ಪುಣೆ: ಐಪಿಎಲ್ನ ಅತ್ಯಂತ ಯಶಸ್ವಿ ತಂಡವಾಗಿರುವ ಮುಂಬೈ ಇಂಡಿಯನ್ಸ್ ಪ್ರಸ್ತುತ ಆವೃತ್ತಿಯಲ್ಲಿ ಸತತ ನಾಲ್ಕು ಪಂದ್ಯಗಳನ್ನು ಸೋಲು ಕಂಡು ಕೆಟ್ಟ ಆರಂಭ ಪಡೆದುಕೊಂಡಿದೆ. ಆದರೆ ತಂಡದ ನಿರ್ದೇಶಕ ಜಹೀರ್ ಖಾನ್ ಮುಂಬೈ ತಂಡಕ್ಕೆ ಆ ಒಂದು ಗೆಲುವು ಮತ್ತು ಸ್ಪಾರ್ಕ್ ಸಿಕ್ಕಿದ್ದೇ ಆದರೆ ತಂಡ ಟ್ರ್ಯಾಕ್ಗೆ ಮರಳಲಿದೆ ಎಂದು ಹೇಳಿದ್ದಾರೆ. ಐದು ಬಾರಿ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಟ್ರೋಫಿ ಎತ್ತಿ ಹಿಡಿದಿರುವ ಮುಂಬೈ ಇಂಡಿಯನ್ಸ್ ತಂಡ 2022ರ ಐಪಿಎಲ್ನಲ್ಲಿ ಕಳೆದ ನಾಲ್ಕು ಪಂದ್ಯಗಳಲ್ಲೂ ಯಾವುದೇ ಪೈಪೋಟಿ ಇಲ್ಲದೆ ಸೋಲು ಕಂಡಿದೆ.
'ನಾವು ಇನ್ನೂ 11 ಲೀಗ್ ಪಂದ್ಯಗಳನ್ನು ಆಡಬೇಕಿದೆ. ಸತತವಾಗಿ ಗೆಲುವು ಪಡೆಯಬೇಕಿದೆ. ನೀವು ಈ ಟೂರ್ನಿಯಲ್ಲಿ ಸತತ ಸೋಲು ಕಂಡಿರುವ ತಂಡಗಳನ್ನು ಮತ್ತು ನಂತರ ಜಯದ ಶಿಖರವನ್ನೇರಿರುವುದನ್ನು ನೋಡಿರಬಹುದು. ಇದು ಕೇವಲ ಒಂದು ಜಯದ ವಿಷಯವಾಗಿದೆ' ಎಂದು ಭಾರತದ ಮಾಜಿ ವೇಗಿ ಹೇಳಿದ್ದಾರೆ.
ಮುಂಬೈ ಸತತ ಸೋಲು ಕಾಣುತ್ತಿರುವುದಕ್ಕೆ ಕಾರಣವೇನು ಎಂದು ಕೇಳಿದ್ದಕ್ಕೆ ಉತ್ತರಿಸಿದ ಜಹೀರ್, 'ಮುಂಬೈ ತಂಡ ಪಂದ್ಯವನ್ನು ತುಂಬಾ ಹತ್ತಿರಕ್ಕೆ ತೆಗೆದುಕೊಂಡು ಹೋಗುವುದರಲ್ಲಿ ವಿಫಲವಾಗುತ್ತಿದೆ. ಇಡೀ ಪಂದ್ಯದಲ್ಲಿ ತಂಡ ಯಾವುದೇ ಸನ್ನಿವೇಶದಲ್ಲಿ ತನ್ನ ಹಿಡಿತಕ್ಕೆ ತೆಗದುಕೊಳ್ಳಲಾಗುತ್ತಿಲ್ಲ. ನೀವು ಪಂದ್ಯದಲ್ಲಿ ಆ ಸನ್ನಿವೇಶಕ್ಕೆ ಹತ್ತಿರವಾದರೆ ಪಂದ್ಯ ನಿಮ್ಮ ಕಡೆಗೆ ಶಿಫ್ಟ್ ಆಗುತ್ತದೆ. ಪ್ರಸ್ತುತ ನಾವು ತಂಡವಾಗಿ ಅದನ್ನು ಸಾಧಿಸಲು ವಿಫಲರಾಗುತ್ತಿದ್ದು, ಮುಂದಿನ ಪಂದ್ಯಗಳಲ್ಲಿ ಅದರ ಕಡೆಗೆ ಹೆಚ್ಚಿನ ಗಮನ ಹರಿಸಬೇಕಾಗಿದೆ' ಎಂದು ಅವರು ತಿಳಿಸಿದ್ದಾರೆ.
ಮುಂಬೈ ಇಂಡಿಯನ್ಸ್ 2022ರಲ್ಲಿ ಈಗಾಗಲೇ ಆರ್‌ಸಿಬಿ, ಕೆಕೆಆರ್, ರಾಜಸ್ಥಾನ್ ರಾಯಲ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋಲು ಕಂಡಿದೆ. ಮುಂದಿನ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಆಡಲಿದೆ.
ಇದನ್ನೂ ಓದಿ:ಸಹೋದರಿ ಸಾವು: ಮನೆಗೆ ತೆರಳಿದ ಆರ್‌ಸಿಬಿ ಆಟಗಾರ ಹರ್ಷಲ್ ಪಟೇಲ್