ಬೆನ್ನುಮೂಳೆ ಮುರಿತಕ್ಕೀಡಾಗಿರುವ ಭಾರತದ ವೇಗಿ ಜಸ್ಪ್ರೀತ್ ಬೂಮ್ರಾ ವಿಶ್ವಕಪ್ ತಂಡದಿಂದ ಹೊರಬಿದ್ದಿದ್ದಾರೆ. ಇದು ತಂಡಕ್ಕೂ ಅಲ್ಪ ಹಿನ್ನಡೆ ಉಂಟು ಮಾಡಿತ್ತು. ಐಪಿಎಲ್ ಆಡಲು ಫಿಟ್ ಇರುತ್ತಾರೆ. ಭಾರತದ ಪರ ಆಡುವಾಗ ಗಾಯಕ್ಕೀಡಾಗುತ್ತಾರೆ ಎಂದು ಬೂಮ್ರಾ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಕೂಡ ಮಾಡಲಾಗಿತ್ತು.
ನಾಯಕ ರೋಹಿತ್ ಶರ್ಮಾ ತಂಡದ ಆಟಗಾರರ ಗಾಯದ ಬಗ್ಗೆ ಮಾತನಾಡಿ, ಯಾವುದೇ ಆಟಗಾರನಿಗೇ ಆಗಲಿ ವೃತ್ತಿಜೀವನ ಮುಖ್ಯ. ಒಂದು ಟೂರ್ನಿ ಮಿಸ್ ಆದರೆ, ದೊಡ್ಡ ಪರಿಣಾಮ ಬೀರದು. ನೋವಿನಲ್ಲೂ ಕ್ರಿಕೆಟ್ ಆಡಿ ದೊಡ್ಡ ನಷ್ಟಕ್ಕೆ ಒಳಗಾಗಬಾರದು. ಜಸ್ಪ್ರೀತ್ ಬೂಮ್ರಾ ಕೂಡ ವಿಶ್ವಕಪ್ನಲ್ಲಿ ಆಡದಿರಬಹುದು. ಆದರೆ, ಭಾರತ ತಂಡದ ಜೊತೆ ಮುಂದೆ ಇನ್ನಷ್ಟು ದೂರ ಪಯಣಿಸಲಿದ್ದಾರೆ ಎಂದು ಬೂಮ್ರಾ ಪರ ಬ್ಯಾಟಿಂಗ್ ಮಾಡಿದ್ದಾರೆ.
ವಿಶ್ವಕಪ್ಗಿಂತ ಬೂಮ್ರಾರ ವೃತ್ತಿಜೀವನ ಮುಖ್ಯ. ಅವರ ಗಾಯದ ಬಗ್ಗೆ ನಾವು ಸಾಕಷ್ಟು ತಜ್ಞರೊಂದಿಗೆ ಮಾತನಾಡಿದ್ದೇವೆ. 28 ವರ್ಷದ ಯುವ ವೇಗಿಯ ಮುಂದಿನ ವೃತ್ತಿ ಬದುಕು ಸಹ ಬಹುಮುಖ್ಯವಾದ್ದರಿಂದ ಅವರನ್ನು ಅನಿವಾರ್ಯವಾಗಿ ಕ್ರಿಕೆಟ್ ಆಡಿಸಲಾಗದು. ಗಾಯದಿಂದ ಚೇತರಿಸಿಕೊಂಡ ಬಳಿಕ ಅವರು ಮತ್ತೆ ಭಾರತದ ಪರ ಕಣಕ್ಕಿಳಿಯಲಿದ್ದಾರೆ ಎಂದರು.
ಬೂಮ್ರಾ ಮುಂದೆ ಸಾಕಷ್ಟು ಕ್ರಿಕೆಟ್ ಇದೆ. ದೇಶದ ಪರವಾಗಿ ಇನ್ನೂ ಬಹಳಷ್ಟು ಆಡಲಿದ್ದಾರೆ. ಪಂದ್ಯಗಳನ್ನು ಗೆಲ್ಲಲು ಸಹಾಯ ಮಾಡುತ್ತಾರೆ. ಇದರಲ್ಲಿ ಯಾವುದೇ ಸಂದೇಹವಿಲ್ಲ. ಈ ವಿಶ್ವಕಪ್ನಿಂದ ಮಾತ್ರ ಅವರು ತಪ್ಪಿಸಿಕೊಳ್ಳುತ್ತಾರೆ ಅಷ್ಟೇ ಎಂದು ಸಮರ್ಥಿಸಿಕೊಂಡರು.
ಗಾಯಗೊಳ್ಳುವುದು ಕ್ರೀಡೆಯ ಭಾಗ. ಅದರಿಂದ ತಪ್ಪಿಸಿಕೊಳ್ಳಲಾಗದು. ಬೂಮ್ರಾ ಬದಲಾಗಿ ತಂಡ ಸೇರಿರುವ ಮೊಹಮದ್ ಶಮಿ ಕೂಡ ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಯ ವೇಳೆ ಕೋವಿಡ್ಗೆ ತುತ್ತಾಗಿ ಕ್ವಾರಂಟೈನ್ ಆಗಿದ್ದರು. ಈ ವೇಳೆ ಯುವ ವೇಗಿಗಳು ಅವಕಾಶ ಪಡೆದರು. ಶಮಿ ಈಗ ಫಿಟ್ ಆಗಿದ್ದು, ಮತ್ತೆ ತಂಡ ಸೇರಿದ್ದಾರೆ. ಹಾಗಾಗಿ ಗಾಯಗಳನ್ನು ಉಪೇಕ್ಷೆ ಮಾಡಲಾಗದು ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
ಆಯ್ಕೆ ಸಮಿತಿಯು ಗಾಯಗೊಂಡಿರುವ ಜಸ್ಪ್ರೀತ್ ಬುಮ್ರಾ ಬದಲಿಗೆ ಮೊಹಮದ್ ಶಮಿ ಅವರನ್ನು ಹೆಸರಿಸಿದೆ. ಶಾರ್ದೂಲ್ ಠಾಕೂರ್ ಮತ್ತು ಮೊಹಮ್ಮದ್ ಸಿರಾಜ್ ಮೀಸಲು ವೇಗಿಗಳಾಗಿ ಆಸ್ಟ್ರೇಲಿಯಾಕ್ಕೆ ಹಾರಿದ್ದಾರೆ. ಆಸ್ಟ್ರೇಲಿಯಾದಲ್ಲಿ ಇಂದಿನಿಂದ ಟಿ20 ವಿಶ್ವಕಪ್ ಆರಂಭವಾಗಿದ್ದು, ಭಾರತ ಮೊದಲ ಪಂದ್ಯದಲ್ಲಿ ಪಾಕಿಸ್ತಾನವನ್ನು ಅ.23 ರಂದು ಎದುರಿಸಲಿದೆ.
ಓದಿ: ಸಪ್ತ ವಿಜಯದ ಸಂಭ್ರಮ... ಏಷ್ಯಾ ಕಪ್ ಟ್ರೋಫಿ ಗೆದ್ದ ಖುಷಿಗೆ ಭಾರತ ವನಿತೆಯರ ಡ್ಯಾನ್ಸ್