ಮುಂಬೈ: ಏಕದಿನ ನಾಯಕತ್ವದಿಂದ ವಿರಾಟ್ ಕೊಹ್ಲಿ ಅವರನ್ನ ಕೆಳಗಿಳಿಸಿದ ಬಳಿಕ ಬಿಸಿಸಿಐ ಅಧ್ಯಕ್ಷ ಹಾಗೂ ಡೆಲ್ಲಿ ಡ್ಯಾಶರ್ ವಿರಾಟ್ ಮಧ್ಯೆ ಭಿನ್ನಾಭಿಪ್ರಾಯ ಉಂಟಾಗಿತ್ತು. ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳುವುದಕ್ಕೂ ಮುಂಚಿತವಾಗಿ ಮಾಧ್ಯಮಗೋಷ್ಟಿ ನಡೆಸಿದ್ದ ವಿರಾಟ್ ಕೊಹ್ಲಿ ಆಕ್ರೋಶ ಸಹ ಹೊರಹಾಕಿದ್ದರು.
ಟಿ-20 ನಾಯಕತ್ವ ತ್ಯಜಿಸುವುದು ಬೇಡ ಎಂದು ನಾನು ವೈಯಕ್ತಿಕವಾಗಿ ಕರೆ ಮಾಡಿ ಮನವಿ ಮಾಡಿದ್ದೆ ಎಂದಿದ್ದ ಬಿಸಿಸಿಐ ಅಧ್ಯಕ್ಷ ಗಂಗೂಲಿ ಅವರ ಹೇಳಿಕೆಯನ್ನ ಅಲ್ಲಗೆಳೆದಿದ್ದ ಕೊಹ್ಲಿ, ನನಗೆ ಯಾರೂ ನಾಯಕತ್ವ ತ್ಯಜಿಸದಂತೆ ಹೇಳಿರಲಿಲ್ಲ. ನಾನು ತೆಗೆದುಕೊಂಡಿರುವ ನಿರ್ಧಾರವನ್ನು ಯಾರೊಬ್ಬರು ಪರಿಶೀಲಿಸಿ ಎಂದು ಹೇಳಲಿಲ್ಲ, ಅದನ್ನು ಸ್ವೀಕರಿಸಿದ ನಂತರ, ನನ್ನ ನಿರ್ಧಾರ ಸರಿಯಾದ ದಿಕ್ಕಿನಲ್ಲಿದೆ ಎಂದಿದ್ದರು.
ಈ ವಿಚಾರ ಮಾಧ್ಯಮಗಳಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದ ಬಿಸಿಸಿಐ ಬಾಸ್ ಗಂಗೂಲಿ ಇದನ್ನ ಭಾರತೀಯ ಕ್ರಿಕೆಟ್ ಮಂಡಳಿ ನೋಡಿಕೊಳ್ಳಲಿದೆ ಎಂದು ಹೇಳಿ ಸುಮ್ಮನಾಗಿದ್ದರು. ಆದರೆ, ಶನಿವಾರ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ವೇಳೆ ಗಂಗೂಲಿ ಈ ಬಗ್ಗೆ ಮಾತನಾಡಿದ್ದಾರೆ.
ಕಾರ್ಯಕ್ರಮದಲ್ಲಿ ಗಂಗೂಲಿ ಹೇಳಿದ್ದೇನು?
ಗುರುಗ್ರಾಮ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವೇಳೆ ಗಂಗೂಲಿ ಈ ವಿಚಾರ ಮಾತನಾಡಿದ್ದಾರೆ. ಓರ್ವ ಕ್ರಿಕೆಟಿಗನಾಗಿ ವಿರಾಟ್ ಕೊಹ್ಲಿ ವರ್ತನೆ ನನಗೆ ಇಷ್ಟವಾಗಿದೆ. ಆದರೆ, ಅವರು ತುಂಬಾ ಜಗಳವಾಡುತ್ತಾರೆ ಎಂದು ತಿಳಿಸಿದ್ದಾರೆ. ಜೊತೆಗೆ ವಿರಾಟ್ ಕೊಹ್ಲಿ ನೀಡಿರುವ ಹೇಳಿಕೆ ಬಗ್ಗೆ ತಾವು ಹೆಚ್ಚು ಮಾತನಾಡುವುದಿಲ್ಲ. ಈ ವಿಚಾರವನ್ನ ಮುಂದುವರೆಸುವುದು ಬೇಡ ಎಂದು ತಿಳಿಸಿದ್ದಾರೆ.