ನವದೆಹಲಿ : ಇಂಗ್ಲೆಂಡ್ ಪ್ರವಾಸದಲ್ಲಿ ಬೆಸ್ಟ್ ಸ್ವಿಂಗ್ ಬೌಲರ್‌ನ ತಂಡಕ್ಕೆ ಆಯ್ಕೆ ಮಾಡಿಕೊಳ್ಳದಿರುವುದು ದೊಡ್ಡ ಪ್ರಮಾದ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದ 15 ಸದಸ್ಯರ ತಂಡದಲ್ಲಿ ಶಾರ್ದುಲ್ ಠಾಕೂರ್ ಇರಬೇಕಿತ್ತು ಎಂದು ಮಾಜಿ ಆಯ್ಕೆ ಸಮಿತಿ ಸದಸ್ಯ ಸರಂದೀಪ್ ಸಿಂಗ್ ಅಭಿಪ್ರಾಯ ಪಟ್ಟಿದ್ದಾರೆ.
ವೇಗದ ಬೌಲರ್ಗಳಿಗೆ ಅನುಕೂಲವಾಗುವ ಸೌತಾಂಪ್ಟನ್ನಲ್ಲಿ ವೇಗದ ಆಲ್ರೌಂಡರ್ ಶಾರ್ದುಲ್ ಠಾಕೂರ್ ಅವರನ್ನು ಕೇವಲ 15ರ ಬಳಗದಲ್ಲಿ ಅಲ್ಲದೇ ಆಡುವ 11ರ ತಂಡದಲ್ಲೂ ಅವಕಾಶ ನೀಡಬೇಕಿತ್ತು. ಮಳೆಯಿಂದ ಪಂದ್ಯ ಪುನಾರಂಭವಾದಾಗ ಪೇಸರ್ಗಳಿಗೆ ಆ ಪಿಚ್ ಅನುಕೂಲಕರವಾಗುತ್ತಿತ್ತು ಎಂದು ಕೆಲವು ಕ್ರಿಕೆಟ್ ತಜ್ಞರು ಕೂಡ ಹೇಳಿದ್ದಾರೆ.
ಪಂದ್ಯಾರಂಭಕ್ಕೂ ಮುನ್ನ ಇಬ್ಬರು ಸ್ಪಿನ್ನರ್ಗಳನ್ನೊಳಗೊಂಡ ತಂಡವನ್ನು ಆಯ್ಕೆ ಮಾಡಿದ್ದು ಸರಿಯಾಗಿಯೇ ಇತ್ತು. ಆದರೆ, ಮಳೆಯ ನಂತರ ವೇಗಿಗಳಿಗೆ ಪರಿಸ್ಥಿತಿ ಅನುಕೂಲವಾಗುವುದರಿಂದ ತಂಡವನ್ನು ಬದಲಿಸಿಕೊಳ್ಳಬೇಕಿತ್ತು ಎಂದು ಪಿಟಿಐಗೆ ಸರಂದೀಪ್ ತಿಳಿಸಿದ್ದಾರೆ.
ನೀವು ಇಬ್ಬರು ಸ್ಪಿನ್ನರ್ಗಳನ್ನು ಆಯ್ಕೆ ಮಾಡಿಕೊಂಡಿದ್ದು ಅವರು ಬ್ಯಾಟಿಂಗ್ ಮಾಡುತ್ತಾರೆ ಎಂಬ ಕಾರಣಕ್ಕೆ. ಆದರೆ, ಬ್ಯಾಟಿಂಗ್ ಮಾಡಬಲ್ಲ ಏಕೈಕ ವೇಗದ ಬೌಲರ್ ಶಾರ್ದುಲ್ ಠಾಕೂರ್ ಅವರು ಆಡುವ 15ರ ಬಳಗದಲ್ಲಿರಬೇಕಿತ್ತು. ಅಲ್ಲದೆ ವಾತಾವರಣ ಬದಲಾದ ನಂತರ ಅವರನ್ನು 11ರ ಬಳಗದಲ್ಲೂ ಆಡಿಸಬಹುದಿತ್ತು ಎಂದಿದ್ದಾರೆ.
ಜೊತೆಗೆ ಫಿಟ್ ಆಗಿರುವ ಭುವಬೇಶ್ವರ್ ಕುಮಾರ್ ಅವರನ್ನು ತಂಡದಿಂದ ಇಂಗ್ಲೆಂಡ್ ಪ್ರವಾಸಕ್ಕೆ ಆಯ್ಕೆ ಮಾಡದಿರುವುದು ಒಂದು ದೊಡ್ಡ ತಪ್ಪು. ಏಕೆಂದರೆ, ಅವರು ಭಾರತದ ಅತ್ಯುತ್ತಮ ಸ್ವಿಂಗ್ ಬೌಲರ್. ಅಲ್ಲದೆ ನೀವು ಯಾವಾಗಲೂ ಫಿಟ್ನೆಸ್ ಇಲ್ಲದ ಹಾರ್ದಿಕ್ ಪಾಂಡ್ಯರ ಮೇಲೆ ಅವಲಂಬಿತರಾಗಲಾಗುವುದಿಲ್ಲ. ಬದಲಾಗಿ ವಿಜಯ್ ಶಂಕರ್ ಅಥವಾ ಶಾರ್ದುಲ್ ಅಥವಾ ಶಿವಂ ದುಬೆ ಅವರನ್ನು ಬೆಳೆಸಬೇಕಿದೆ ಎಂದು ಸಲಹೆ ನೀಡಿದ್ದಾರೆ.
ಇದನ್ನು ಓದಿ: ಇಂಗ್ಲೆಂಡ್ನ ದುರ್ಬಲ ಬ್ಯಾಟಿಂಗ್ನಿಂದ ಟೀಂ ಇಂಡಿಯಾ ಸೋಲಿಸುವುದು ಕಠಿಣ: ವಾನ್