರಾಟ್ ಕೊಹ್ಲಿ ಪಾಕಿಸ್ತಾನದ ವಿರುದ್ಧ 226ರನ್ಗಳಿಕೆ ಮಾಡಿದ್ದು, ಕ್ರಿಸ್ ಗೇಲ್ ಆಸ್ಟ್ರೇಲಿಯಾ ವಿರುದ್ಧ 274ರನ್ಗಳಿಸಿದ್ದಾರೆ. ಉಳಿದಂತೆ ದಿಲ್ಷಾನ್ ವೆಸ್ಟ್ ಇಂಡೀಸ್ ವಿರುದ್ಧ 238ರನ್ ಹಾಗೂ ಜಯವರ್ಧನೆ ನ್ಯೂಜಿಲ್ಯಾಂಡ್ ವಿರುದ್ಧ 226ರನ್ಗಳಿಸಿದ್ದಾರೆ.
ಮೊದಲ ಸಲ ವಿಕೆಟ್ ಒಪ್ಪಿಸಿದ ವಿರಾಟ್
ಐಸಿಸಿ ಟಿ-20 ವಿಶ್ವಕಪ್ನಲ್ಲಿ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಪಾಕ್ ವಿರುದ್ಧ ಮೊದಲ ಸಲ ವಿಕೆಟ್ ಒಪ್ಪಿಸಿದ್ದಾರೆ. ಈ ಹಿಂದೆ 2012ರಲ್ಲಿ ಅಜೇಯ 78, 2014ರಲ್ಲಿ ಅಜೇಯ 36, 2016ರಲ್ಲಿ ಅಜೇಯ 55ರನ್ಗಳಿಕೆ ಮಾಡಿದ್ದರು. ಆದರೆ ನಿನ್ನೆಯ ಪಂದ್ಯದಲ್ಲಿ 57ರನ್ಗಳಿಕೆ ಮಾಡಿ ಶಾಹಿನ್ ಆಫ್ರಿದಿ ಓವರ್ನಲ್ಲಿ ವಿಕೆಟ್ ಒಪ್ಪಿಸಿದರು.