ಮುಂಬೈ: ಗಾಯದ ಕಾರಣ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ತಪ್ಪಿಸಿಕೊಂಡಿರುವ ರೋಹಿತ್ ಶರ್ಮಾ ಮುಂಬರುವ ಏಕದಿನ ಸರಣಿಗೆ ಕಮ್ಬ್ಯಾಕ್ ಮಾಡುವ ಸಾಧ್ಯತೆಯಿದೆ ಎನ್ನಲಾಗುತ್ತಿದ್ದು, ತಂಡವನ್ನು ಮುನ್ನಡೆಸುವುದರ ಜೊತೆಗೆ ತಮ್ಮ ಹಳೆಯ ಜೊತೆಗಾರ ಶಿಖರ್ ಧವನ್ ಅವರೊಟ್ಟಿಗೆ ಇನ್ನಿಂಗ್ಸ್ ಆರಂಭಿಸಲಿದ್ದಾರೆ ಎನ್ನಲಾಗುತ್ತಿದೆ.
ಜನವರಿ 19, 21, 23ರಂದು ಏಕದಿನ ಸರಣಿ ನಡೆಯಲಿದ್ದು, ಮುಂದಿನ ವಾರ ಏಕದಿನ ತಂಡ ಹರಿಣಗಳ ನಾಡಿಗೆ ಪ್ರವಾಸ ಬೆಳೆಸಲಿದ್ದು, ಡಿಸೆಂಬರ್ 30 ರಂದು 15 ಸದಸ್ಯರ ತಂಡ ಘೋಷಿಸುವ ಸಾಧ್ಯತೆಯಿದೆ ಎಂದು ವರದಿಗಳಿಂದ ತಿಳಿದುಬಂದಿದೆ.
ರೋಹಿತ್ ಶರ್ಮಾ ತಮ್ಮ ದೀರ್ಘಕಾಲಿಕ ಜೊತೆಗಾರನಾಗಿರುವ ಶಿಖರ್ ಧವನ್ ಜೊತೆಗೆ ದಕ್ಷಿಣ ಆಫ್ರಿಕಾದಲ್ಲಿ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆಯಿದೆ. ಧವನ್ ಈಗಾಗಲೆ ಟಿ-20 ತಂಡದಲ್ಲಿ ತಮ್ಮ ಸ್ಥಾನವನ್ನು ಕಳೆದುಕೊಂಡಿದ್ದಾರೆ.
ಆದರೆ, 2021ರಲ್ಲಿ ಏಕದಿನ ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಅವರೂ ಶ್ರೀಲಂಕಾ ತೆರಳಿದ್ದ ಭಾರತ ತಂಡದ ನಾಯಕನಾಗಿದ್ದರು. ಇದೀಗ ಮತ್ತೆ ರಾಷ್ಟ್ರೀಯ ತಂಡಕ್ಕೆ ಕಮ್ಬ್ಯಾಕ್ ಮಾಡುವ ಸಾಧ್ಯತೆಯಿದೆ.
ಇವರಿಬ್ಬರ ಜೊತೆಗೆ ದೇಶಿ ಕ್ರಿಕೆಟ್ನಲ್ಲಿ ರನ್ಗಳ ಹೊಳೆಯನ್ನೇ ಹರಿಸುತ್ತಿರುವ ಯುವ ಆರಂಭಿಕ ಬ್ಯಾಟರ್ ಋತುರಾಜ್ ಗಾಯಕ್ವಾಡ್ ಕೂಡ ಭಾರತ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ. ಬಲಗೈ ಬ್ಯಾಟರ್ ಐಪಿಎಲ್ನಲ್ಲಿ 635 ರನ್ಗಳಿಸಿ ಆರೆಂಜ್ ಕ್ಯಾಪ್ ಪಡೆದಿದ್ದರು. ಆಲ್ರೌಂಡರ್ ಸ್ಥಾನದಲ್ಲಿ ವೆಂಕಟೇಶ್ ಅಯ್ಯರ್ ಕೂಡ ಭಾರತ ತಂಡದಲ್ಲಿ ಅವಕಾಶ ಪಡೆಯಲು ಮುಂಚೂಣಿಯಲ್ಲಿರುವ ಯುವ ಆಟಗಾರರಾಗಿದ್ದಾರೆ.
ಕೆಎಲ್ ರಾಹುಲ್ ನಾಯಕ:
ಒಂದು ವೇಳೆ ಎನ್ಸಿಎನಲ್ಲಿರುವ ರೋಹಿತ್ ಶರ್ಮಾ ಸಂಪೂರ್ಣ ಫಿಟ್ ಆಗಿಲ್ಲದಿದ್ದಲ್ಲಿ ಕನ್ನಡಿಗ ಕೆಎಲ್ ರಾಹುಲ್ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ನಾಯಕತ್ವ ವಹಿಸಿಕೊಳ್ಳಲಿದ್ದಾರೆ. ವಿಕೆಟ್ ಕೀಪರ್ ರಿಷಭ್ ಪಂತ್ ಉಪನಾಯಕರಾಗುವ ಸಾಧ್ಯತೆಯಿದೆ.
ಅಶ್ವಿನ್ ಕಮ್ಬ್ಯಾಕ್:
2017ರಿಂದ ಏಕದಿನ ಕ್ರಿಕೆಟ್ ಆಡದಿರುವ ರವಿಚಂದ್ರನ್ ಅಶ್ವಿನ್ ಮುಂಬರುವ ಸರಣಿಯಲ್ಲಿ ಅವಕಾಶ ಪಡೆಯಲಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ ಅವರು ಭಾರತ ಟಿ-20 ತಂಡದಲ್ಲೂ ಅವಕಾಶ ಪಡೆದಿದ್ದರು. ಯುಜ್ವೇಂದ್ರ ಚಹಾಲ್ ಕೂಡ ತಂಡದಲ್ಲಿ ತಮ್ಮ ಸ್ಥಾನ ಉಳಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ:U19 ಏಷ್ಯಾಕಪ್: ಅಫ್ಘಾನಿಸ್ತಾನಕ್ಕೆ ಸೋಲುಣಿಸಿ ಸೆಮಿಫೈನಲ್ ಪ್ರವೇಶಿಸಿದ ಭಾರತ ತಂಡ