ದುಬೈ: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ 20 ವಿಶ್ವಕಪ್ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ಬ್ಯಾಟಿಂಗ್ ಕಿಂಗ್ ವಿರಾಟ್ ಕೊಹ್ಲಿಗೆ ಐಸಿಸಿಯ ಅಕ್ಟೋಬರ್ ತಿಂಗಳ ಅತ್ಯುತ್ತಮ ಆಟಗಾರ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿ ರೇಸ್ನಲ್ಲಿದ್ದ ದಕ್ಷಿಣ ಆಫ್ರಿಕಾದ ಡೇವಿಡ್ ಮಿಲ್ಲರ್, ಜಿಂಬಾಬ್ವೆಯ ಸಿಕಂದರ್ ರಾಜಾರನ್ನು ಹಿಂದಿಕ್ಕಿದ ಕೊಹ್ಲಿ ಈ ಗೌರವಕ್ಕೆ ಭಾಜನರಾಗಿದ್ದಾರೆ.
icc-cricket.com ನಲ್ಲಿ ನೋಂದಾಯಿತ ಮಾಧ್ಯಮ ಪ್ರತಿನಿಧಿಗಳು, ಹಾಲ್ ಆಫ್ ಫೇಮ್ ಆಟಗಾರರು, ಅಂತಾರಾಷ್ಟ್ರೀಯ ಮಾಜಿ ಆಟಗಾರರು ಮತ್ತು ಅಭಿಮಾನಿಗಳು ನಡೆಸಿದ ಜಾಗತಿಕ ಮತದಾನದಲ್ಲಿ ವಿರಾಟ್ ಕೊಹ್ಲಿಗೆ ಅತ್ಯಧಿಕ ಬೆಂಬಲ ವ್ಯಕ್ತವಾಗಿ, ಪ್ರಶಸ್ತಿ ವಿಜೇತರಾಗಿದ್ದಾರೆ.
ವಿರಾಟ್ ಕೊಹ್ಲಿ ಇದೇ ಮೊದಲ ಬಾರಿಗೆ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದು, ಪ್ರಶಸ್ತಿಯೂ ಆಯ್ಕೆಯಾಗಿದ್ದಾರೆ. ವಿಶ್ವಕಪ್ನಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ದಕ್ಷಿಣ ಆಫ್ರಿಕಾದ ಡೇವಿಡ್ ಮಿಲ್ಲರ್, ಜಿಂಬಾಬ್ವೆಯ ಸಿಕಂದರ್ ರಾಜಾ, ವಿರಾಟ್ ಕೊಹ್ಲಿಯ ಮುಂದೆ ನಿಲ್ಲಲಿಲ್ಲ.
ವಿಶ್ವಕಪ್ನಲ್ಲಿ ಮೂರು ಅರ್ಧಶತಕ ಸೇರಿದಂತೆ 245 ರನ್ ಗಳಿಸಿ ಟೂರ್ನಿಯ ಅತ್ಯಧಿಕ ರನ್ನರ್ ಆಗಿರುವ ವಿರಾಟ್ ಕೊಹ್ಲಿ, ಪಾಕಿಸ್ತಾನ ವಿರುದ್ಧದ ಮೊದಲ ಪಂದ್ಯದಲ್ಲಿ ಸಂಕಷ್ಟದಲ್ಲಿದ್ದ ತಂಡಕ್ಕೆ ನೆರವಾಗಿ ಏಕಮೇವವಾಗಿ ಬ್ಯಾಟಿಂಗ್ ಮಾಡಿ ಪಂದ್ಯ ಗೆಲ್ಲಿಸಿಕೊಟ್ಟಿದ್ದರು. ಇದು ಅಭಿಮಾನಿಗಳನ್ನು ಬಹುವಾಗಿ ಆಕರ್ಷಿಸಿದೆ. ವಿರಾಟ್ ಆ ಪಂದ್ಯದಲ್ಲಿ 53 ಎಸೆತಗಳಲ್ಲಿ ಅಜೇಯ 82 ರನ್ ಗಳಿಸಿದ್ದರು.
"ಅಕ್ಟೋಬರ್ ತಿಂಗಳ ಐಸಿಸಿ ಪುರುಷರ ಅತ್ಯುತ್ತಮ ಆಟಗಾರನಾಗಿ ಆಯ್ಕೆಯಾಗಿರುವುದು ನನಗೆ ದೊಡ್ಡ ಗೌರವವಾಗಿದೆ. ಪ್ರಪಂಚದಾದ್ಯಂತ ಅಭಿಮಾನಿಗಳು ಮತ್ತು ವಿಮರ್ಶಕರಿಂದ ಆಯ್ಕೆಯಾಗಿರುವುದು ವಿಶೇಷವಾಗಿದೆ" ಎಂದು ವಿರಾಟ್ ಕೊಹ್ಲಿ ಹೇಳಿದರು.
ಮಹಿಳೆಯರಲ್ಲಿ ಪಾಕ್ ಆಟಗಾರ್ತಿಗೆ ಪ್ರಶಸ್ತಿ: ಇನ್ನು, ಮಹಿಳಾ ವಿಭಾಗದಲ್ಲಿ ಪಾಕಿಸ್ತಾನದ ಆಲ್‌ರೌಂಡರ್ ನಿದಾ ದಾರ್ ಅಕ್ಟೋಬರ್ ತಿಂಗಳ ಮಹಿಳಾ ಅತ್ಯುತ್ತಮ ಆಟಗಾರ್ತಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಏಷ್ಯಾ ಕಪ್ನಲ್ಲಿ ತೋರಿದ ಅಮೋಘ ಪ್ರದರ್ಶನಕ್ಕೆ ಅವರಿಗೆ ಈ ಪ್ರಶಸ್ತಿ ಲಭಿಸಿದೆ. ಈ ಪ್ರಶಸ್ತಿಗಾಗಿ ಭಾರತ ಮಹಿಳಾ ತಂಡದ ಸ್ಟಾರ್ ಆಟಗಾರ್ತಿಯರಾದ ಜೆಮಿಮಾ ರೋಡ್ರಿಗಸ್, ದೀಪ್ತಿ ಶರ್ಮಾ ರೇಸ್ನಲ್ಲಿದ್ದರು.
ಓದಿ: ವಿರಾಟ್ ಕೊಹ್ಲಿಯೂ ಸಾಧಿಸದ ದಾಖಲೆ ಬರೆದ ಸೂರ್ಯಕುಮಾರ್.. ಏನದು?