ಅಬುಧಾಬಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶನ ತೋರಿದ ಮಧ್ಯಪ್ರದೇಶದ ಬ್ಯಾಟ್ಸ್ಮನ್ ವೆಂಕಟೇಶ್ ಅಯ್ಯರ್ ಅವರನ್ನು ನಾಯಕ ಮಾರ್ಗನ್ ಪ್ರಶಂಸಿಸಿದ್ದು, ಆತನ ಆಟ ಕೋಲ್ಕತ್ತಾ ನೈಟ್ ರೈಡರ್ಸ್ ಆಡಲು ಬಯಸುವ ಆಕ್ರಮಣಕಾರಿ ಬ್ರ್ಯಾಂಡ್ ಆಫ್ ಕ್ರಿಕೆಟ್ ಅನ್ನು ಸೂಚಿಸಿದೆ ಎಂದು ತಿಳಿಸಿದ್ದಾರೆ.
ಬೌಲರ್ಗಳು ಆರ್ಸಿಬಿಯನ್ನು ಕೇವಲ 92 ರನ್ಗಳಿಗೆ ನಿಯಂತ್ರಿಸಿದರೆ, ಆರಂಭಿಕರಾದ ಅಯ್ಯರ್ ಅಜೇಯ 41 ಮತ್ತು ಶುಬ್ಮನ್ ಗಿಲ್ 48 ರನ್ಗಳಿಸಿ ಕೆಕೆಆರ್‌ಗೆ 9 ವಿಕೆಟ್ಗಳ ಜಯ ತಂದುಕೊಟ್ಟರು. ಗಿಲ್ 34 ಎಸೆತಗಳಲ್ಲಿ 6 ಬೌಂಡರಿ ಮತ್ತು ಒಂದು ಸಿಕ್ಸರ್‌ಸಹಿತ 48 ಮತ್ತು ವೆಂಕಟೇಶ್ 27 ಎಸೆತಗಳಲ್ಲಿ 7 ಬೌಂಡರಿ ಮತ್ತು ಒಂದು ಸಿಕ್ಸರ್ ಸಹಿತ 41 ರನ್ಗಳಿಸಿ ಕೆಕೆಆರ್‌ಗೆ 10 ಓವರ್ಗಳಲ್ಲಿ ಗೆಲುವು ತಂದುಕೊಟ್ಟರು.
ವೆಂಕಿ ಆರಂಭಿಕನಾಗಿ ಬಂದು, ಆ ರೀತಿ ಪ್ರದರ್ಶನ ತೋರಿದ್ದು ಅದ್ಭುತವಾಗಿತ್ತು ಎಂದು ನಾನು ಭಾವಿಸುತ್ತೇನೆ. ಖಂಡಿತವಾಗಿ ಅದು ನಾವು ಆಡಲು ಬಯಸುವ ಮಾದರಿಯಾಗಿದೆ. ನಾವು ನಮ್ಮ ಗುಂಪಿನಲ್ಲಿ ಆ ರೀತಿಯ ಹಲವಾರು ಪ್ರತಿಭೆಗಳನ್ನು ಒಳಗೊಂಡಿದ್ದೇವೆ ಎಂದು ಮಾರ್ಗನ್ ಪಂದ್ಯದ ನಂತರ ನಡೆದ ಮಾಧ್ಯಮ ಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಅಯ್ಯರ್ ತುಂಬಾ ಅಗ್ರೆಸ್ಸಿವ್ ಆಗಿದ್ದು, ಇನಿಂಗ್ಸ್ ಉದ್ದಕ್ಕೂ ತೀವ್ರ ನಿಯಂತ್ರಣದೊಂದಿಗೆ ಆಡಲು ಯಶಸ್ವಿಯಾದರು. ಶುಬ್ಮನ್ ಗಿಲ್ ಜೊತೆಗಿನ ಅವರ ಆರಂಭಿಕ ಜೊತೆಯಾಟ ನೋಡಲು ಸುಂದರವಾಗಿತ್ತು ಎಂದು ಮಾರ್ಗನ್ ಹೇಳಿದರು.
ಇದನ್ನೂ ಓದಿ: IPL: ಆರ್‌ಸಿಬಿ ವಿರುದ್ಧ ಕೆಕೆಆರ್‌ಗೆ ಅಮೋಘ ಗೆಲುವು