ಮುಂಬೈ: ಐಪಿಎಲ್ 15ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗೆಲುವು ಸಾಧಿಸಿದೆ. ಸಿಎಸ್ಕೆ ನೀಡಿದ್ದ 131 ರನ್ಗಳ ಸಾಧಾರಣ ಮೊತ್ತ ಬೆನ್ನತ್ತಿದ ಕೆಕೆಆರ್ ತಂಡ 18.3 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 133 ರನ್ಗಳಿಸಿ ವಿಜಯದ ನೆಗೆ ಬೀರಿತು.
ಕೆಕೆಆರ್ ತಂಡಕ್ಕೆ ಅಜಿಂಕ್ಯಾ ರಹಾನೆ ಮತ್ತು ವೆಂಕಟೇಶ್ ಅಯ್ಯರ್ ಉತ್ತಮ ಆರಂಭ ನೀಡಿದರು. ತಮ್ಮ ಕಳಪೆ ಆಟದಿಂದ ಭಾರತ ಟೆಸ್ಟ್ ತಂಡದಿಂದ ಹೊರಬಿದ್ದು, ವೃತ್ತಿ ಬದುಕಿನ ತೂಗುಯ್ಯಾಲೆಯಲ್ಲಿರುವ ಅಜಿಂಕ್ಯಾ ರಹಾನೆ ಈ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದರು. 6 ಬೌಂಡರಿ, 1 ಸಿಕ್ಸರ್ ಸಮೇತ 44 ರನ್ ಚಚ್ಚಿದರು.
ಟಿ-20 ಸ್ಪೆಷಲಿಸ್ಟ್ ಆಗುತ್ತಿರುವ ವೆಂಕಟೇಶ್ ಅಯ್ಯರ್ (16), ನಿತೀಶ್ ರಾಣಾ (21), ಸ್ಯಾಮ್ ಬಿಲ್ಲಿಂಗ್ಸ್(25) ರನ್ ಗಳಿಸಿದರೆ, ತಂಡದ ನಾಯಕತ್ವ ವಹಿಸಿರುವ ಶ್ರೇಯಸ್ ಅಯ್ಯರ್ ಔಟಾಗದೇ 20 ರನ್ ಗಳಿಸಿ ತಂಡಕ್ಕೆ ಜಯ ತಂದುಕೊಟ್ಟರು. ಚೆನ್ನೈ ಪರ ಡ್ವೇನ್ ಬ್ರಾವೋ 3 ವಿಕೆಟ್ ಪಡೆದು ಮಿಂಚಿದರೆ, ಮಿಚೆಲ್ ಸ್ಯಾಂಟನರ್ 1 ವಿಕೆಟ್ ಪಡೆದರು.
ಸಿಎಸ್ಕೆಗೆ ಧೋನಿ ಅರ್ಧಶತಕದ ಬಲ: ಇದಕ್ಕೂ ಮುನ್ನ ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಹಳೆಯ ಹುಲಿ ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ(50) ಅರ್ಧಶತಕ ಬಾರಿಸಿ ತಂಡಕ್ಕೆ ನೆರವಾದರು. ವಿಶೇಷ ಅಂದರೆ ಧೋನಿ ಹಲವು ದಿನಗಳ ಬಳಿಕ ಮತ್ತು ಈ ಆವೃತ್ತಿಯ ಮೊದಲ ಪಂದ್ಯದಲ್ಲೇ ಭರ್ಜರಿ ಬ್ಯಾಟ್ ಬೀಸಿ ಅಭಿಮಾನಿಗಳನ್ನು ರಂಜಿಸಿದರು.
2 ದಿನಗಳ ಹಿಂದಷ್ಟೇ ನಾಯಕತ್ವದಿಂದ ಹಿಂದೆ ಸರಿದಿದ್ದ ಮಹೇಂದ್ರ ಸಿಂಗ್ ಧೋನಿ ಈ ಪಂದ್ಯದಲ್ಲಿ ರಾರಾಜಿಸಿದರು. ತಂಡದ ಬ್ಯಾಟಿಂಗ್ ಬಲವಾಗಿರುವ ಯುವಕರು ಪೆವಿಲಿಯನ್ ಪರೇಡ್ ನಡೆಸುತ್ತಿದ್ದರೆ, ಹಿರಿಯ ಆಟಗಾರ ಯುವಕರನ್ನೇ ನಾಚಿಸುಂತೆ ಬ್ಯಾಟ್ ಬೀಸಿದರು. 7 ಬೌಂಡರಿ 1 ಸಿಕ್ಸರ್ ಸಮೇತ ಬರೋಬ್ಬರಿ 50 ರನ್ ಗಳಿಸಿದರು.
ತಂಡದ ನಾಯಕತ್ವ ವಹಿಸಿಕೊಂಡಿರುವ ರವೀಂದ್ರ ಜಡೇಜಾ 26 ರನ್ ಗಳಿಸಿ ಧೋನಿಗೆ ಸಾಥ್ ನೀಡಿದರು. ಇಬ್ಬರ ನಡುವೆ ಮುರಿಯದ 70 ರನ್ಗಳ ಜೊತೆಯಾಟ ಮೂಡಿಬಂದಿತ್ತು.
ಓದಿ: ಧೋನಿ ಮಿಂಚಿನ ಬ್ಯಾಟಿಂಗ್.. 131 ರನ್ಗಳ ಸಾಧಾರಣ ಮೊತ್ತ ದಾಖಲಿಸಿದ ಸಿಎಸ್ಕೆ