ಮೊಹಾಲಿ: ಅನುಭವಿ ಸ್ಪಿನ್ನರ್ ಆರ್.ಅಶ್ವಿನ್ ನಾಳೆಯಿಂದ ಮೊಹಾಲಿಯಲ್ಲಿ ಆರಂಭವಾಗಲಿರುವ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವನ್ನು ಸೇರಿಕೊಳ್ಳುವ ಸಾಧ್ಯತೆಯಿದ್ದು, ಈ ಪಂದ್ಯದಲ್ಲಿ ಗರಿಷ್ಠ ವಿಕೆಟ್ ಪಟ್ಟಿಯಲ್ಲಿ ಅವರು ಕಪಿಲ್ ದೇವ್ ಸೇರಿದಂತೆ ಕೆಲವು ದಿಗ್ಗಜರನ್ನು ಹಿಂದಿಕ್ಕಲಿದ್ದಾರೆ.
"ಅಶ್ವಿನ್ ಉತ್ತಮವಾಗಿ ರೂಪುಗೊಂಡಿದ್ದಾರೆ. ಫಿಟ್ನೆಸ್ ಬಗ್ಗೆ ಯಾವುದೇ ದೂರುಗಳಿಲ್ಲ. ತರಬೇತಿ ವೇಳೆ ಅವರು ಉತ್ತಮವಾಗಿ ಕಾಣುತ್ತಿದ್ದರು. ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಸೇರಿದಂತೆ ಎಲ್ಲವನ್ನೂ ಮಾಡಿದರು. ಹಾಗಾಗಿ ಅವರಲ್ಲಿ ಯಾವುದೇ ಸಮಸ್ಯೆಯಿಲ್ಲ ಎಂದು ಭಾವಿಸುತ್ತೇವೆ" ಎಂದು ಭಾರತ ತಂಡದ ಉಪನಾಯಕ ಜಸ್ಪ್ರೀತ್ ಬುಮ್ರಾ ಮೊಹಾಲಿ ಟೆಸ್ಟ್‌ಗೆ ಮುಂಚಿತವಾಗಿ ನಡೆದ ವರ್ಚುವಲ್ ಸಂವಾದದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಅಶ್ವಿನ್ 84 ಟೆಸ್ಟ್ ಪಂದ್ಯಗಳಿಂದ 430 ವಿಕೆಟ್ ಪಡೆದಿದ್ದಾರೆ. ಇನ್ನು 4 ವಿಕೆಟ್ ಪಡೆದರೆ ಭಾರತ ತಂಡದ ದಿಗ್ಗಜ ಕಪಿಲ್ ದೇವ್ ಅವರನ್ನು ಹಿಂದಿಕ್ಕಿ ಭಾರತದ ಪರ ಹೆಚ್ಚು ವಿಕೆಟ್ ಪಡೆದ 2ನೇ ಬೌಲರ್ ಎನಿಸಿಕೊಳ್ಳಲಿದ್ದಾರೆ. 1983ರ ವಿಶ್ವಕಪ್ ಗೆದ್ದ ನಾಯಕ ಕಪಿಲ್ ದೇವ್ 131 ಪಂದ್ಯಗಳಿಂದ 434 ವಿಕೆಟ್ ಪಡೆದಿದ್ದಾರೆ. ಕನ್ನಡಿಗ ಅನಿಲ್ ಕುಂಬ್ಳೆ 619 ವಿಕೆಟ್ ಪಡೆದು ಭಾರತದ ಪರ ಗರಿಷ್ಠ ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ.
ಅಶ್ವಿನ್ಗೆ ಈ ಸರಣಿಯಲ್ಲಿ ಕಪಿಲ್ ದೇವ್ ಜೊತೆಗೆ ನ್ಯೂಜಿಲ್ಯಾಂಡ್ನ ರಿಚರ್ಡ್ ಹ್ಯಾಡ್ಲಿ(431), ಶ್ರೀಲಂಕಾದ ರಂಗನಾ ಹೆರಾತ್(433), ದಕ್ಷಿಣ ಆಫ್ರಿಕಾದ ಡೇಲ್ ಸ್ಟೈನ್(439) ಅವರನ್ನು ಹಿಂದಿಕ್ಕುವ ಅವಕಾಶವಿದೆ.
ಇದನ್ನೂ ಓದಿ:100ನೇ ಪಂದ್ಯದ ಸಂಭ್ರಮದಲ್ಲಿರುವ ಕೊಹ್ಲಿಯ ಸಂಪೂರ್ಣ ಟೆಸ್ಟ್ ಕ್ರಿಕೆಟ್ ಅಂಕಿ-ಅಂಶ ಇಲ್ಲಿದೆ