ಮುಂಬೈ(ಮಹಾರಾಷ್ಟ್ರ): ಐಪಿಎಲ್ 16ನೇ ಸೀಸನ್ ಅಹಮದಾಬಾದ್‌ನಲ್ಲಿ ಆರಂಭವಾಗಿದ್ದು, ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ ಗೆದ್ದು ಶುಭಾರಂಭ ಮಾಡಿದೆ. ಇದಕ್ಕೂ ಮುನ್ನ ಅಂದ್ರೆ ಮಾರ್ಚ್ 30ರಂದು ಐಪಿಎಲ್ ತಂಡದ ನಾಯಕರೊಂದಿಗೆ ವಿಶೇಷ ಫೋಟೋಶೂಟ್ ನಡೆಸಲಾಗಿತ್ತು. ಇದರಲ್ಲಿ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಹೊರತುಪಡಿಸಿ ಉಳಿದ 9 ತಂಡಗಳ ನಾಯಕರು ಭಾಗವಹಿಸಿದ್ದರು. ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕ ಏಡನ್ ಮಾರ್ಕ್ರಾಮ್ ಅಲಭ್ಯವಾಗಿರುವುದರಿಂದ ಉಪನಾಯಕ ಭುವನೇಶ್ವರ್ ಕುಮಾರ್ ಫೋಟೋಶೂಟ್ನಲ್ಲಿ ಭಾಗವಹಿಸಿದ್ದರು. ಆದರೆ ಮುಂಬೈನಲ್ಲಿ ಇದ್ದರೂ ರೋಹಿತ್ ಶರ್ಮಾ ಈ ಫೋಟೋಶೂಟ್ಗೆ ಬರಲಾಗಲಿಲ್ಲ.
ರೋಹಿತ್ ಗೈರುಹಾಜರಿ ಬಗ್ಗೆ ಎಲ್ಲೆಡೆ ಚರ್ಚೆ ಆರಂಭವಾಗಿತ್ತು. ಈ ವೇಳೆ ಅವರು ಗಾಯಗೊಂಡಿದ್ದಾರೆ ಎಂಬ ಸುದ್ದಿಯೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಇದಲ್ಲದೆ, ಭಾನುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಂದ್ಯದಿಂದ ಹಿಟ್‌ಮ್ಯಾನ್ ದೂರವಿರುತ್ತಾರೆ ಎಂಬ ಮಾತುಗಳು ಕೂಡ ಕೇಳಿ ಬಂದಿದ್ದವು. ಇದರಿಂದ ಅಭಿಮಾನಿಗಳಲ್ಲಿ ಆತಂಕ ಶುರುವಾಗಿತ್ತು. ಆದರೆ ಅವೆಲ್ಲವೂ ನಿಜವಲ್ಲ ಎಂಬುದು ಗೊತ್ತಾಗಿತ್ತು.

ಓದಿ: IPL 2023: ಐಪಿಎಲ್ ಟೂರ್ನಿಯಲ್ಲಿ ಗುಜರಾತ್ ಟೈಟನ್ಸ್ ಶುಭಾರಂಭ
ಇತ್ತೀಚಿನ ಮಾಹಿತಿ ಪ್ರಕಾರ ಅನಾರೋಗ್ಯದ ಕಾರಣ ರೋಹಿತ್ ಈ ಫೋಟೋ ಶೂಟ್ ಮಿಸ್ ಮಾಡಿಕೊಂಡಿದ್ದಾರೆ. ಅದೂ ಅಲ್ಲದೆ ಭಾನುವಾರ ನಡೆಯಲಿರುವ ಬೆಂಗಳೂರು ವಿರುದ್ಧದ ಪಂದ್ಯಕ್ಕೂ ಅವರು ಲಭ್ಯವಾಗುವುದು ಖಚಿತವಾಗಿದೆ. ಅವರ ಆರೋಗ್ಯ ಸಮಸ್ಯೆ ಚಿಕ್ಕದಾಗಿದ್ದು, ಅಭಿಮಾನಿಗಳು ಆತಂಕಪಡುವ ಅಗತ್ಯವಿಲ್ಲ ಎಂದು ತಂಡದ ಆಡಳಿತ ಮಂಡಳಿ ತಿಳಿಸಿದೆ.
ಅಭ್ಯಾಸ ಪಂದ್ಯದಲ್ಲಿ ಹಿಟ್‌ಮ್ಯಾನ್ ಅಬ್ಬರ..: ಭಾನುವಾರ ನಡೆಯಲಿರುವ ಪಂದ್ಯಕ್ಕಾಗಿ ರೋಹಿತ್ ಪಡೆ ಕಠಿಣ ಅಭ್ಯಾಸ ನಡೆಸುತ್ತಿದೆ. ನಾಯಕ ರೋಹಿತ್ ಶರ್ಮಾ ಕೂಡ ತಂಡದೊಂದಿಗೆ ಅಭ್ಯಾಸ ನಡೆಸುತ್ತಿದ್ದಾರೆ. ಅಭ್ಯಾಸದ ವೇಳೆ ರೋಹಿತ್ ತಮ್ಮದೇ ಶೈಲಿಯಲ್ಲಿ ಶಾಟ್‌ಗಳನ್ನು ಆಡುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದರು. ಅಂತಹ ಲಾಫ್ಟೆಡ್ ಶಾಟ್‌ನೊಂದಿಗೆ ಅವರು ಸಿಕ್ಸರ್ ಬಾರಿಸುವ ವಿಡಿಯೋವನ್ನು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ. ಕಳೆದ ವರ್ಷದ ಐಪಿಎಲ್‌ನಲ್ಲಿ ರೋಹಿತ್ ಪ್ರದರ್ಶನ ಕಳಪೆಯಾಗಿತ್ತು. ಅವರು 14 ಪಂದ್ಯಗಳಲ್ಲಿ 19.14 ಸರಾಸರಿಯಲ್ಲಿ 268 ರನ್ ಗಳಿಸಿದರು. ಆ ಋತುವಿನಲ್ಲಿ ತಂಡವು ಸತತ 8 ಸೋಲುಗಳೊಂದಿಗೆ ಕೆಟ್ಟ ದಾಖಲೆ ರಚಿಸಿದ್ದು ಗಮನಾರ್ಹ..
ಮುಂಬೈ ಪೂರ್ಣ ತಂಡ: ರೋಹಿತ್ ಶರ್ಮಾ (ನಾಯಕ), ಟಿಮ್ ಡೇವಿಡ್, ಡೆವಾಲ್ಡ್ ಬ್ರೆವಿಸ್, ಜೋಫ್ರಾ ಆರ್ಚರ್, ರಮಣ್‌ದೀಪ್ ಸಿಂಗ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಟ್ರಿಸ್ಟಿಯನ್ ಸ್ಟಬ್ಸ್, ಜಸ್‌ಪ್ರೀತ್ ಬುಮ್ರಾ, ಅರ್ಜುನ್ ತೆಂಡೂಲ್ಕರ್, ಅರ್ಷದ್ ಖಾನ್, ಪಿಯೂಷ್ ಚಾವ್ಲಾ, ಕಾರ್ತಿಕೇಯ, ಹೃತಿಕ್ ಶೋಕೀನ್, ಜೇಸನ್ ಬೆಹ್ರೆನ್ಡಾಫ್, ಆಕಾಶ್ ಮಾಧವಾಲ್, ಕ್ಯಾಮೆರಾನ್ ಗ್ರೀನ್, ಜೇ ರಿಚರ್ಡ್ಸನ್, ಡುವಾನ್ ಜಾನ್ಸೆನ್, ವಿಷ್ಣು ವಿನೋದ್, ಶಮ್ಸ್ ಮುಲಾನಿ, ನೆಹಾಲ್ ವಧೇರಾ, ರಾಘವ್ ಗೋಯಲ್.
ಓದಿ: ಐಪಿಎಲ್ ನಾಯಕರ ಫೊಟೋ ಶೂಟ್ಗೆ ರೋಹಿತ್ ಶರ್ಮಾ ಗೈರು: ಟ್ವಿಟರ್ನಲ್ಲಿ ಅಭಿಮಾನಿಗಳಿಂದ ಟ್ರೋಲ್