ದುಬೈ : ಬರುವ ನ್ಯೂಜಿಲೆಂಡ್ ವಿರುದ್ಧ ಸೀಮಿತ ಓವರ್‌ಗಳ ಸರಣಿಗೆ ಭಾರತ ತಂಡವು ಅನುಭವಿ ಆಟಗಾರ ಕೆ ಎಲ್ ರಾಹುಲ್ ನಾಯಕತ್ವದಲ್ಲಿ ಕಣಕ್ಕಿಳಿಯಲಿದೆ ಎಂದು ಹೇಳಲಾಗುತ್ತಿದೆ.
ಚುಟುಕು ವಿಶ್ವಕಪ್ನ ಮೆಗಾ ಟೂರ್ನಮೆಂಟ್‌ನಲ್ಲಿ ಸತತ ಸೋಲಿನೊಂದಿಗೆ ಒತ್ತಡದಲ್ಲಿರುವ ಭಾರತ ತಂಡದ ಕೆಲವು ಹಿರಿಯರು ಬರುವ ಸರಣಿಯಲ್ಲಿ ವಿಶ್ರಾಂತಿ ಪಡೆಯಲಿದ್ದಾರೆ.
ಹಾಗಾಗಿ, ತಂಡದ ನಾಯಕತ್ವದ ಹೊಣೆಯನ್ನು ಕೆ ಎಲ್ ರಾಹುಲ್ ವಹಿಸಿಕೊಳ್ಳಲಿದ್ದಾರೆ. ಜೊತೆಗೆ ಹೊಸಬರಿಗೆ ಅವಕಾಶ ಮಾಡಿಕೊಡುವ ಮೂಲಕ ಹಿರಿಯರ ಸ್ಥಾನವನ್ನು ಭರ್ತಿ ಮಾಡಲಾಗುತ್ತದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸದ್ಯ ಹಿರಿಯ ಕೆಲವು ಆಟಗಾರರಿಗೆ ವಿಶ್ರಾಂತಿ ಅವಶ್ಯವಿದೆ. ರಾಹುಲ್ ಮುಂದಿನ ಸರಣಿಯನ್ನು ಮುನ್ನಡೆಸಲಿದ್ದಾರೆ. ಟಿ20 ಸರಣಿಯನ್ನು ಮುನ್ನಡೆಸುವ ಸಾಮರ್ಥ್ಯ ಅವರಲ್ಲಿದೆ.
ಸರಣಿಯನ್ನು ವೀಕ್ಷಿಸಲು ಪೂರ್ಣ ಪ್ರಮಾಣದ ಪ್ರೇಕ್ಷಕರಿಗೆ ಅವಕಾಶ ನೀಡಲಿದ್ದೇವೆ. ಪೂರ್ಣ ಸಾಮರ್ಥ್ಯ ಇಲ್ಲದಿದ್ದರೆ ಈ ಬಗ್ಗೆ ಕ್ರೀಡಾ ಮಂಡಳಿಗಳೊಂದಿಗೆ ಮಾತನಾಡುತ್ತೇವೆ ಎಂದು ಅವರು ತಿಳಿಸಿದ್ದಾರೆ.
ಟಿ-20 ವಿಶ್ವಕಪ್ ಬಳಿಕ ವಿರಾಟ್ ಕೊಹ್ಲಿ ತಮ್ಮ ನಾಯಕತ್ವಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಮುಂದಿನ ನಾಯಕ ಯಾರು ಎಂಬುದನ್ನು ಬಿಸಿಸಿಐ ಇನ್ನೂ ಸ್ಪಷ್ಟಪಡಿಸಿಲ್ಲ.
ಕೆಲವೇ ದಿನಗಳಲ್ಲಿ ಈ ಬಗ್ಗೆ ಸ್ಪಷ್ಟತೆ ಬರಲಿದೆ. ಸದ್ಯ ಉಪನಾಯಕರಾಗಿರುವ ರೋಹಿತ್ಗೆ ಟಿ20 ನಾಯಕತ್ವ ಸಿಗುವ ಸಾಧ್ಯತೆ ಇದೆ. ರಾಹುಲ್ಗೆ ಉಪನಾಯಕ ಸ್ಥಾನ ಸಿಗಲಿದೆಯಂತೆ.
ಈಗ ನಡೆಯುತ್ತಿರುವ ಚುಟುಕು ವಿಶ್ವಕಪ್ ಮುಕ್ತಾಯದ ನಂತರ ನ್ಯೂಜಿಲೆಂಡ್‌ನೊಂದಿಗೆ T-20 ಸರಣಿ ಆರಂಭವಾಗಲಿದೆ. ಮೊದಲ ಟಿ-20 ನವೆಂಬರ್ 17ರಂದು ಜೈಪುರದಲ್ಲಿ ನಡೆಯಲಿದೆ.
ಇನ್ನುಳಿದ ಎರಡು ಟಿ-20 ಪಂದ್ಯಗಳು ಕ್ರಮವಾಗಿ ರಾಂಚಿಯಲ್ಲಿ (19) ಮತ್ತು ಕೋಲ್ಕತ್ತಾದಲ್ಲಿ (21) ನಡೆಯಲಿದೆ. ನಂತರ 25ರಂದು ಟೆಸ್ಟ್ ಸರಣಿ ಆರಂಭವಾಗಲಿದೆ.