ಜೋಹಾನ್ಸ್‌ಬರ್ಗ್: ಭಾರತದ ವಿರುದ್ಧ ದಕ್ಷಿಣ ಆಫ್ರಿಕಾದ ಮಹಿಳಾ ಕ್ರಿಕೆಟ್ ತಂಡ ಏಕದಿನ ಸರಣಿ ಹಾಗೂ ಟಿ-20 ಸರಣಿ ಗೆಲ್ಲುವ ಮೂಲಕ ಐತಿಹಾಸಿಕ ದಾಖಲೆ ಬರೆದಿದೆ.
ಭಾರತ ವಿರುದ್ಧದ 5 ಪಂದ್ಯಗಳ ಏಕದಿನ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ಮಹಿಳಾ ತಂಡ 4-1 ರಿಂದ ಸರಣಿ ವಶಪಡಿಸಿಕೊಂಡಿತ್ತು. ಈಗ 3 ಪಂದ್ಯಗಳ ಟಿ-20 ಸರಣಿಯಲ್ಲಿ ಒಂದು ಪಂದ್ಯ ಬಾಕಿ ಇರುವಂತೆ 2-0 ದಿಂದ ಸರಣಿ ವಶಪಡಿಸಿಕೊಂಡು ತನ್ನ ಪಾರಮ್ಯ ಮೆರೆದಿದೆ.
ದಕ್ಷಿಣ ಆಫ್ರಿಕಾ ಮಹಿಳಾ ತಂಡದ ಈ ಸಾಧನೆಗೆ ಸೌತ್ ಆಫ್ರಿಕಾ ಕ್ರಿಕೆಟ್ ಮಂಡಳಿ ಪ್ರಶಂಸೆ ವ್ಯಕ್ತಪಡಿಸಿದೆ. "5 ಪಂದ್ಯಗಳ ಏಕದಿನ ಸರಣಿಯಲ್ಲಿ 4-1 ರಿಂದ ಸರಣಿ ಗೆದ್ದಿದ್ದು ದೊಡ್ಡ ಸಾಧನೆಯಾಗಿದೆ. ಹಾಗೆಯೇ 3 ಪಂದ್ಯಗಳ ಟಿ-20 ಸರಣಿಯಲ್ಲಿ ಒಂದು ಪಂದ್ಯ ಬಾಕಿ ಇರುವಂತೆ 2-0 ದಿಂದ ಸರಣಿ ವಶಪಡಿಸಿಕೊಂಡಿರುವುದು ಸಂತಸ ತಂದಿದೆ. ಈ ಎರಡು ಸರಣಿಯಲ್ಲಿ ತಂಡದ ಪ್ರತಿಯೊಬ್ಬ ಆಟಗಾರ್ತಿಯರು ಉತ್ತಮ ಕೊಡುಗೆ ನೀಡಿದ್ದಾರೆ. ಎಲ್ಲರಿಗೂ ಶುಭಾಷಯಗಳು." ಎಂದು ಸಿಎಸ್ಎ ಕಾರ್ಯಕಾರಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಫೋಲೆಟ್ಸಿ ಮೊಸೆಕಿ ಹೇಳಿದರು.
"ಈ ಪ್ರವಾಸದಲ್ಲಿ ನಿಜವಾಗಿಯೂ ನಮ್ಮ ನಾಯಕಿ ಡೇನ್ ವ್ಯಾನ್ ನೀಕೆರ್ಕ್ ಮತ್ತು ಕ್ಲೋಯ್ ಟ್ರಯಾನ್ ಅವರಂತಹ ಪ್ರಬಲ ಆಟಗಾರರಿಲ್ಲದೆ ವಿಶ್ವ ಕ್ರಿಕೆಟ್‌ನ ಪ್ರಬಲ ತಂಡಗಳ ವಿರುದ್ಧ ಜಯಗಳಿಸಿದೆ. ಸುನೆ ಲೂಸ್ ಮತ್ತು ಲಾರಾ ವೊಲ್ವಾರ್ಡ್ಟ್ ಉತ್ತಮ ನಾಯಕತ್ವದಿಂದ ತಂಡಕ್ಕೆ ಮತ್ತಷ್ಟು ಬಲಬಂದಂತಾಗಿದೆ. ಇದು ನಮ್ಮ ತಂಡದ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಿದೆ." ಎಂದು ಹೇಳಿದ್ದಾರೆ.
ಓದಿ : ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್ : ಇಂಡಿಯಾ ಲೆಜೆಂಡ್ಸ್ ಚಾಂಪಿಯನ್
ನಮ್ಮ ತಂಡದ ಮಹಿಳಾ ಆಟಗಾರ್ತಿಯರು ತಮ್ಮ ಉತ್ತಮ ಪ್ರದರ್ಶನದಿಂದ ಪ್ರಪಂಚದಾದ್ಯಂತ ಮನೆ ಮಾತಾಗಿದ್ದು, ವಿದೇಶದಲ್ಲಿ ನಡೆಯುವ ದೇಶೀಯ ಟಿ-20 ಪಂದ್ಯಾವಳಿಗಳಿಗೆ ಹೆಚ್ಚಿನ ಬೇಡಿಕೆ ಬಂದಿದೆ ಎಂದು ಮೊಸೆಕಿ ಹೇಳಿದರು.