ಅಬುಧಾಬಿ: ಇಂದು ಸಂಜೆ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ನ 32ನೇ ಪಂದ್ಯದಲ್ಲಿ ಬಲಿಷ್ಠ ಮುಂಬೈ ಇಂಡಿಯನ್ಸ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸೆಣಸಾಡಲಿದೆ.
ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿರುವ ಮುಂಬೈ ತಂಡ ಆಡಿರುವ 7 ಪಂದ್ಯಗಳಲ್ಲಿ 5ರಲ್ಲಿ ಜಯ ಸಾಧಿಸಿದ್ದು, 2 ಪಂದ್ಯಗಳಲ್ಲಿ ಸೋಲು ಕಂಡಿದೆ. ಕೋಲ್ಕತ್ತಾ ಕೂಡ ಉತ್ತಮ ಪ್ರದರ್ಶನ ನೀಡಿದ್ದು, 7 ಪಂದ್ಯಗಳ ಪೈಕಿ 4ರಲ್ಲಿ ಜಯ ಸಾಧಿಸಿ 3ರಲ್ಲಿ ಸೋಲು ಕಂಡಿದೆ.
ಮುಂಬೈ ಇಂಡಿಯನ್ಸ್ ತಂಡದಲ್ಲಿ ಬಹುತೇಕ ಬ್ಯಾಟ್ಸ್‌ಮನ್‌ಗಳು ಉತ್ತಮ ಫಾರ್ಮ್‌ನಲ್ಲಿದ್ದು, ತಂಡಕ್ಕೆ ನೆರವಾಗುತ್ತಿದ್ದಾರೆ. ಡಿ ಕಾಕ್, ರೋಹಿತ್, ಸೂರ್ಯಕುಮಾರ್ ಯಾದವ್, ಪೊಲಾರ್ಡ್, ಹಾರ್ದಿಕ್ ಪಾಂಡ್ಯ ಮುಂಬೈನ ಬ್ಯಾಟಿಂಗ್ ಬಲ.
ಬೌಲಿಂಗ್ನಲ್ಲೂ ಮುಂಬೈ ಅತ್ಯುತ್ತಮ ಪ್ರದರ್ಶನ ನೀಡುತ್ತಿದೆ. ಯಾರ್ಕರ್ ಸ್ಪೆಷಲಿಸ್ಟ್ ಬುಮ್ರಾ, ಟ್ರೆಂಟ್ ಬೌಲ್ಟ್, ಜೇಮ್ಸ್ ಪ್ಯಾಟಿನ್ಸನ್, ರಾಹುಲ್ ಚಹರ್ ಅದ್ಭುತವಾಗಿ ಸ್ಪೆಲ್ ಮಾಡುತ್ತಿದ್ದಾರೆ.
ಇತ್ತ ಕೆಕೆಆರ್ ತಂಡ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರಿದ್ದು ಬಲಿಷ್ಠ ತಂಡಗಳ ವಿರುದ್ಧ ಗೆಲುವು ಸಾಧಿಸಿದೆ. ಆದರೆ ಕಳೆದ ಪಂದ್ಯದಲ್ಲಿ ಆರ್ಸಿಬಿ ವಿರುದ್ಧ ಯಾವೊಬ್ಬ ಬ್ಯಾಟ್ಸ್‌ಮನ್‌ಗಳು ಮಿಂಚಲಿಲ್ಲ, ಶುಬ್ಮನ್ ಗಿಲ್ ಹೊರತುಪಡಿಸಿ ಯಾರೊಬ್ಬರೂ ಕೂಡ ಉತ್ತಮ ಮೊತ್ತ ಪೇರಿಸಲಲಿಲ್ಲ. ಆದರೂ ಮಾರ್ಗನ್, ನಿತೀಶ್ ರಾಣ, ತ್ರಿಪಾಠಿ, ರಸೆಲ್ ಸರಿಯಾದ ಸಮಯದಲ್ಲಿ ಸಿಡಿಯುವ ಸಾಮರ್ಥ್ಯ ಹೊಂದಿದ್ದಾರೆ.
ಬೌಲಿಂಗ್‌ನಲ್ಲಿ ಕಮಾಲ್ ಮಾಡಿದ್ದ ಕಮಲೇಶ್ ನಾಗರ್‌ಕೋಟಿ, ವರುಣ್ ಚರ್ಕವರ್ತಿ, ಪ್ರಸೀದ್ ಕೃಷ್ಣ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ರಸೆಲ್ ಮತ್ತು ಕಮ್ಮಿನ್ಸ್ ಕಳೆದ ಪಂದ್ಯದಲ್ಲಿ ಕೊಂಚ ದುಬಾರಿಯಾಗಿದ್ದರು.
ಐಪಿಎಲ್ ಇತಿಹಾಸದಲ್ಲಿ ಇಲ್ಲಿಯವರೆಗೆ ಮುಂಬೈ ಮತ್ತು ಕೋಲ್ಕತ್ತಾ ತಂಡಗಳು ಒಟ್ಟು 26 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಮುಂಬೈ ತಂಡ 20ರಲ್ಲಿ ಗೆಲುವು ದಾಖಲಿಸಿದ್ರೆ, ಕೆಕೆಆರ್ ಕೇವಲ 6 ಪಂದ್ಯಗಳಲ್ಲಿ ಮಾತ್ರ ಜಯ ಸಾಧಿಸಿದೆ.