ಲಖನೌ (ಉತ್ತರ ಪ್ರದೇಶ): ಏಕದಿನ ಕ್ರಿಕೆಟ್ ವಿಶ್ವಕಪ್ ಆರಂಭಕ್ಕೆ ಹೆಚ್ಚೂ ಕಡಿಮೆ 40 ದಿನಗಳಿವೆ. ಈ ನಡುವೆ ವೇಳಾಪಟ್ಟಿಯಲ್ಲಿ ಸ್ವಲ್ಪ ಬದಲಾವಣೆ ಮಾಡುವಂತೆ ಹೈದರಾಬಾದ್ ಕ್ರಿಕೆಟ್ ಸಂಸ್ಥೆ ಮನವಿ ಮಾಡಿತ್ತು. ಇದಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಉಪಾಧ್ಯಕ್ಷ ರಾಜೀವ್ ಶುಕ್ಲಾ ಪ್ರತಿಕ್ರಿಯಿಸಿದ್ದು, ಇನ್ನು ಯಾವುದೇ ಬದಲಾವಣೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ವಿಶ್ವಕಪ್ನ 45 ಪಂದ್ಯಗಳ ಪೈಕಿ ಹೈದರಾಬಾದ್‌ನ ಉಪ್ಪಲ್‌ನಲ್ಲಿರುವ ರಾಜೀವ್ ಗಾಂಧಿ ಇಂಟರ್‌ನ್ಯಾಶನಲ್ ಸ್ಟೇಡಿಯಂನಲ್ಲಿ ಮೂರು ಪಂದ್ಯಗಳು ನಡೆಯಲಿವೆ. ಈ ಮೈದಾನದಲ್ಲಿ ಎರಡು ಪಂದ್ಯಗಳು ಒಂದರ ಮೇಲೊಂದರಂತೆ ನಡೆಯಲಿರುವ ಕಾರಣ ಭದ್ರತಾ ಲೋಪವಾಗುವ ಸಾಧ್ಯತೆಯನ್ನು ಮುಂದಿಟ್ಟುಕೊಂಡು ಹೈದರಾಬಾದ್ ಕ್ರಿಕೆಟ್ ಸಂಸ್ಥೆ ಬದಲಾವಣೆಗೆ ಕೇಳಿಕೊಂಡಿತ್ತು.
"ಅಲ್ಲಿ ಭದ್ರತೆಯ ಯಾವುದೇ ಸಮಸ್ಯೆ ಕಂಡುಬಂದಲ್ಲಿ ನಾವು ಪರಿಹರಿಸಲು ಪ್ರಯತ್ನಿಸುತ್ತೇವೆ. ವೇಳಾಪಟ್ಟಿಯನ್ನು ಬದಲಾಯಿಸುವುದು ಸುಲಭವಲ್ಲ. ಅದರ ಸಾಧ್ಯತೆಯೂ ಇಲ್ಲ. ಬಿಸಿಸಿಐ ಮಾತ್ರ ವೇಳಾಪಟ್ಟಿಯನ್ನು ಬದಲಾಯಿಸಲು ಸಾಧ್ಯವಿಲ್ಲ. ಇದು ತಂಡಗಳು, ಐಸಿಸಿಗೂ ಸಂಬಂಧಿಸಿದ ವಿಷಯವಾಗಿದೆ. ಈಗ ಬದಲಾಯಿಸಲು ಸಾಧ್ಯವಿಲ್ಲ" ಎಂದು ರಾಜೀವ್ ಶುಕ್ಲಾ ಹೇಳಿದ್ದಾರೆ.
ವಿಶ್ವಕಪ್ ಆರಂಭಕ್ಕೆ 100 ದಿನ ಬಾಕಿಯಿದ್ದಾಗ ಬಿಸಿಸಿಐ ಮತ್ತು ಐಸಿಸಿ ವೇಳಾಪಟ್ಟಿ ಪ್ರಕಟಿಸಿತ್ತು. ನಂತರ ಹಬ್ಬಗಳ ಹಿನ್ನೆಲೆಯಲ್ಲಿ ಮಹತ್ವದ ಪಂದ್ಯಗಳಿಗೆ ಭದ್ರತೆ ನೀಡುವುದು ಕಷ್ಠವಾಗುತ್ತದೆ ಎಂದು ಕೆಲ ರಾಜ್ಯದ ಕ್ರಿಕೆಟ್ ಸಂಸ್ಥೆಗಳು ಮನವಿ ಮಾಡಿದ್ದವು. ಈ ಹಿನ್ನಲೆಯಲ್ಲಿ ಈ ತಿಂಗಳಾರಂಭದಲ್ಲಿ 8 ಪಂದ್ಯಗಳ ದಿನಾಂಕ ಬದಲಿಸಿ ವೇಳಾಪಟ್ಟಿ ಪ್ರಕಟಿಸಲಾಗಿತ್ತು.
ಹೊಸ ಬದಲಾವಣೆಯಿಂದ ಹೈದರಾಬಾದ್ನಲ್ಲಿ ಶ್ರೀಲಂಕಾ- ಪಾಕಿಸ್ತಾನ ನಡುವಣ ಪಂದ್ಯವನ್ನು ಅಕ್ಟೋಬರ್ 12ರ ಬದಲು 10ರಂದು ಆಡಿಸಲಾಗುತ್ತದೆ. ಅಕ್ಟೋಬರ್ 9ರಂದು ಇದೇ ಮೈದಾನದಲ್ಲಿ ನ್ಯೂಜಿಲೆಂಡ್- ನೆದರ್ಲ್ಯಾಂಡ್ಸ್ ಪಂದ್ಯ ನಡೆಯಲಿದೆ. ಇದಾದ ಬಳಿಕ ಪಾಕಿಸ್ತಾನದ ಪಂದ್ಯ ಇರುವುದರಿಂದ ಭದ್ರತೆಯ ಸಮಸ್ಯೆ ಆಗಲಿದೆ ಎಂದು ಹೈದರಾಬಾದ್ ಕ್ರಿಕೆಟ್ ಸಂಸ್ಥೆ ಹೇಳಿದೆ.
ಅಕ್ಟೋಬರ್ 5ರಿಂದ ವಿಶ್ವಕಪ್ನ ಪಂದ್ಯಗಳು ಆರಂಭವಾಗಲಿವೆ. ನವೆಂಬರ್ 19ರಂದು ಫೈನಲ್ ಪಂದ್ಯ ನಡೆಯಲಿದೆ. ಉದ್ಘಾಟನಾ ಮತ್ತು ಅಂತಿಮ ಪಂದ್ಯವನ್ನು ಗುಜರಾತ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.
ಇದನ್ನೂ ಓದಿ: India Asia Cup 2023 Squad: ತಂಡಕ್ಕೆ ಮರಳಿದ ರಾಹುಲ್, ಅಯ್ಯರ್.. ಏಷ್ಯಾಕಪ್ನಲ್ಲಿ ಏಕದಿನಕ್ಕೆ ತಿಲಕ್ ಪದಾರ್ಪಣೆ