ಲಕ್ನೋ (ಉತ್ತರ ಪ್ರದೇಶ): ದೆಹಲಿ ಕ್ಯಾಪಿಟಲ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ತಂಡ 50 ರನ್ಗಳಿಂದ ಜಯ ದಾಖಲಿಸಿದೆ. 194 ರನ್ಗಳ ಗುರಿ ಬೆನ್ನಟ್ಟಿದ ದೆಹಲಿ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 143 ರನ್ ಗಳಿಸಲಷ್ಟೇ ಶಕ್ತವಾಯಿತು. ಲಕ್ನೋ ಪರ ಮಾರ್ಕ್ ವುಡ್ ಕೇವಲ 14 ರನ್ ನೀಡಿ 5 ವಿಕೆಟ್ ಪಡೆದರು.
ಬೃಹತ್ ಟಾರ್ಗೆಟ್ ಬೆನ್ನಟ್ಟಿದ ದೆಹಲಿ ಕ್ಯಾಪಿಟಲ್ಸ್ ತಂಡ ಕೊಂಚ ಉತ್ತಮ ಆರಂಭವನ್ನೇ ಪಡೆಯಿತು. ಪೃಥ್ವಿ ಶಾ ಮತ್ತು ಡೇವಿಡ್ ವಾರ್ನರ್ 4.2 ಓವರ್ಗಳಲ್ಲಿ 41 ರನ್ಗಳನ್ನು ಕಲೆ ಹಾಕಿದರು. ಆದರೆ, ನಂತರದ 7 ರನ್ಗಳ ಅಂತರದಲ್ಲಿ ಮಾರ್ಕ್ ವುಡ್ ಪ್ರಮುಖ ಮೂರು ವಿಕೆಟ್ಗಳನ್ನು ಕಿತ್ತು ದೆಹಲಿ ತಂಡಕ್ಕೆ ಶಾಕ್ ನೀಡಿದರು.
4 ಓವರ್ನ 3 ಮತ್ತು 4ನೇ ಎಸೆತದಲ್ಲಿ ಸತತ ಎರಡು ವಿಕೆಟ್ಗಳನ್ನು ಮಾರ್ಕ್ ವುಡ್ ಉರುಳಿಸಿದರು. 9 ಎಸೆತಗಳನ್ನು ಎದುರಿಸಿ ಎರಡು ಬೌಂಡರಿಗಳ ಸಮೇತ 12 ರನ್ ಬಾರಿಸಿದ್ದ ಪೃಥ್ವಿ ಅವರನ್ನು ಬೋಲ್ಡ್ ಮಾಡಿದರು. ಇದರ ಬೆನ್ನಲ್ಲೇ ಕ್ರೀಸ್ಗೆ ಬಂದ ಮಿಚೆಲ್ ಮಾರ್ಷ್ ಅವರ ವಿಕೆಟ್ ಕಿತ್ತಿ ಶೂನ್ಯಕ್ಕೆ ಪೆವಿಲಿಯನ್ ದಾರಿ ತೋರಿಸಿದರು. ನಂತರದಲ್ಲಿ 6 ಓವರ್ನ ಕೊನೆಯ ಎಸತೆದಲ್ಲಿ 4 ರನ್ ಗಳಿಸಿದ್ದ ಸರ್ಫಾರಾಜ್ ಖಾನ್ ಅವರ ವಿಕೆಟ್ ಕೂಡ ಮಾರ್ಕ್ ವುಡ್ ಪಡೆದರು. ಇದರಿಂದ 48 ರನ್ಗಳು ಆಗುವಷ್ಟರಲ್ಲಿ ಮೂರು ವಿಕೆಟ್ಗಳನ್ನು ಕಳೆದುಕೊಂಡು ದೆಹಲಿ ದಿಢೀರ್ ಕುಸಿಯಿತು.
ಮತ್ತೊಂದೆಡೆ, ತಮ್ಮ ಆಟ ಮುಂದುವರೆಸಿದ ಡೇವಿಡ್ ವಾರ್ನರ್ ಆಕರ್ಷಕ ಅರ್ಧಶತಕ ಬಾರಿಸಿದರು. ವಾರ್ನರ್ಗೆ ರಿಲೀ ರೋಸೌವ್ ಉತ್ತಮ ಸಾಥ್ ನೀಡಿದರು. 20 ಎಸತೆಗಳಲ್ಲಿ ಮೂರು ಬೌಂಡರಿ ಮತ್ತು ಒಂದು ಸಿಕ್ಸರ್ ಸಿಡಿದ ರೋಸೌವ್ 30 ರನ್ಗಳ ಕೊಡುಗೆ ನೀಡಿ ರವಿ ಬಿಷ್ಣೋಯಿ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ರೋವ್ಮನ್ ಪೋವೆಲ್ (1) ಅವರನ್ನು ಬಿಷ್ಣೋಯಿ ಎಲ್ಬಿ ಬಲೆಗೆ ಕೆಡವಿದರು.
15ನೇ ಓವರ್ನಲ್ಲಿ ಆವೇಶ್ ಖಾನ್ ಎರಡು ವಿಕೆಟ್ಗಳನ್ನು ಪಡೆದು ದೆಹಲಿ ತಂಡ ಮತ್ತಷ್ಟು ಕುಸಿಯಲು ಕಾರಣವಾದರು. ಈ ಓವರ್ನ ಮೂರನೇ ಬಾಲ್ನಲ್ಲಿ ಅಮನ್ ಹಕೀಮ್ ಖಾನ್ (4) ಕ್ಯಾಚ್ ಕೊಟ್ಟು ನಿರ್ಗಮಿಸಿದರು. 48 ಬಾಲ್ಗಳಲ್ಲಿ 7 ಬೌಂಡರಿಗಳ ಸಮೇತ 56 ರನ್ ಗಳಿಸಿದ್ದ ವಾರ್ನರ್ ಕೂಡ 15ನೇ ಓವರ್ನ ಕೊನೆಯ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ಅಕ್ಷರ್ ಪಟೇಲ್ (16), ಚೇತನ್ ಸಕರಿಯಾ (4) ವಿಕೆಟ್ ಪಡೆದು ವುಡ್ ದೆಹಲಿ ತಂಡವನ್ನು ಕಟ್ಟಿ ಹಾಕಿದರು. ಲಕ್ನೋ ತಂಡದ ಪರ ಮಾರ್ಕ್ ವುಡ್ 5, ರವಿ ಬಿಷ್ಣೋಯಿ ಮತ್ತು ಆವೇಶ್ ಖಾನ್ ತಲಾ ಎರಡು ವಿಕೆಟ್ ಪಡೆದರು.
ಇದಕ್ಕೂ ಮುನ್ನ ಕೆರಿಬಿಯನ್ ಆಟಗಾರ ಕೈಲ್ ಮೇಯರ್ಸ್ ಅವರ ಅಬ್ಬರದ ಅರ್ಧಶತಕದ ನೆರವಿನಿಂದ ಲಕ್ನೋ ಸೂಪರ್ ಜೈಂಟ್ಸ್ ತಂಡ 193 ರನ್ಗಳ ಪೇರಿಸಿತ್ತು. ನಾಯಕ ಕೆಎಲ್ ರಾಹುಲ್ ಪ್ರಥಮ ಪಂದ್ಯದಲ್ಲೇ ಎಡವಿ 8 ರನ್ಗೆ ಔಟ್ ಆದರು. ಯುವ ವೇಗಿ ಚೇತನ್ ಸಕರಿಯಾ ಕೆಎಲ್ ರಾಹುಲ್ ವಿಕೆಟ್ ತೆಗೆದು ಎಲ್ಎಸ್ಜಿಗೆ ಆರಂಭಿಕ ಆಘಾತ ನೀಡಿದರು.
ಕೆರಿಬಿಯನ್ ದೈತ್ಯ ಕೈಲ್ ಮೇಯರ್ಸ್ ಮೀನಾ ಮೇಷ ಎಣಿಸದೇ ಬಿರುಸಿನಲ್ಲಿ ಬ್ಯಾಟ್ ಬೀಸಿದರು. ನಾಯಕನ ವಿಕೆಟ್ ಬಿದ್ದರೂ ಅಂಜದೇ ಎರಡನೇ ವಿಕೆಟ್ಗೆ 88 ರನ್ ಜೊತೆಯಾಟ ಆಡಿದರು. ಕೈಲ್ ಮೇಯರ್ಸ್ 38 ಬಾಲ್ ಎದುರಿಸಿ 7 ಸಿಕ್ಸ್ ಹಾಗೂ 2 ಬೌಂಡರಿಯಿಂದ 73 ರನ್ ಗಳಿಸಿ ತಂಡಕ್ಕೆ ನೆರವಾದರು. ಮಾರ್ಕಸ್ ಸ್ಟೊಯಿನಿಸ್ (12), ದೀಪಕ್ ಹೂಡಾ (17), ಕೃನಾಲ್ ಪಾಂಡ್ಯ (15*), ನಿಕೋಲಸ್ ಪೂರನ್ (36), ಆಯುಷ್ ಬಡೋನಿ (18) ಮತ್ತು ಕೃಷ್ಣಪ್ಪ ಗೌತಮ್ (ಇಂಪ್ಯಾಕ್ಟ್ ಪ್ಲೇಯರ್) 6* ರನ್ ಗಳಿಸಿದರು. ಇದರಿಂದ ಲಕ್ನೋ ಸೂಪರ್ ಜೈಂಟ್ಸ್ 6 ವಿಕೆಟ್ ನಷ್ಟದಲ್ಲಿ 193 ರನ್ ಗಳಿಸಿತ್ತು.
ಇದನ್ನೂ ಓದಿ: IPL 2023: ದೆಹಲಿ ಕಾಪಿಟಲ್ಸ್ VS ಲಕ್ನೋ ಸೂಪರ್ ಜೈಂಟ್ಸ್... ತವರಿನಲ್ಲಿ ಶುಭಾರಂಭ ಮಾಡುತ್ತಾ ರಾಹುಲ್ ಟೀಂ