ದುಬೈ: ಬುಧವಾರ ಬಿಡುಗಡೆಯಾಗಿರುವ ಐಸಿಸಿ ಟಿ20 ಬ್ಯಾಟಿಂಗ್ ಶ್ರೇಯಾಂಕದಲ್ಲಿ(ICC T20I batting rankings) ಭಾರತ ತಂಡದ ಆರಂಭಿಕ ಬ್ಯಾಟರ್ ಕೆ ಎಲ್ ರಾಹುಲ್(K L Rahul) 5ರಿಂದ 6ಕ್ಕೆ ಕುಸಿತ ಕಂಡಿದ್ದರೆ, ನಾಯಕ ವಿರಾಟ್ ಕೊಹ್ಲಿ(Virat kohli )8ನೇ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.
ವಿಶ್ವಕಪ್ ಸೆಮಿಫೈನಲ್ಸ್ನಲ್ಲಿ(world cup semi final) ಉತ್ತಮ ಪ್ರದರ್ಶನ ತೋರಿದ ಮೊಹಮ್ಮದ್ ರಿಜ್ವಾನ್(5) ಒಂದು ಸ್ಥಾನ ಮತ್ತು ಡಿವೋನ್ ಕಾನ್ವೆ(4) 3 ಸ್ಥಾನ ಏರಿಕೆ ಕಂಡಿದ್ದರಿಂದ ರಾಹುಲ್ 5ನೇ ಸ್ಥಾನವನ್ನು ಕಳೆದುಕೊಂಡಿದ್ದಾರೆ. ವಿಶ್ವಕಪ್ನಲ್ಲಿ ದಯನೀಯ ವೈಫಲ್ಯ ಅನುಭವಿಸಿದ ಆಸ್ಟ್ರೇಲಿಯಾದ ನಾಯಕ ಆ್ಯರೋನ್ ಫಿಂಚ್ 4 ರಿಂದ 7ಕ್ಕೆ ಕುಸಿದಿದ್ದಾರೆ.
ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್, ಇಂಗ್ಲೆಂಡ್ನ ಡೇವಿಡ್ ಮಲನ್, ದಕ್ಷಿಣ ಆಫ್ರಿಕಾದ ಐಡೆನ್ ಮಾರ್ಕ್ರಮ್ ಮೊದಲ ಮೂರು ಸ್ಥಾನದಲ್ಲಿ ಅಬಾಧಿತರಾಗಿದ್ದಾರೆ.
ಫೈನಲ್ನಲ್ಲಿ 50 ಎಸೆತಗಳಲ್ಲಿ 77 ರನ್ ಚಚ್ಚಿದ ಮಿಚೆಲ್ ಮಾರ್ಷ್ 6 ಕ್ರಮಾಂಕ ಏರಿಕೆ ಕಂಡು 13ನೇ ಮತ್ತು ಸೆಮಿಫೈನಲ್ ಮತ್ತು ಫೈನಲ್ನಲ್ಲಿ 49 ಮತ್ತು 53 ರನ್ಗಳಿಸಿ ಟೂರ್ನಿ ಶ್ರೇಷ್ಠ ಪ್ರಶಸ್ತಿ ಪಡೆದ ಡೇವಿಡ್ ವಾರ್ನರ್ 8 ಸ್ಥಾನ ಮೇಲೇರಿ 33ನೇ ಶ್ರೇಯಾಂಕ ಗಳಿಸಿಕೊಂಡಿದ್ದಾರೆ.
ಟಾಪ್ 3ಗೆ ಜಂಪಾ
ವಿಶ್ವಕಪ್ನಲ್ಲಿ 13 ವಿಕೆಟ್ ಪಡೆದಿದ್ದ ಆಸ್ಟ್ರೇಲಿಯಾ ಯುವ ಸ್ಪಿನ್ನರ್ ಆ್ಯಡಂ ಜಂಪಾ(Australia spinner Adam Zampa) ಎರಡು ಸ್ಥಾನ ಏರಿಕೆ ಕಂಡು 3ನೇ ಶ್ರೇಯಾಂಕ ಪಡೆದುಕೊಂಡಿದ್ದಾರೆ. ಮತ್ತೊಬ್ಬ ಆಸೀಸ್ ಬೌಲರ್ ಜೋಶ್ ಹೆಜಲ್ವುಡ್ 8 ರಿಂದ 6ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ. ಇಂಗ್ಲೆಂಡ್ನ ಆದಿಲ್ ರಶೀದ್, ದಕ್ಷಿಣ ಆಫ್ರಿಕಾದ ತಬ್ರೈಜ್ ಶಂಸಿ ಅಗ್ರ ಎರಡು ಸ್ಥಾನ ಉಳಿಸಿಕೊಂಡಿದ್ದಾರೆ. ಭಾರತದ ಯಾವೊಬ್ಬ ಬೌಲರ್ ಅಗ್ರ 10ರೊಳಗೆ ಅವಕಾಶ ಪಡೆಯುವಲ್ಲಿ ವಿಫಲರಾಗಿದ್ದಾರೆ.
ಆಲ್ರೌಂಡರ್ ಶ್ರೇಯಾಂಕದಲ್ಲಿ ಇಂಗ್ಲೆಂಡ್ನ ಲಿಯಾಮ್ ಲಿವಿಂಗ್ಸ್ಟೋನ್ 7 ಸ್ಥಾನ ಏರಿಕೆ ಕಂಡು 3ನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ.
ಇದನ್ನು ಓದಿ:ಅನಿಲ್ ಕುಂಬ್ಳೆಯಿಂದ ತೆರವಾದ ಐಸಿಸಿ ಪುರುಷರ ಕ್ರಿಕೆಟ್ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಗಂಗೂಲಿ ನೇಮಕ