ನವದೆಹಲಿ: ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಫಿಟ್ನೆಸ್ ಪುನಶ್ಚೇತನ ತರಬೇತಿಯಲ್ಲಿ ತೇರ್ಗಡೆ ಹೊಂದಿರುವ ಹಿಟ್ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ, ಮಂಗಳವಾರ ಮುಂಜಾನೆ ಆಸ್ಟ್ರೇಲಿಯಾಕ್ಕೆ ಪ್ರಯಾಣ ಬೆಳೆಸಿದರು. ಇದರೊಂದಿಗೆ ಆಸೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅಂತಿಮ ಎರಡು ಪಂದ್ಯಗಳಿಗೆ ಲಭ್ಯರಾಗಲಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಲ್ಲಿ ಚಾಂಪಿಯನ್ ತಂಡದ ನಾಯಕರಾಗಿರುವ ರೋಹಿತ್ ಶರ್ಮಾ, ಸ್ನಾಯುಸೆಳೆತಕ್ಕೆ ಒಳಗಾಗಿದ್ದರು. ಬಳಿಕ ನವೆಂಬರ್ 19ರಂದು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್‌ಸಿಎ) ಪುನಶ್ಚೇತನ ಶಿಖಿರದಲ್ಲಿ ಭಾಗವಹಿಸಿದ್ದರು.
ಓದಿ: ಪ್ರಾಯೋಗಿಕವಾಗಿ ರೋಹಿತ್ ಫಿಟ್: ಕಣಕ್ಕಿಳಿಯುವ ಮುನ್ನ ಮತ್ತೊಮ್ಮೆ ಪರೀಕ್ಷೆ ಎದುರಿಸಬೇಕು ಎಂದ ಬಿಸಿಸಿಐ
ರೋಹಿತ್ ಆರಂಭದಲ್ಲಿ ಆಸ್ಟ್ರೇಲಿಯಾ ಪ್ರವಾಸದಿಂದ ಹೊರಗುಳಿದಿದ್ದರು. ಆಯ್ಕೆಗಾರರು ಅವರ ಗಾಯದ ಸ್ಥಿತಿ ಮರು ಮೌಲ್ಯಮಾಪನದ ನಂತರ ಟೆಸ್ಟ್ ಸರಣಿಗೆ ಆಯ್ಕೆ ಮಾಡಿದರು. ಇದರಿಂದಾಗಿ ಆಸೀಸ್ ವಿರುದ್ಧದ ಏಕದಿನ ಹಾಗೂ ಟಿ20 ಸರಣಿಗಳಿಗೆ ಅಲಭ್ಯವಾಗಿದ್ದರು. ಸಂಪೂರ್ಣ ಫಿಟ್ನೆಸ್ ಮರಳಿ ಪಡೆಯುವಲ್ಲಿ ಯಶಸ್ವಿಯಾಗಿದ್ದು, ಟೆಸ್ಟ್ ಸರಣಿಯ ಎರಡು ಪಂದ್ಯಗಳಲ್ಲಿ ಕಾಣಿಸಿಕೊಳ್ಳಲಿರುವ ಹಿಟ್ಮ್ಯಾನ್ನಿಂದಾಗಿ ತಂಡಕ್ಕೆ ಆನೆ ಬಲ ಬಂದಂತಾಗಿದೆ.
ಭಾರತದಿಂದ ದುಬೈ ಮೂಲಕ ಆಸ್ಟ್ರೇಲಿಯಾಕ್ಕೆ ತೆರಳಿರುವ ಅವರು, ಆಸ್ಟ್ರೇಲಿಯಾ ಸರ್ಕಾರದ ನಿಯಮದಂತೆ ಕಡ್ಡಾಯವಾಗಿ 14 ದಿನಗಳ ಕ್ವಾರಂಟೈನ್ನಲ್ಲಿ ಇರಲಿದ್ದಾರೆ. ಅದಕ್ಕೂ ಮೊದಲ ಎರಡು ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ. ಮೂರನೇ ಪಂದ್ಯಕ್ಕೂ ಮುನ್ನ ಒಂದು ವಾರ ನೆಟ್ ಪ್ರಾಕ್ಟಿಸ್ ಮಾಡಲಿದ್ದಾರೆ. ಇಂಡೋ-ಆಸೀಸ್ ನಡುವಿನ ಟೆಸ್ಟ್ ಸರಣಿಯಲ್ಲಿ ಮೊದಲ ಪಂದ್ಯ ಡಿಸೆಂಬರ್ 17ರಂದು ನಡೆಯಲಿದೆ.
ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಎರಡು ಟೆಸ್ಟ್ ಪಂದ್ಯಗಳಿಗೆ ರೋಹಿತ್ ಶರ್ಮಾ ಕಣಕ್ಕಿಳಿಯುವ ಬಗ್ಗೆ ತಂಡದ ವೈದ್ಯಕೀಯ ತಂಡ ಮರು ಮೌಲ್ಯಮಾಪನ ನಡೆಸಿದ ನಂತರ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಬಿಸಿಸಿಐ ಹೇಳಿದೆ.
- ಮೊದಲ ಟೆಸ್ಟ್: ಡಿ.17 ರಿಂದ 21 ಆಡಿಲೇಡ್ (ಡೇ-ನೈಟ್)
- ದ್ವಿತೀಯ ಟೆಸ್ಟ್: ಡಿ.26ರಿಂದ 30, ಮೆಲ್ಬೋರ್ನ್
- ತೃತೀಯ ಟೆಸ್ಟ್: ಜ.7ರಿಂದ 11, ಸಿಡ್ನಿ
- ನಾಲ್ಕನೇ ಟೆಸ್ಟ್: ಜ. 15ರಿಂದ 19, ಬ್ರಿಸ್ಬೇನ್