ನವದೆಹಲಿ: ಪ್ರಸ್ತುತ ವಿರಾಟ್ ಕೊಹ್ಲಿ ಹೇಳಿಕೆಯಿಂದ ಭಾರತೀಯ ಕ್ರಿಕೆಟ್ನಲ್ಲಿ ಉಂಟಾಗಿರುವ ವಿವಾದವನ್ನು ಕೊನೆಗಾಣಿಸಲು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸೂಕ್ತ ವ್ಯಕ್ತಿ ಎಂದು ಲೆಜೆಂಡರಿ ಬ್ಯಾಟರ್ ಸುನೀಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.
ವಿರಾಟ್ ಕೊಹ್ಲಿ ಟಿ-20 ನಾಯಕತ್ವ ತ್ಯಜಿಸಿದ ಒಂದೆರಡು ದಿನದ ನಂತರ ಗಂಗೂಲಿ ತಾವೂ ಕೊಹ್ಲಿ ನಾಯಕತ್ವ ತ್ಯಜಿಸುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ಕೇಳಿಕೊಂಡಿದ್ದೆ ಎಂದಿದ್ದರು. ಆದರೆ, ಈ ಹೇಳಿಕೆಯನ್ನು ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ವಿರಾಟ್ ಅಲ್ಲಗಳೆದಿದ್ದು, ಯಾರೊಬ್ಬರು ತಮ್ಮ ನಿರ್ಧಾರವನ್ನು ಹಿಂತೆಗೆದುಕೊಳ್ಳುವಂತೆ ಹೇಳಿರಲಿಲ್ಲ ಎಂದು ಹೇಳುವ ಮೂಲಕ ವಿವಾದಕ್ಕೆ ದಾರಿ ಮಾಡಿಕೊಟ್ಟಿದ್ದರು.
" ಕೊಹ್ಲಿಯ ಹೇಳಿಕೆಯಿಂದಾಗಿ ಬಿಸಿಸಿಐನಿಂದ ಯಾವುದೇ ಸ್ಪಷ್ಟ ಚಿತ್ರಣ ಮೂಡಿ ಬರುವುದಿಲ್ಲ. ಆದರೆ, ವಿರಾಟ್ ಕೊಹ್ಲಿಗೆ ಅಂತಹ ಸಂದೇಶವನ್ನು ರವಾನಿಸಿದ್ದರು ವ್ಯಕ್ತಿ ಯಾರು ಎಂಬುದು ಇಲ್ಲಿ ಮುಖ್ಯ ವಿಷಯ. ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷರು ಮತ್ತು ಈ ಹಂತದಲ್ಲಿ ಏಕೆ ಗೊಂದಲ ಉಂಟಾಗಿದೆ ಎಂಬುವುದನ್ನ ಅವರೇ ಹೇಳಬೇಕಾದ ಅಗತ್ಯವಿದೆ. ಭಾರತ ತಂಡದ ನಾಯಕನ ಹೇಳಿಕೆಯಿಂದ ಉಂಟಾಗಿರುವ ಗೊಂದಲವನ್ನು ಸೂಕ್ತ ಉತ್ತರ ನೀಡಲು ಗಂಗೂಲಿ ಒಬ್ಬರೇ ಉತ್ತಮ ವ್ಯಕ್ತಿ " ಎಂದು ಸುನೀಲ್ ಗವಾಸ್ಕರ್ ಇಂಡಿಯಾ ಟುಡೇಗೆ ಹೇಳಿದ್ದಾರೆ.
"ಇಲ್ಲಿ ಉಂಟಾಗಿರುವ ವಿವಾದವಾದರೂ ಏನು, ನಾವು ಈಗ ನಿಮ್ಮನ್ನು ಏಕದಿನ ನಾಯಕತ್ವಕ್ಕೆ ಪರಿಗಣಿಸುತ್ತಿಲ್ಲ ಎಂದು ಆಯ್ಕೆ ಸಮಿತಿಯ ಅಧ್ಯಕ್ಷರು ಅವರಿಗೆ(ಕೊಹ್ಲಿಗೆ) ಸ್ಪಷ್ಟವಾಗಿ ಹೇಳಿದಾಗ, ಅದು ಸಂಪೂರ್ಣವಾಗಿ ಉತ್ತಮವಾಗಿರುತ್ತದೆ. ಆಯ್ಕೆ ಸಮಿತಿಯ ಸಭೆಗಳಲ್ಲಿ ಆಯ್ಕೆದಾರರಿಗೆ ಸಂಪೂರ್ಣ ಅಧಿಕಾರವಿರುತ್ತದೆ. ಇಲ್ಲಿ ನಾಯಕ ಮತ ಚಲಾಯಿಸದ ಸದಸ್ಯನಷ್ಟೇ" ಎಂದು ಗವಾಸ್ಕರ್ ತಿಳಿಸಿದ್ದಾರೆ..
"ಆದರೆ ಇಲ್ಲಿ ಸ್ಪಷ್ಟವಾಗಿ ಸಂವಹನ ನಡೆಸಿದ್ದರೆ ಯಾವುದೇ ಗೊಂದಲ ಉಂಟಾಗುತ್ತಿರಲಿಲ್ಲ. ಈಗಲೂ ಕಾಲ ಮಿಂಚಿಲ್ಲ, ಬಿಸಿಸಿಐ ಇನ್ನು ಮುಂದೆಯಾದರೂ ಇಂತಹ ಗೊಂದಲ ಉಂಟಾಗದಂತೆ ಉತ್ತಮ ಸಂವಹನ ಚಾನೆಲ್ ಮೂಲಕ ಸ್ಪಷ್ಟತೆ ನೀಡುವುದನ್ನ ಆರಂಭಿಸಬೇಕು. ಅದರಿಂದ ವಿವಾದಗಳು ಉಂಟಾಗುವುದಿಲ್ಲ.
ಈಗಿನಿಂದಲೇ ಆಯ್ಕೆ ಸಮಿತಿಯ ಮುಖ್ಯಸ್ಥರೇ ಮುಂದೆ ಬಂದು ಇವರನ್ನೇ ಆಯ್ಕೆ ಮಾಡಿದ್ದೇವೆ ಅಥವಾ ಅವರನ್ನೇಕೆ ಕೈ ಬಿಟ್ಟಿದ್ದೇವೆ ಎಂಬುದರ ಕುರಿತು ಮಾತನಾಡಬೇಕು. ಒಂದು ವೇಳೆ ಅದರ ಅಗತ್ಯ ಇಲ್ಲವಾದರೆ, ಪತ್ರಿಕಾ ಹೇಳಿಕೆಯನ್ನಾದರೂ ನೀಡಬೇಕು. ಹಾಗೆ ಮಾಡಿದರೆ ವಿಷಯಗಳು ಸುಲಭವಾಗಲಿವೆ " ಎಂದು ಗವಾಸ್ಕರ್ ಬಿಸಿಸಿಐಗೆ ಸಲಹೆ ನೀಡಿದ್ದಾರೆ.
ಇದನ್ನೂ ಓದಿ:ಮಹತ್ವದ ಪ್ರವಾಸದ ಸಂದರ್ಭದಲ್ಲಿ ಕಿತ್ತಾಟ ಒಳ್ಳೆಯದಲ್ಲ, ಕ್ರಿಕೆಟ್ ಕಡೆಗೆ ಗಮನ ನೀಡಿ: ಕೊಹ್ಲಿಗೆ ಕಪಿಲ್ ಬುದ್ಧಿಮಾತು