ದುಬೈ: ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ನ 22ನೇ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ಸನ್ರೈಸರ್ಸ್ ಹೈದರಾಬಾದ್ ತಂಡಗಳು ಸೆಣಸಾಡಲಿವೆ.
ಕನ್ನಡಿಗ ಕೆ.ಎಲ್.ರಾಹುಲ್ ನಾಯಕತ್ವದ ಪಂಜಾಬ್ ತಂಡ ಇಲ್ಲಿಯವರೆಗೆ ಟೂರ್ನಿಯಲ್ಲಿ ನೀರಸ ಪ್ರದರ್ಶನ ತೋರಿದೆ. ಆಡಿದ 5 ಪಂದ್ಯಗಳಲ್ಲಿ 4ರಲ್ಲಿ ಸೋಲು ಕಂಡಿರುವ ಪಂಜಾಬ್, ಕೇವಲ ಒಂದು ಪಂದ್ಯ ಮಾತ್ರ ಗೆದ್ದಿದೆ. ಇತ್ತ ಡೇವಿಡ್ ವಾರ್ನರ್ ನಾಯಕತ್ವದ ಹೈದರಾಬಾದ್ ಕೂಡ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಆಡಿದ 5 ಪಂದ್ಯಗಳಲ್ಲಿ 3 ಪಂದ್ಯ ಸೋತಿದ್ದು, 2ರಲ್ಲಿ ಜಯದ ನಗೆ ಬೀರಿದೆ.
ಕೆ.ಎಲ್.ರಾಹುಲ್ ತಂಡ, ಸಮರ್ಥ ಆಟಗಾರರನ್ನು ಹೊಂದಿದ್ದರೂ ಗೆಲುವು ಸಾಧಿಸಲು ಆಗುತ್ತಿಲ್ಲ. ರಾಹುಲ್, ಮಯಾಂಕ್ ಅಗರ್ವಾಲ್ ಟೂರ್ನಿಯಲ್ಲಿ ಇಬ್ಬರೂ ಭರ್ಜರಿ ಪ್ರದರ್ಶನ ತೋರುತ್ತಿದ್ದಾರೆ. ನಿಕೋಲಸ್ ಪೂರನ್ ಸಹ ತನ್ನ ಸ್ಫೋಟಕ ಬ್ಯಾಟಿಂಗ್ನಿಂದ ಕಳೆದ ಎರಡು ಪಂದ್ಯಗಳಲ್ಲಿ ಮಿಂಚಿದ್ದಾರೆ. ಸಿಎಸ್ಕೆ ವಿರುದ್ಧ ಈ ಸೀಸನ್ನ ಮೊದಲ ಪಂದ್ಯವಾಡಿದ್ದ ಮಂದೀಪ್ ಸಿಂಗ್ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿ ಗಮನ ಸೆಳೆದಿದ್ದಾರೆ.
ಮ್ಯಾಕ್ಸ್‌ವೆಲ್, ಕರುಣ್ ನಾಯರ್ ವೈಫಲ್ಯದಿಂದಾಗಿ ಮಧ್ಯಮ ಕ್ರಮಾಂಕ ಸುಧಾರಿಸಬೇಕಿದೆ. ಯುವ ಕ್ರಿಕೆಟಿಗ ಸರ್ಫರಾಜ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ರೆ ಪಂಜಾಬ್ ಶಕ್ತಿ ಹೆಚ್ಚಬಹುದು. ಪಂಜಾಬ್ ಬೌಲಿಂಗ್ ವಿಭಾಗ ಕೊಂಚ ಮೊನಚಾಗಬೇಕಿದೆ. ಸಿಎಸ್ಕೆ ವಿರುದ್ಧದ ಪಂದ್ಯದಲ್ಲಿ ಯಾವೊಬ್ಬ ಬೌಲರ್ ಕೂಡ ಉತ್ತಮ ಪ್ರದರ್ಶನ ತೋರಲಿಲ್ಲ. ಒಂದು ವಿಕೆಟ್ ಕೂಡ ಪಡೆಯಲಾಗದೆ ಪರದಾಡಿದ್ರು. ಕೆರಿಬಿಯನ್ ದೈತ್ಯ ಕ್ರಿಸ್ ಗೇಲ್ ಇಲ್ಲಿಯವರೆಗೆ ಮೈದಾನಕ್ಕೆ ಇಳಿದಿಲ್ಲ ಇಂದಿನ ಪಂದ್ಯದಲ್ಲಾದ್ರೂ 11ರ ಬಳಗದಲ್ಲಿ ಕಾಣಿಸಿಕೊಳ್ತಾರಾ? ಎಂಬುದನ್ನು ಕಾದು ನೋಡಬೇಕಿದೆ.
ಹೈದರಾಬಾದ್ ತಂಡಕ್ಕೆ ಬ್ಯಾಟಿಂಗ್ನದ್ದೆ ಚಿಂತೆಯಾಗಿದೆ. ಆರಂಭಿಕ ಆಟಗಾರರು ಉತ್ತಮ ಪ್ರದರ್ಶನ ತೋರಿದ್ರೆ ಮಧ್ಯಮ ಕ್ರಮಾಂಕದ ಆಟಗಾರರು ವೈಫಲ್ಯ ಅನುಭವಿಸುತ್ತಿದ್ದಾರೆ. ಆರಂಭಿಕರು ವೈಫಲ್ಯ ಅನುಭವಿಸಿದ್ರೆ ಮಂಧ್ಯಮ ಕ್ರಮಾಂಕದ ಆಟಗಾರರು ಉತ್ತಮ ಪ್ರದರ್ಶನ ತೋರುತ್ತಾರೆ. ಟೂರ್ನಿ ಆರಂಭದಿಂದಲೂ ಕೊಂಚ ಮಂಕಾಗಿದ್ದ ವಾರ್ನರ್ ಮುಂಬೈ ವಿರುದ್ಧ ಕಂಬ್ಯಾಕ್ ಮಾಡಿದ್ದಾರೆ. ಕಳೆದ 2 ಪಂದ್ಯಗಳಿಂದ ಜಾನಿ ಬೈರ್ ಸ್ಟೋವ್, ಮನೀಷ್ ಪಾಂಡೆ ಉತ್ತಮ ಇನ್ನಿಂಗ್ಸ್ ಕಟ್ಟುವಲ್ಲಿ ವಿಫಲರಾಗಿದ್ದಾರೆ.
ಕೇನ್ ವಿಲಿಯಮ್ಸನ್, ಅಭಿಷೇಕ್ ವರ್ಮಾ, ಪ್ರಿಯಂ ಗರ್ಗ್ ಕೂಡ ಬ್ಯಾಟಿಂಗ್ನಲ್ಲಿ ಮಿಂಚಬೇಕಿದೆ. ಬೌಲಿಂಗ್ನಲ್ಲಿ ನಟರಾಜನ್ ಮತ್ತು ರಶೀದ್ ಕಾನ್ ಹೊರತುಪಡಿಸಿ ಯಾವೊಬ್ಬ ಬೌಲರ್ಗಳು ಎದುರಾಳಿಗಳ ವಿರುದ್ಧ ಮಿಂಚುತ್ತಿಲ್ಲ. ಗಾಯದ ಕಾರಣದಿಂದ ಭುವನೇಶ್ವರ್ ಕುಮಾರ್ ಟೂರ್ನಿಯಿಂದ ಹೊರಬಿದ್ದಿರುವುದು ತಂಡಕ್ಕೆ ಕೊಂಚ ಹಿನ್ನಡೆಯಾಗಿದೆ.
ಐಪಿಎಲ್ ಟೂರ್ನಿಯಲ್ಲಿ ಉಭಯ ತಂಡಗಳು 14 ಬಾರಿ ಮುಖಾಮುಖಿಯಾಗಿದ್ದು, 10 ಪಂದ್ಯಗಳಲ್ಲಿ ಹೈದರಾಬಾದ್ ಜಯದ ನಗೆ ಬೀರಿದ್ರೆ, 4 ಪಂದ್ಯಗಳಲ್ಲಿ ಪಂಜಾಬ್ ಗೆಲುವು ಸಾಧಿಸಿದೆ.