ನವದೆಹಲಿ: ಭಾರತ ತಂಡದ ಸ್ಪಿನ್ನರ್ ಕುಲ್ದೀಪ್ ಯಾದವ್ ಮಾಜಿ ನಾಯಕ ಎಂಎಸ್ ಧೋನಿಯವರ ಮಾರ್ಗದರ್ಶನವನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ.
ಕುಲ್ದೀಪ್ ಯಾದವ್ 2019ರ ನಂತರ ಸೀಮಿತ ಓವರ್ಗಳ ಪಂದ್ಯಗಳಲ್ಲಿ ಬೆರಳೆಣಿಕೆಯಷ್ಟು ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ತಂಡದಲ್ಲಿ ನಿರಂತವಾಗಿ ಅವಕಾಶ ಪಡೆಯುವಲ್ಲಿ ವಿಫಲರಾಗುತ್ತಿದ್ದಾರೆ. ಧೋನಿ ಅನುಪಸ್ಥಿತಿಯಲ್ಲಿ ಅವರು ವಿಕೆಟ್ ಪಡೆಯುವಲ್ಲಿ ಕೂಡ ವಿಫಲರಾಗುತ್ತಿದ್ದಾರೆ.
" ಕೆಲವೊಂದು ಬಾರಿ ನಾನು ಸಾಕಷ್ಟು ಅನುಭವಿಯಾಗಿದ್ದ ಧೋನಿ ಅವರ ಸಲಹೆಗಳನ್ನು ಕಳೆದುಕೊಳ್ಳುತ್ತಿದ್ದೇನೆ. ಅವರ ವಿಕೆಟ್‌ನ ಹಿಂದೆ ನಿಂತು ನನಗೆ ಸಲಹೆಗಳನ್ನು ನೀಡುತ್ತಿದ್ದರು. ನಾವು ಅದನ್ನು ಇಂದು ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಈಗ ರಿಷಭ್ ಪಂತ್ ಇದ್ದಾರೆ, ಅವರು ಹೆಚ್ಚು ಪಂದ್ಯಗಳನ್ನು ಆಡಿದರೆ, ಅವರೂ ಕೂಡ ಭವಿಷ್ಯದಲ್ಲಿ ಬೌಲರ್ಗಳಿಗೆ ಸಲಹೆಗಳನ್ನು ನೀಡಲಿದ್ದಾರೆ" ಎಂದು ಕುಲ್ದೀಪ್ ಯಾದವ್ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
"ಮಹಿ ಭಾಯ್ ಇದ್ದಾಗ ನಾನು ಮತ್ತು ಚಹಾಲ್ ಆಡುತ್ತಿದ್ದೆವು. ಮಹಿ ಭಾಯ್ ಹೊರ ಹೋದ ನಂತರ ನಾನು ಹಾಗೂ ಚಹಾಲ್ ಒಟ್ಟಾಗಿ ಆಡಿಲ್ಲ. ಧೋನಿ ಭಾಯ್ ನಿವೃತ್ತಿಯ ನಂತರ ನಾನು ಒಂದು ಪರಿಪೂರ್ಣ ಪಂದ್ಯವನ್ನಷ್ಟೇ ಆಡಿದ್ದೇನೆ. ನಾನು ಹತ್ತಕ್ಕೂ ಹೆಚ್ಚು ಪಂದ್ಯಗಳಲ್ಲಿ ಆಡಬೇಕಿತ್ತು. ಹ್ಯಾಟ್ರಿಕ್ ವಿಕೆಟ್ ಕೂಡ ಪಡೆದಿದ್ದೇನೆ. ನನ್ನ ಸಂಪೂರ್ಣ ಆಟವನ್ನು ನೀವು ನೋಡಿದರೆ ಅದು ತುಂಬಾ ಸಭ್ಯವಾಗಿ ಕಾಣುತ್ತದೆ" ಎಂದು ಯಾದವ್ ಹೇಳಿಕೊಂಡಿದ್ದಾರೆ.
ಯಾದವ್ 2019 ರಲ್ಲಿ 23 ಪಂದ್ಯಗಳನ್ನಾಡಿದ್ದರು, ಆದರೆ, 2020 ಮತ್ತು 2021ರಲ್ಲಿ ಕೇವಲ 7 ಏಕದಿನ ಪಂದ್ಯಗಳನ್ನಾಡಿದ್ದಾರೆ. ಧೋನಿ 2019ರ ವಿಶ್ವಕಪ್ ಸೆಮಿಫೈನಲ್ ನಂತರ ಯಾವುದೇ ಪಂದ್ಯವನ್ನಾಡಿದರೆ 2020 ಆಗಸ್ಟ್ 15ರಂದು ನಿವೃತ್ತಿ ಘೋಷಿಸಿದ್ದರು.
ಇದನ್ನು ಓದಿ: ಮಾಜಿ ವೇಗದ ಬೌಲರ್ ರುದ್ರ ಪ್ರತಾಪ್ ಸಿಂಗ್ ತಂದೆ ಕೋವಿಡ್ಗೆ ಬಲಿ