ಮುಂಬೈ : ಭಾರತ ತಂಡದ ಉದಯೋನ್ಮುಖ ಬ್ಯಾಟ್ಸ್ಮನ್ ಸೂರ್ಯಕುಮಾರ್ ಯಾದವ್ ತಮ್ಮ ನೆಚ್ಚಿನ ಸಾರ್ವಕಾಲಿಕ ಐಪಿಎಲ್ ತಂಡವನ್ನು ಪ್ರಕಟಿಸಿದ್ದು, ಇದರಲ್ಲಿ ಸಿಎಸ್ಕೆ ನಾಯಕ ಎಂಎಸ್ ಧೋನಿ ಮತ್ತು ಹೈದರಾಬಾದ್ ತಂಡದ ಮಾಜಿ ನಾಯಕ ಡೇವಿಡ್ ವಾರ್ನರ್ ಅವರನ್ನು ತಮ್ಮ 11 ಆಟಗಾರರ ಪಟ್ಟಿಯಲ್ಲಿ ಆಯ್ಕೆ ಮಾಡದಿರುವುದಕ್ಕೆ ಅಭಿಮಾನಿಗಳು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಮುಂಬೈ ಇಂಡಿಯನ್ಸ್ ಕಳೆದ ಎರಡು ಆವೃತ್ತಿಗಳಲ್ಲಿ ಐಪಿಎಲ್ ಟ್ರೋಫಿಯನ್ನು ಎತ್ತಿ ಹಿಡಿದಿದೆ. ಆದರೆ, ಪ್ರತಿ ಆವೃತ್ತಿಯ ಗೆಲುವಿನ ಸರಾಸರಿಯಲ್ಲಿ ಹಿಂದೆ ಬಿದ್ದಿದೆ. ಚೆನ್ನೈ ಸೂಪರ್ ಕಿಂಗ್ಸ್ ಗೆಲುವಿನ ಸರಾಸರಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಇದಕ್ಕೆಲ್ಲಾ ಕಾರಣವೆಂದರೆ ಎಂಎಸ್ ಧೋನಿ ನಾಯಕತ್ವ.
ಧೋನಿ ಕೇವಲ ಶ್ರೇಷ್ಠ ನಾಯಕನಲ್ಲದೆ, ಅತ್ಯುತ್ತಮ ಫಿನಿಶರ್ ಕೂಡ ಆಗಿದ್ದಾರೆ. ಆದರೆ, ಮುಂಬೈ ಇಂಡಿಯನ್ಸ್ ತಂಡದ ಬ್ಯಾಟ್ಸ್ಮನ್ ಸೂರ್ಯಕುಮಾರ್ ಯಾದವ್ ತಮ್ಮ ನೆಚ್ಚಿನ ಸಾರ್ವಕಾಲಿಕ ಐಪಿಎಲ್ ತಂಡದಲ್ಲಿ ಧೋನಿಗೆ ಅವಕಾಶ ನೀಡದಿರುವುದು ಆಶ್ಚರ್ಯ ಮೂಡಿಸಿದೆ.
ಕ್ರಿಕ್ಬಜ್ನಲ್ಲಿ ಹರ್ಷ ಬೋಗ್ಲೆ ಅವರೊಡನೆ ನಡೆದ ಸಂಭಾಷಣೆಯ ವೇಳೆ ಸೂರ್ಯಕುಮಾರ್ ಯಾದವ್ ತಮ್ಮ ನೆಚ್ಚಿನ ಐಪಿಎಲ್ ಇಲೆವೆನ್ ಆಯ್ಕೆ ಮಾಡಿದ್ದಾರೆ. ತಮ್ಮನ್ನು ಮತ್ತು ಮುಂಬೈ ಇಂಡಿಯನ್ಸ್ನ ನಾಲ್ಕು ಆಟಗಾರರನ್ನು ಒಳಗೊಂಡಿರಬೇಕೆಂಬ ಷರತ್ತಿನ ಮೇಲೆ ಈ ತಂಡವನ್ನು ಸೂರ್ಯ ಆಯ್ಕೆ ಮಾಡಿದ್ದಾರೆ.
ಸೂರ್ಯ ಕುಮಾರ್ ಆರಂಭಿಕರಾಗಿ ತಮ್ಮ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ರಾಜಸ್ಥಾನ್ ರಾಯಲ್ಸ್ ತಂಡದ ಆರಂಭಿಕ ಬ್ಯಾಟ್ಸ್ಮನ್ ಜೋಸ್ ಬಟ್ಲರ್ರನ್ನು ಆಯ್ಕೆ ಮಾಡಿದ್ದು, ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ಅವರಿಗೆ ನೀಡಿದ್ದಾರೆ. ಇನ್ನು, ಆರ್ಸಿಬಿ ನಾಯಕ ಕೊಹ್ಲಿಗೆ 3, ತಮ್ಮನ್ನು 4ನೇ ಸ್ಥಾನಕ್ಕೆ ಆರಿಸಿದ್ದಾರೆ.
5ನೇ ಕ್ರಮಾಂಕಕ್ಕೆ ಆರ್ಸಿಬಿ ಆಪತ್ಬಾಂಧವ ಎಬಿ ಡಿವಿಲಿಯರ್ಸ್, ಆಲ್ರೌಂಡರ್ಗಳ ಸ್ಥಾನಕ್ಕೆ ಹಾರ್ದಿಕ್ ಪಾಂಡ್ಯ ಮತ್ತು ಕೆಕೆಆರ್ನ ಆ್ಯಂಡ್ರೆ ರಸೆಲ್ ಮತ್ತು ಸಿಎಸ್ಕೆ ತಂಡದ ರವೀಂದ್ರ ಜಡೇಜಾರನ್ನು, ಬೌಲರ್ಗಳಾಗಿ ರಶೀದ್ ಖಾನ್, ಜಸ್ಪ್ರೀತ್ ಬುಮ್ರಾ ಮತ್ತು ಪಂಜಾಬ್ ಕಿಂಗ್ಸ್ ತಂಡದ ಮೊಹಮ್ಮದ್ ಶಮಿ ಅವರನ್ನು ಆಯ್ಕೆ ಮಾಡಿದ್ದಾರೆ.
ಸೂರ್ಯ ಕುಮಾರ್ ಯಾದವ್ ನೆಚ್ಚಿನ ಐಪಿಎಲ್ ತಂಡ
ಜೋಸ್ ಬಟ್ಲರ್(ವಿಕೆಟ್ ಕೀಪರ್), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಎಬಿ ಡಿವಿಲಿಯರ್ಸ್, ಹಾರ್ದಿಕ್ ಪಾಂಡ್ಯ, ಆಂಡ್ರೆ ರಸೆಲ್, ರವೀಂದ್ರ ಜಡೇಜಾ, ರಶೀದ್ ಖಾನ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ.
ಇದನ್ನು ಓದಿ:ಶ್ರೀಲಂಕಾ ಭಾರತ ಸರಣಿಗೆ ಹಿನ್ನಡೆ : ಬಯೋಬಬಲ್ನಲ್ಲಿದ್ದ ಲಂಕಾ ಆಟಗಾರನಿಗೂ ಕೊರೊನಾ