ಶಾರ್ಜಾ: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಸತತ ನಾಲ್ಕು ಪಂದ್ಯಗಳಲ್ಲಿ ಸೋಲು ಕಂಡಿದ್ದು, "ನಾನು ಬ್ಯಾಟಿಂಗ್ನಲ್ಲಿ ಉತ್ತಮ ಪ್ರದರ್ಶನ ತೋರುತ್ತಿಲ್ಲ" ಎಂದು ನಾಯಕ ಸ್ಟೀವ್ ಸ್ಮಿತ್ ಹೇಳಿದ್ದಾರೆ.
ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಶುಕ್ರವಾರ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ 46 ರನ್ಗಳ ಅಂತರದಲ್ಲಿ ಸೋಲು ಕಂಡಿದೆ.
ಪಂದ್ಯ ಮುಗಿದ ಬಳಿಕ ಮಾತನಾಡಿದ ಸ್ಟೀವ್ ಸ್ಮಿತ್, "ನಾವು ಪಾಸಿಟಿವ್ ಆಗಿ ಉಳಿಯಬೇಕು, ಆದಷ್ಟು ಬೇಗ ಕಂಬ್ಯಾಕ್ ಮಾಡುತ್ತೇವೆ. ಈ ಸಮಯದಲ್ಲಿ ನಾವು ಅಂದುಕೊಂಡಂತೆ ಏನೂ ನಡೆಯುತ್ತಿಲ್ಲ. ನಾನು ಕೂಡ ಉತ್ತಮವಾಗಿ ಬ್ಯಾಟಿಂಗ್ ನಡೆಸುತ್ತಿಲ್ಲ. ನಾನು ಇಂದು ಉತ್ತಮ ಪ್ರದರ್ಶನ ನೀಡಬಹುದು ಎಂದುಕೊಂಡಿದ್ದೆ, ಆದರೆ ಸಾಧ್ಯವಾಗಲಿಲ್ಲ" ಎಂದರು.
"ನಾವು 40 ಓವರ್‌ಗಳಲ್ಲಿ ಸಾಕಷ್ಟು ಉತ್ತಮವಾಗಿ ಆಡುತ್ತಿಲ್ಲ. ಒತ್ತಡ ಬಂದಾಗ ನಮ್ಮ ಯೋಜನೆಗಳನ್ನು ಕಾರ್ಯಗತಗೊಳಿಸುತ್ತಿಲ್ಲ. ನಮ್ಮ ಬೌಲರ್ಗಳು ಉತ್ತಮ ಪ್ರದರ್ಶನ ತೋರಿದ್ರು. ಕೊನೆಯಲ್ಲಿ 10 ರಿಂದ 15 ರನ್ಗಳನ್ನು ಬಿಟ್ಟುಕೊಟ್ಟೆವು" ಎಂದು ಹೇಳಿದ್ದಾರೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದು ಕೊಂಡು 184 ರನ್ ಗಳಿಸಿತು. 185 ರನ್ಗಳ ಗುರಿ ಬೆನ್ನಟ್ಟಿದ ರಾಜಸ್ಥಾನ ತಂಡ ಡೆಲ್ಲಿ ಬೌಲಿಂಗ್ ದಾಳಿಗೆ ತತ್ತರಿಸಿತು. 19.4 ಓವರ್‌ಗಳಲ್ಲಿ 138 ರನ್ಗಳಿಗೆ ಸರ್ವಪತನ ಕಂಡು ಸೋಲೊಪ್ಪಿಕೊಂಡಿತು.