ಮುಂಬೈ: ಸನ್ರೈಸರ್ಸ್ ವಿರುದ್ಧದ ರೋಚಕ ಪಂದ್ಯದಲ್ಲಿ ಕೊನೆ ಓವರ್ನಲ್ಲಿ ಮೂರು ಸಿಕ್ಸರ್ ಸಿಡಿಸಿದ ರಶೀದ್ ಖಾನ್ ಗುಜರಾತ್ ಟೈಟನ್ಸ್ ತಂಡವನ್ನ ಗೆಲುವಿನ ದಡ ಸೇರಿಸಿದರು. ಈ ಮೂಲಕ ಪಾಯಿಂಟ್ ಪಟ್ಟಿಯಲ್ಲಿ ತಂಡ ಅಗ್ರಸ್ಥಾನದಲ್ಲೇ ಮುಂದುವರೆದಿದೆ.
ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ 40ನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಸನ್ರೈಸರ್ಸ್ ಹೈದರಾಬಾದ್ ತಂಡ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ನಷ್ಟಕ್ಕೆ 195ರನ್ಗಳಿಕೆ ಮಾಡಿತು. ತಂಡದ ಪರ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ 65ರನ್ಗಳಿಸಿದ್ರೆ, ಮರ್ಕ್ರಾಮ್ 56ರನ್ ಹಾಗೂ ಕೊನೆಯ ಓವರ್ನಲ್ಲಿ ಭರ್ಜರಿ ಬ್ಯಾಟ್ ಬೀಸಿದ ಶಶಾಂಕ್ ಸಿಂಗ್ ಕೇವಲ 6 ಎಸೆತಗಳಲ್ಲಿ 25ರನ್ಗಳಿಕೆ ಮಾಡಿದರು.
ಗುಜರಾತ್ ಟೈಟನ್ಸ್ ಪರ ಮೊಹಮ್ಮದ್ ಶಮಿ 39 ವಿಕೆಟ್ಗೆ 3 ವಿಕೆಟ್, ಯಶ್ ದಯಾಲ್ 24ಕ್ಕೆ1, ಅಲ್ಜಾರಿ ಜೋಶೆಫ್ 35ಕ್ಕೆ1 ವಿಕೆಟ್ ಪಡೆದರು.
196ರನ್ಗಳ ಗುರಿ ಬೆನ್ನತ್ತಿದ ಗುಜರಾತ್ ಟೈಟನ್ಸ್ ಉತ್ತಮ ಆರಂಭ ಪಡೆದುಕೊಂಡಿತು. ಅರಂಭಿಕರಾಗಿ ಕಣಕ್ಕಿಳಿದ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಹಾಗೂ ಶುಬ್ಮನ್ ಗಿಲ್ ಮೊದಲ ವಿಕೆಟ್ನಷ್ಟಕ್ಕೆ 69ರನ್ಗಳಿಕೆ ಮಾಡಿದರು. ಈ ವೇಳೆ 22ರನ್ಗಳಿಕೆ ಮಾಡಿದ ಗಿಲ್ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಬಂದ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯಾ ಕೇವಲ 10ರನ್ಗಳಿಸಿ ಉಮ್ರನ್ ಮಲಿಕ್ ಓವರ್ನಲ್ಲಿ ಔಟಾದರು.
68ರನ್ಗಳಿಕೆ ಮಾಡಿ ಉತ್ತಮವಾಗಿ ಆಡ್ತಿದ್ದ ಸಾಹಾ ಕೂಡ ಉಮ್ರನ್ ಮಲಿಕ್ ಓವರ್ನಲ್ಲಿ ಬೌಲ್ಡ್ ಆಗಿ ವಿಕೆಟ್ ಒಪ್ಪಿಸಿದರು. ಮಧ್ಯಮ ಕ್ರಮಾಂಕದಲ್ಲಿ ಮೈದಾನಕ್ಕೆ ಬಂದ ಮಿಲ್ಲರ್ ಕೂಡ 17ರನ್ಗಳಿಸಿ ಉಮ್ರನ್ ಮಲಿಕ್ ಬೌಲಿಂಗ್ನಲ್ಲೇ ಔಟಾದರು. ಇದಾದ ಬಳಿಕ ಬಂದ ಕನ್ನಡಿಗ ಅಭಿನವ್ ಮನೋಹರ್ ಕೂಡ ತಾವು ಎದುರಿಸಿದ ಮೊದಲ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು.
ತೆವಾಟಿಯಾ-ರಶೀದ್ ಖಾನ್ ಸ್ಫೋಟಕ ಬ್ಯಾಟಿಂಗ್: ತಂಡ ಮೇಲಿಂದ ಮೇಲೆ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೊಳಗಾಗಿದ್ದ ವೇಳೆ ಒಂದಾದ ತೆವಾಟಿಯಾ-ರಾಶೀದ್ ಖಾನ್ ಜೋಡಿ ತಂಡವನ್ನ ಗೆಲುವಿನ ದಡ ಸೇರಿಸಿದರು. ಎದುರಾಳಿ ಬೌಲರ್ಗಳಿಗೆ ಮಾರಕವಾದ ಈ ಜೋಡಿ, ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿತು. ತೆವಾಟಿಯಾ ತಾವು ಎದುರಿಸಿದ 21 ಎಸೆತಗಳಲ್ಲಿ ಅಜೇಯ 40ರನ್ ಹಾಗೂ ರಶೀದ್ ಖಾನ್ ತಾವು ಎದುರಿಸಿದ 11 ಎಸೆತಗಳಲ್ಲಿ 4 ಸಿಕ್ಸರ್ ಸಹಿತ ಅಜೇಯ 31ರನ್ಗಳಿಕೆ ಮಾಡಿದರು. ತಂಡ 20 ಓವರ್ಗಳಲ್ಲಿ 5ವಿಕೆಟ್ನಷ್ಟಕ್ಕೆ 199ರನ್ಗಳಿಸಿ, ಗೆಲುವಿನ ನಗೆ ಬೀರಿತು.
ಸನ್ರೈಸರ್ಸ್ ಹೈದರಾಬಾದ್ ಪರ ಉಮ್ರಾನ್ ಮಲ್ಲಿಕ್ 4 ಓವರ್ಗಳಲ್ಲಿ 5 ವಿಕೆಟ್ ಪಡೆದು ಗಮನ ಸೆಳೆಯುವುದರ ಜೊತೆಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.