ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ನ ಪ್ರಸ್ತುತ 15ನೇ ಆವೃತ್ತಿ ಅರ್ಧ ಮುಕ್ತಾಯವಾಗಿದೆ. ಕ್ರಿಕೆಟ್ ಅಭಿಮಾನಿಗಳಿಗೆ ಐಪಿಎಲ್ ಭರಪೂರ ಮನರಂಜನೆ ನೀಡುತ್ತಿದ್ದು, ಈಗಾಗಲೇ ಕೆಲವು ರೋಮಾಂಚನಕಾರಿ ಪಂದ್ಯಗಳಿಗೂ 2022ನೇ ಆವೃತ್ತಿ ಸಾಕ್ಷಿಯಾಗಿದೆ. ಈಗಾಗಲೇ ಒಂದೆರಡು ತಂಡಗಳು ಪ್ಲೇ ಅಫ್ ಪ್ರವೇಶಿಸುವುದಕ್ಕೆ ಸಿದ್ಧವಾಗಿದ್ದರೆ, ಮತ್ತೆರಡು ತಂಡಗಳು ಬಹುತೇಕ ಹೊರಬೀಳುವುದು ಖಚಿತ.
15ನೇ ಆವೃತ್ತಿಯಲ್ಲಿ ಯಾರೂ ನಿರೀಕ್ಷಿಸದ ರೀತಿಯಲ್ಲಿ ಪ್ರದರ್ಶನ ತೋರಿ ಅಗ್ರಸ್ಥಾನ ಅಲಂಕರಿಸಿರುವ ಗುಜರಾತ್ ಟೈಟನ್ಸ್ ಈ ಆವೃತ್ತಿಯಲ್ಲಿ ಪ್ಲೇ ಆಫ್ ಪ್ರವೇಶಿಸಬಲ್ಲ ತಂಡಗಳಲ್ಲಿ ಮೊದಲ ಸ್ಥಾನದಲ್ಲಿದೆ. ಈಗಾಗಲೇ ಆಡಿರುವ 7 ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯದಲ್ಲಿ ಮಾತ್ರ ಸೋಲುಂಡಿರುವ ಟೈಟನ್ಸ್ 12 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಮೊದಲ ಬಾರಿಗೆ ನಾಯಕನಾಗಿರುವ ಹಾರ್ದಿಕ್ ಪಾಂಡ್ಯ ತಂಡವನ್ನು ದಿಟ್ಟವಾಗಿ ಮುನ್ನಡೆಸುತ್ತಿದ್ದು, ಬ್ಯಾಟಿಂಗ್-ಬೌಲಿಂಗ್ ಎರಡರಲ್ಲೂ ತಂಡಕ್ಕೆ ನಿರ್ಣಾಯಕ ಕೊಡುಗೆ ನೀಡುತ್ತಿದ್ದಾರೆ.
6 ಇನ್ನಿಂಗ್ಸ್ ಮೂಲಕ ಹಾರ್ದಿಕ್ 295 ರನ್ ಸಿಡಿಸಿ ತಂಡದ ಗರಿಷ್ಠ ಸ್ಕೋರರ್ ಆಗಿದ್ದಾರೆ. ತಂಡದಲ್ಲಿ ಶುಬ್ಮನ್ ಗಿಲ್ರಂತಹ ಆರಂಭಿಕ ಬ್ಯಾಟರ್, ಮಧ್ಯಮ ಕ್ರಮಾಂಕದಲ್ಲಿ ಡೇವಿಡ್ ಮಿಲ್ಲರ್ ಅವರಂತಹ ಅನುಭವಿ ತಂಡದ ಬಲವಾಗಿದ್ದಾರೆ. ರಶೀದ್, ಶಮಿ ಮತ್ತು ಫರ್ಗುಸನ್‌ರಂಥ ವಿಶ್ವಶ್ರೇಷ್ಠ ಬೌಲಿಂಗ್ ಬಳಗ ಹೊಂದಿರುವ ಟೈಟನ್ಸ್ ಉಳಿದ 7 ಪಂದ್ಯಗಳಲ್ಲಿ 2 ಅಥವಾ 3 ಪಂದ್ಯಗಳನ್ನು ಗೆದ್ದರೆ ಪ್ಲೇ ಆಫ್ ಖಚಿತ.
ಮೊದಲೆರಡು ಪಂದ್ಯಗಳನ್ನು ಸೋಲು ಕಂಡು ನಂತರ ಸತತ 5 ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ಸನ್ರೈಸರ್ಸ್ ಹೈದರಾಬಾದ್ ಈ ಲಿಸ್ಟ್ನಲ್ಲಿರುವ 2ನೇ ತಂಡ. ಟೈಟನ್ಸ್‌ರಂತೆಯೇ ನೋಡಲು ಐಪಿಎಲ್ನ ಸಾಧಾರಣ ತಂಡವಾಗಿ ಗುರುತಿಸಿಕೊಂಡಿದ್ದು ಸತತ 5 ಸುಲಭ ಗೆಲುವು ಸಾಧಿಸಿ ಮುನ್ನುಗ್ಗುತ್ತಿದೆ. ತಂಡದಲ್ಲಿ ಟಿ20 ಸ್ಪೆಷಲಿಸ್ಟ್ ಎಂದು ಗುರುತಿಸಿಕೊಳ್ಳುವ ಆಟಗಾರರ ಕೊರತೆಯಿದ್ದರೂ ಕೂಡಾ ಸಂಘಟಿತ ಪ್ರದರ್ಶನ ತೋರುವ ಮೂಲಕ ಇತರೆ ತಂಡಗಳಿಗೆ ಸವಾಲಾಗಿ ನಿಂತಿದ್ದು, 2022ರ ಪ್ಲೇ ಆಫ್ ಪ್ರವೇಶಿಸುವ ತಂಡಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ.
ಇವೆರಡು ತಂಡಗಳನ್ನು ಬಿಟ್ಟರೆ, ರಾಜಸ್ಥಾನ್ ರಾಯಲ್ಸ್, ಲಖನೌ ಸೂಪರ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಕೂಡ ಪೈಪೋಟಿಯಲ್ಲಿವೆ. ಆದರೆ ಈ ಮೂರು ತಂಡಗಳು ಗೆಲುವಿಗೆ ಕೆಲವೇ ಆಟಗಾರರನ್ನು ಅವಲಂಬಿಸಿಕೊಂಡಿದ್ದು, ಸಂಘಟಿತ ಪ್ರದರ್ಶನ ತೋರುವಲ್ಲಿ ವಿಫಲವಾಗುತ್ತಿವೆ. ಮೂರರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಪ್ಲೇ ಆಫ್ ಪ್ರವೇಶಿಸುವ ನೆಚ್ಚಿನ ತಂಡವಾಗಿದೆ.
ಮುಂಬೈ -ಚೆನ್ನೈ ಟೂರ್ನಿಯಿಂದ ಔಟ್: ಸತತ 8 ಸೋಲು ಕಂಡಿರುವ 5 ಬಾರಿಯ ಚಾಂಪಿಯನ್ಸ್ ಈಗಾಗಲೇ ಟೂರ್ನಿಯಿಂದ ಹೊರಬಿದ್ದಿದೆ. ಐಪಿಎಲ್ ಇತಿಹಾಸದಲ್ಲೇ ಮೊದಲ 8 ಸೋಲು ಕಂಡ ಮೊದಲ ತಂಡ ಎಂಬ ಕಳಪೆ ದಾಖಲೆಗೆ ತುತ್ತಾಗಿರುವ ಮುಂಬೈ, ಮುಂದಿನ 6 ಪಂದ್ಯಗಳನ್ನು ಮರ್ಯಾದೆಗೋಸ್ಕರ ಗೆಲ್ಲಬೇಕಿದೆ. 4 ಬಾರಿಯ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ಕೂಡ 6 ಸೋಲು ಕಂಡಿದೆ. ಪ್ಲೇ ಆಫ್ ಪ್ರವೇಶಿಸಬೇಕಾದರೆ ಉಳಿದ 6 ಪಂದ್ಯಗಳನ್ನೂ ಗೆದ್ದರೂ ಉಳಿದ ತಂಡಗಳ ಫಲಿತಾಂಶಗಳ ಮೇಲೆ ಅವಲಂಬಿತವಾಗಿದೆ.
ಉಳಿದ ತಂಡಗಳಾದ ಡೆಲ್ಲಿ, ಪಂಜಾಬ್ ಮತ್ತು ಕೆಕೆಆರ್ ಸ್ಪರ್ಧೆಯಿಂದ ಹೊರಬಿದ್ದಿಲ್ಲವಾದರೂ ಇವುಗಳ ಮುಂದಿನ ಹಾದಿ ತುಂಬಾ ಕಠಿಣವಾಗಿದೆ. ಉಳಿದಿರುವ ಪಂದ್ಯಗಳಲ್ಲಿ ಬಹುತೇಕ ಎಲ್ಲಾ ಪಂದ್ಯಗಳನ್ನು ಉತ್ತಮ ರನ್ರೇಟ್ನಲ್ಲಿ ಗೆಲ್ಲಬೇಕಾದ ಒತ್ತಡದಲ್ಲಿವೆ.
ಇದನ್ನೂ ಓದಿ:'ನಮ್ಮಲ್ಲಿ ಅಸೂಯೆ ಜಾಸ್ತಿ, ಕೋಚ್ ಆದಾಗ ವೈಫಲ್ಯ ಅನುಭವಿಸಲೆಂದು ಸಾಕಷ್ಟು ಜನ ಬಯಸಿದ್ದರು'