ದುಬೈ: ಆರಂಭಿಕ ಆಟಗಾರ ಮಾಯಾಂಕ್ ಅಗರ್ವಾಲ್ ಎರಡನೇ ಓವರ್‌ನಲ್ಲಿ ರನ್ ಔಟ್ ಆಗಿದ್ದೇ ತಂಡಕ್ಕೆ ಭಾರೀ ಪೆಟ್ಟು ನೀಡಿತು ಎಂದು ಕಿಂಗ್ಸ್ ಇಲೆವೆನ್ ಪಂಜಾಬ್ ತಮಡದ ನಾಯಕ ಕೆ.ಎಲ್.ರಾಹುಲ್ ಹೇಳಿದ್ದಾರೆ.
202 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಪಂಜಾಬ್ ತಂಡಕ್ಕೆ ಆರಂಭಿಕ ಆಘಾತ ಎದುರಾಯ್ತು. ಇನ್ನಿಂಗ್ಸ್‌ನ ಎರಡನೇ ಓವರ್‌ನಲ್ಲಿ ಮಯಾಂಕ್ ಅಗರ್ವಾಲ್ ರನ್ ಔಟ್ಗೆ ಬಲಿಯಾಗಿ ನಿರಾಸೆ ಅನುಭವಿಸಿದ್ರು.
ನಾವು ಪವರ್ ಪ್ಲೇನಲ್ಲಿ ವಿಕೆಟ್‌ಗಳನ್ನು ಕಳೆದುಕೊಂಡರೆ ತುಂಬಾ ಕಠಿಣವಾಗುತ್ತದೆ. ಅದರಲ್ಲೂ ವಿಶೇಷವಾಗಿ ನಾವು ಕೇವಲ ಆರು ಬ್ಯಾಟ್ಸ್ಮನ್ಗಳು ಮಾತ್ರ ಆಡುತ್ತಿದ್ದೇವೆ. ಮಾಯಾಂಕ್ ರನ್ ಔಟ್ಗೆ ಬಲಯಾದರು, ಇದು ಉತ್ತಮ ಆರಂಭವಲ್ಲ. ಇದರಿಂದ ತಂಡಕ್ಕೆ ಭಾರೀ ಪೆಟ್ಟು ಬಿತ್ತು ಎಂದು ಪಂದ್ಯದ ನಂತರದ ರಾಹುಲ್ ಹೇಳಿದ್ದಾರೆ.
ನಾವು ಗಾಳಿಯಲ್ಲಿ ಹೊಡೆದ ಎಲ್ಲಾ ಚೆಂಡುಗಳು ಫೀಲ್ಡರ್ಗಳ ಬಳಿ ಹೋದವು. ಕಳೆದ ಐದು ಪಂದ್ಯಗಳಲ್ಲಿ ನಮ್ಮ ಡೆತ್ ಬೌಲಿಂಗ್ ಸರಿಯಾಗಿರಲಿಲ್ಲ. ಆದರೆ ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಿದ್ರು. ಆರಂಭದಲ್ಲಿ ಹೈದರಾಬಾದ್ ತಂಡದ ಆಟಗಾರರು ಬ್ಯಾಟ್ ಬೀಸಿದ್ದು ನೋಡಿ 230 ರನ್ ಗಳಿಸುತ್ತಾರೆ ಎಂದು ಭಾವಿಸಿದ್ದೆ. ಯುವ ಸ್ಪಿನ್ನರ್ ರವಿ ಬಿಷ್ನೋಯಿ ಅದ್ಭುತವಾಗಿ ಸ್ಪೆಲ್ ಮಾಡಿದರು. ಪವರ್ ಪ್ಲೇ ಇರಲಿ, ಪಂದ್ಯದ ಕೊನೆಯಲ್ಲೇ ಆಗಿರಲಿ ಅವರು ಹೆದರುವುದಿಲ್ಲ. ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ ಎಂದಿದ್ದಾರೆ.
ಕಳಪೆ ಬ್ಯಾಟಿಂಗ್ ಪ್ರದರ್ಶನದಿಂದಾಗಿ 16.5 ಓವರ್ಗಳಲ್ಲಿ 132 ರನ್ಗಳಿಗೆ ಸರ್ವಪತನ ಕಂಡ ಪಂಜಾಬ್ ತಂಡ, 69 ರನ್ಗಳಿಂದ ಹೈದರಾಬಾದ್ ತಂಡಕ್ಕೆ ಶರಣಾಯಿತು.