ಗ್ಯಾಂಗ್ಟಾಕ್(ಸಿಕ್ಕಿಂ): ರಣಜಿ ಟ್ರೋಫಿಯ ಪಾದಾರ್ಪಣೆ ಪಂದ್ಯದಲ್ಲಿ ಮಣಿಪುರದ ಮಧ್ಯಮ ವೇಗಿ 16 ವರ್ಷದ ಪೀರೋಯಿಜಮ್ ಸಿಂಗ್ 9 ವಿಕೆಟ್ ಪಡೆದು ಮಿಂಚಿದ್ದು, ಮೊದಲ ಪಂದ್ಯದಲ್ಲೇ ಈ ಸಾಧನೆ ಮಾಡಿದ ಭಾರತದ 4ನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಸಿಕ್ಕಿಂ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಪೀರೋಯಿಜಮ್ ಸಿಂಗ್ 22 ಓವರ್ಗಳನ್ನು ಎಸೆದು, 5 ಮೇಡನ್ ಓವರ್ಗಳೊಂದಿಗೆ 69 ರನ್ ನೀಡಿ 9 ವಿಕೆಟ್ ಕಬಳಿಸಿದರು. 1956-57ರಲ್ಲಿ ವಸಂತ ರಾಜಾನೆ 35 ರನ್ಗೆ 9, 1971-72ರಲ್ಲಿ ಅಮರ್ಜಿತ್ ಸಿಂಗ್ 45 ರನ್ಗೆ 9 ಮತ್ತು 2019-20ರಲ್ಲಿ ಸಂಜಯ್ ಯಾದವ್ 52 ರನ್ಗೆ 9 ವಿಕೆಟ್ ಪಡೆದಿದ್ದರು. ಇದೀಗ ಪೀರೋಯಿಜಮ್ ಸಿಂಗ್ ಈ ಸಾಧನೆಯ ಸಾಲಿಗೆ ಸೇರಿದ್ದಾರೆ.
ಅಲ್ಲದೇ, ಪ್ರಥಮ ದರ್ಜೆ ಕ್ರಿಕೆಟ್ ಇತಿಹಾಸದಲ್ಲೇ ಇದು 10ನೇ ಮತ್ತು ಭಾರತದಲ್ಲಿ ನಾಲ್ಕನೇ ಅತ್ಯುತ್ತಮ ಚೊಚ್ಚಲ ಪಂದ್ಯದಲ್ಲಿ ಮೂಡಿ ಬಂದ ದಾಖಲೆಯಾಗಿದೆ. ಒಂದು ವಿಕೆಟ್ ಪಡೆದಿದ್ದರೆ 10 ವಿಕೆಟ್ಗಳನ್ನು ಪಡೆದ ಆಟಗಾರರ ಸಾಲಿಗೆ ಪೀರೋಯಿಜಮ್ ಸಿಂಗ್ ಸೇರುತ್ತಿದ್ದರು. ಇವರ ಮಾರಕ ಬೌಲಿಂಗ್ ಪರಿಣಾಮದಿಂದ ಸಿಕ್ಕಿಂ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 220 ರನ್ಗಳಿಗೆ ಸರ್ವಪತನ ಕಂಡಿತು.
ಮಣಿಪುರ ತಂಡ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 186 ರನ್ಗಳನ್ನು ಕಲೆ ಹಾಕಿತ್ತು. ಎರಡನೇ ಇನ್ನಿಂಗ್ಸ್‌ನಲ್ಲಿ ಸಿಕ್ಕಿಂ ಕೂಡಾ ಉತ್ತಮ ಬೌಲಿಂಗ್ ಮಾಡಿ, ಮಣಿಪುರ ತಂಡಕ್ಕೆ ಆರಂಭಿಕ ಆಘಾತ ನೀಡಿದೆ. 59 ರನ್ಗಳಿಗೆ 4 ವಿಕೆಟ್ಗಳನ್ನು ಕಿತ್ತು ಸಿಕ್ಕಿಂ ಪಂದ್ಯದಲ್ಲಿ ಹಿಡಿತ ಸಾಧಿಸಿದೆ. ಒಟ್ಟಾರೆ, ಮಣಿಪುರ ಕೇವಲ 25 ರನ್ಗಳ ಮುನ್ನಡೆಯಲ್ಲಿದ್ದು, ಸಿಕ್ಕಿಂನ ಸುಮಿತ್ ಸಿಂಗ್ 23 ರನ್ಗಳಿಗೆ 3 ವಿಕೆಟ್ ಪಡೆದು ಮಣಿಪುರ ಬ್ಯಾಟರ್ಗಳನ್ನು ಕಾಡಿದರು.
ಇದನ್ನೂ ಓದಿ: ತಂದೆಯ ಹಾದಿಯಲ್ಲೇ ಮಗ: ಸಚಿನ್ರಂತೆ ರಣಜಿ ಪಾದಾರ್ಪಣೆ ಪಂದ್ಯದಲ್ಲೇ ಶತಕ ಸಿಡಿಸಿದ ಅರ್ಜುನ್