ಅಹಮದಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ನ 15ನೇ ಆವೃತ್ತಿಯ ಫೈನಲ್ ಪಂದ್ಯ ನಾಳೆ ನಡೆಯಲಿದೆ. ಅಹಮದಾಬಾದ್ನ ನರೇಂದ್ರ ಮೋದಿ ಮೈದಾನದಲ್ಲಿ ಪ್ರಶಸ್ತಿಗೋಸ್ಕರ ರಾಜಸ್ಥಾನ ರಾಯಲ್ಸ್ ಮತ್ತು ಗುಜರಾತ್ ಟೈಟನ್ಸ್ ಸೆಣಸಾಟ ನಡೆಸಲಿವೆ. ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಚೊಚ್ಚಲ ಟೂರ್ನಿಯಲ್ಲೇ ಚಾಂಪಿಯನ್ ಆಗುವ ಕನಸು ಕಾಣ್ತಿದ್ದರೆ, ರಾಜಸ್ಥಾನ ಮತ್ತೊಮ್ಮೆ ಪ್ರಶಸ್ತಿ ಗೆಲ್ಲುವ ಇರಾದೆಯಲ್ಲಿದೆ.
ವಿಶ್ವದ ಅತಿದೊಡ್ಡ ಕ್ರಿಕೆಟ್ ಮೈದಾನದಲ್ಲಿ ಫೈನಲ್ ಪಂದ್ಯ ನಡೆಯುತ್ತಿರುವ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಕ್ರಿಕೆಟ್ ಪ್ರೇಮಿಗಳು ಮೈದಾನಕ್ಕೆ ಆಗಮಿಸಲಿದ್ದಾರೆ. ಅದಕ್ಕಾಗಿ ಗುಜರಾತ್ ಕ್ರಿಕೆಟ್ ಅಸೋಸಿಯೇಷನ್ ಹಾಗೂ ಬಿಸಿಸಿಐ ಎಲ್ಲ ರೀತಿಯ ತಯಾರಿ ಮಾಡಿಕೊಂಡಿದೆ. ಫೈನಲ್ ಪಂದ್ಯ ವೀಕ್ಷಣೆಯ ಟಿಕೆಟ್ಗಳು ಕೆಲವೇ ಗಂಟೆಗಳಲ್ಲಿ ಬಿಕರಿಯಾಗಿವೆ.
ಫೈನಲ್ ಪಂದ್ಯ ನೀಡುವ ಉದ್ದೇಶದಿಂದ ಕ್ರಿಕೆಟ್ ಪ್ರೇಮಿಗಳು 800 ರೂಪಾಯಿ ಟಿಕೆಟ್ ಬರೋಬ್ಬರಿ 8 ಸಾವಿರ ರೂಪಾಯಿ ಹಾಗೂ 1,500 ರೂಪಾಯಿ ಮೌಲ್ಯದ ಟಿಕೆಟ್ ದಾಖಲೆಯ 15,000 ರೂಪಾಯಿ ನೀಡಿ ಖರೀದಿ ಮಾಡಿರುವುದಾಗಿ ತಿಳಿದು ಬಂದಿದೆ. ನರೇಂದ್ರ ಮೋದಿ ಮೈದಾನದಲ್ಲಿ ದಾಖಲೆಯ 1.32 ಲಕ್ಷ ಪ್ರೇಕ್ಷಕರು ಕುಳಿತುಕೊಂಡು ಪಂದ್ಯ ವೀಕ್ಷಣೆ ಮಾಡಬಹುದಾಗಿದೆ. ಹೀಗಾಗಿ, ನಾಳೆಯ ಪಂದ್ಯಕ್ಕೆ ಹೆಚ್ಚಿನ ಜನರು ಆಗಮಿಸಲಿದ್ದಾರೆ.
65 ಸಾವಿರ ರೂಪಾಯಿ ಟಿಕೆಟ್: 15ನೇ ಆವೃತ್ತಿ ಫೈನಲ್ ಪಂದ್ಯ ಹಾಗೂ ಕ್ವಾಲಿಫೈಯರ್ 2 ಪಂದ್ಯ ವೀಕ್ಷಣೆ ಮಾಡಲು ಬಿಸಿಸಿಐ ಬರೋಬ್ಬರಿ 65 ಸಾವಿರ ರೂಪಾಯಿ ಟಿಕೆಟ್ ಸೇಲ್ ಮಾಡಿದೆ. ಇದಕ್ಕಾಗಿ ವಿಶೇಷ ಕ್ಯಾಬಿನ್, ಊಟ, ಟಿವಿ ಹಾಗೂ ಆರಾಮದಾಯಕ ಸೋಫಾ ಒದಗಿಸಲಾಗಿದೆ. ಈ ಟಿಕೆಟ್ ಕೆಲ ನಿಮಿಷಗಳಲ್ಲೇ ಸೋಲ್ಡ್ ಔಟ್ ಆಗಿವೆ. ಇನ್ನು ಫೈನಲ್ ಪಂದ್ಯ ವೀಕ್ಷಣೆ ಮಾಡಲು ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಆಗಮಿಸಿರುವ ಕಾರಣ ಮೈದಾನದ ಸುತ್ತಮುತ್ತಲಿನ ಹೋಟೆಲ್, ರೆಸ್ಟೊರೆಂಟ್ ದುಬಾರಿಯಾಗಿವೆ ಎಂದು ತಿಳಿದು ಬಂದಿದೆ.
ನಾಳೆಯ ಫೈನಲ್ ಪಂದ್ಯ ಆರಂಭಗೊಳ್ಳುವುದಕ್ಕೂ ಮುಂಚಿತವಾಗಿ ಕೆಲ ಹೊತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜನೆಗೊಂಡಿದ್ದು, ಬಾಲಿವುಡ್ ನಟ ರಣವೀರ್ ಸಿಂಗ್ ಸೇರಿದಂತೆ ಅನೇಕರು ಆಗಮಿಸಲಿದ್ದಾರೆ. ಖ್ಯಾತ ಸಂಗೀತ ಮಾಂತ್ರಿಕ ಎ.ಆರ್ ರೆಹಮಾನ್ ಕೂಡ ಆಗಮಿಸಲಿದ್ದಾರೆ ಎಂದು ಬಿಸಿಸಿಐ ಈಗಾಗಲೇ ತಿಳಿಸಿದೆ. ಇನ್ನೂ ಫೈನಲ್ ಪಂದ್ಯ ವೀಕ್ಷಣೆ ಮಾಡಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಬರುವ ಸಾಧ್ಯತೆ ಇದೆ.