ಸಿಡ್ನಿ(ಆಸ್ಟ್ರೇಲಿಯಾ): ಟಿ20 ವಿಶ್ವಕಪ್ನಲ್ಲಿಂದು ನಡೆದ ಭಾರತ ಮತ್ತು ನೆದರ್ಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಹಲವು ದಾಖಲೆಗಳು ರಚನೆಯಾಗಿವೆ. ಅರ್ಧಶತಕ ಸಿಡಿಸಿದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್ ವೈಯಕ್ತಿಕ ದಾಖಲೆ ಸರಿಪಡಿಸಿಕೊಂಡರು. ಅಲ್ಲದೇ ತಂಡವೂ ಕೂಡ ವಿಶೇಷ ಗೌರವಕ್ಕೆ ಭಾಜನವಾಯಿತು.
ಕೊಹ್ಲಿ ಅರ್ಧಶತಕ, ಟಾಪ್ ಆಟಗಾರ: ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ಸತತ 2 ಅರ್ಧಶತಕ ಸಿಡಿಸಿದರು. ಒಟ್ಟಾರೆ ಅವರು 12 ಫಿಫ್ಟಿ ಬಾರಿಸಿ ಈ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದ್ದಾರೆ. ರೋಹಿತ್ ಶರ್ಮಾ ಐಸಿಸಿ ಟೂರ್ನಿಯಲ್ಲಿ 9 ನೇ ಅರ್ಧಶತಕವನ್ನು ತಮ್ಮ ಬತ್ತಳಿಕೆಗೆ ಸೇರಿಸಿದರು. ಈ ಮೂಲಕ ಜಂಟಿ 2ನೇ ಸ್ಥಾನ ಪಡೆದರು. ವೆಸ್ಟ್ ಇಂಡೀಸ್ನ ಸಿಡಿಲಮರಿ ಕ್ರಿಸ್ ಗೇಲ್ ಕೂಡ 9 ಅರ್ಧಶತಕ ಸಾಧನೆ ಮಾಡಿದ್ದಾರೆ.
ಭಾರತ ತ್ರಿವಳಿ ಅರ್ಧಶತಕಗಳ ದಾಖಲೆ: ನೆದರ್ಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತದ ಮೂವರು ಬ್ಯಾಟರ್ಗಳು ಅರ್ಧಶತಕ ದಾಖಲಿಸಿದರು. ವಿಶ್ವಕಪ್‌ನಲ್ಲಿ ಎರಡನೇ ಬಾರಿಗೆ ಈ ದಾಖಲೆಯನ್ನು ಭಾರತೀಯರು ಬರೆದರು. ಇದಕ್ಕೂ ಮೊದಲು 2007-08 ರಲ್ಲಿ ಇಂಗ್ಲೆಂಡ್ ವಿರುದ್ಧ ಮೂವರು ಫಿಫ್ಟಿ ಹೊಡೆದ ದಾಖಲೆ ಮಾಡಿದ್ದರು. ಇದೀಗ 2ನೇ ಬಾರಿಗೆ ಒಂದೇ ಪಂದ್ಯದಲ್ಲಿ ಮೂವರು ಆಟಗಾರರು ಅರ್ಧಶತಕ ಗಳಿಸಿದ್ದು, ಮೊದಲ ತಂಡವಾಗಿದೆ. ದಕ್ಷಿಣ ಆಫ್ರಿಕಾ ಒಂದು ಬಾರಿ ಈ ರೆಕಾರ್ಡ್ ಮಾಡಿದೆ.
ಅತಿಹೆಚ್ಚು ಸಿಕ್ಸರ್, ರೋಹಿತ್ ದ್ವಿತೀಯ: ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ದಾಖಲೆ ಕ್ರಿಸ್ ಗೇಲ್ ಹೆಸರಿನಲ್ಲೇ ಉಳಿದಿದೆ. ಗೇಲ್ ವಿಶ್ವ ಕ್ರಿಕೆಟ್ನಲ್ಲಿ ಈವರೆಗೂ 63 ಸಿಕ್ಸರ್ ಬಾರಿಸಿದ್ದಾರೆ. ಇಂದಿನ ಪಂದ್ಯದಲ್ಲಿ ರೋಹಿತ್ ಶರ್ಮಾ 3 ಸಿಕ್ಸರ್ ಹೊಡೆದಿದ್ದು, ಒಟ್ಟಾರೆ 34 ಸಿಕ್ಸರ್ಗಳು ಇವರ ಹೆಸರಲ್ಲಿವೆ. 33 ಸಿಕ್ಸರ್ ಮೂಲಕ ಎರಡನೇ ಸ್ಥಾನದಲ್ಲಿ ಭಾರತದ ಮಾಜಿ ಆಟಗಾರ ಯುವರಾಜ್ ಸಿಂಗ್ರನ್ನು ಹಿಂದಿಕ್ಕಿದ್ದಾರೆ. ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ 30 ಸಿಕ್ಸರ್ಗಳಿಂದ 4 ರಲ್ಲಿದ್ದಾರೆ.
ಪಾಕಿಸ್ತಾನ ಹಿಂದಿಕ್ಕಿದ ಭಾರತ: ವಿಶ್ವಕಪ್‌ನಲ್ಲಿ ಭಾರತ ಮತ್ತೊಂದು ಅರ್ಧಶತಕಗಳ ದಾಖಲೆ ಬರೆಯಿತು. ವಿಶ್ವಟೂರ್ನಿಯಲ್ಲಿ 37 ಅರ್ಧಶತಕಗಳನ್ನು ಬಾರಿಸಿದ ತಂಡವಾಗಿ ಹೊರಹೊಮ್ಮಿತು. 34 ಫಿಫ್ಟಿ ಮಾಡಿರುವ ಪಾಕಿಸ್ತಾನ 2 ಸ್ಥಾನಕ್ಕೆ ಕುಸಿಯಿತು. ಶ್ರೀಲಂಕಾ 33 ಫಿಫ್ಟಿ ಬಾರಿಸಿದೆ.
ಈ ಪಂದ್ಯದಲ್ಲಿ ನೆದರ್ಲೆಂಡ್ಸ್ ತಂಡ ಉತ್ತಮವಾಗಿ ಬೌಲಿಂಗ್ ಮಾಡಿತು. ಎಲ್ಲಾ ಬೌಲರ್‌ಗಳು ಕೇವಲ 4 ಹೆಚ್ಚುವರಿ ರನ್‌ಗಳನ್ನು ಮಾತ್ರ ಬಿಟ್ಟುಕೊಟ್ಟರು. ಇದರಲ್ಲಿ 3 ವೈಡ್‌ಗಳು ಮತ್ತು 1 ಲೆಗ್ ಬೈ ಇದೆ. ಯಾವುದೇ ಬೌಲರ್ ಒಂದೇ ಒಂದು ನೋ ಬಾಲ್ ಹಾಕಿಲ್ಲ. ಭಾರತವೂ ಕೂಡ 6 ಹೆಚ್ಚುವರಿ ರನ್ ನೀಡಿದೆ. ಇದರಲ್ಲಿ 2 ಲೆಗ್ಬೈ, 3 ವೈಡ್ ಮತ್ತು 1 ನೋಬಾಲ್ ಇತ್ತು.
ಇದನ್ನೂ ಓದಿ: ಟಿ20 ವಿಶ್ವಕಪ್: ನೆದರ್ಲ್ಯಾಂಡ್ ವಿರುದ್ಧ ಭಾರತಕ್ಕೆ 56 ರನ್ ಜಯ; ಬಿ ಗುಂಪಿನಲ್ಲಿ ಅಗ್ರ ಸ್ಥಾನ