ಲಖನೌ(ಉತ್ತರಪ್ರದೇಶ): ಆರಂಭಿಕ ಜೋಡಿ ಪಾಥುಮ್ ನಿಸ್ಸಾಂಕಾ ಮತ್ತು ಕುಸಲ್ ಪೆರೆರಾ ನಡುವೆ ಶತಕದ ಜೊತೆಯಾಟವಿತ್ತು. ಈ ಜೋಡಿಯನ್ನು ಮುರಿಯಲು ಕಾಂಗರೂ ಬೌಲರ್‌ಗಳು ಚಿಂತಿತರಾಗಿದ್ದರು. ಲಂಕಾ ಬ್ಯಾಟ್ಸ್‌ಮನ್ ಕುಸಲ್ ಪೆರೆರಾಗೆ ಆಟದ ಸಮಯದಲ್ಲಿ ಬೌಲ್ ಬಡಿದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಆಸ್ಟ್ರೇಲಿಯಾ ತಂಡ ಸೋಲಿನೊಂದಿಗೆ ವಿಶ್ವಕಪ್ ಆರಂಭಿಸಿದೆ. ಮೊದಲ ಪಂದ್ಯದಲ್ಲಿ ಭಾರತದಿಂದ ಸೋಲನ್ನು ಎದುರಿಸಬೇಕಾಯಿತು. ಬಳಿಕ ದಕ್ಷಿಣ ಆಫ್ರಿಕಾ 134 ರನ್‌ಗಳಿಂದ ಹೀನಾಯ ಸೋಲು ಕಂಡಿತ್ತು. ಆದರೆ ಲಖನೌದಲ್ಲಿ ನಡೆದ ಪಂದ್ಯದಲ್ಲಿ ಬೌಲರ್‌ಗಳ ಉತ್ತಮ ಪ್ರದರ್ಶನದಿಂದ ಆಸ್ಟ್ರೇಲಿಯಾ ಮೊದಲ ಗೆಲುವು ದಾಖಲಿಸಿತು. ಈ ಪಂದ್ಯದಲ್ಲಿ ಪಾಥುಮ್ ನಿಸ್ಸಾಂಕ ಮತ್ತು ಕುಸಲ್ ಪೆರೇರಾ ಆಸ್ಟ್ರೇಲಿಯಾ ವಿರುದ್ಧ ಅಮೋಘ ಆರಂಭ ನೀಡಿದರು. ಇಬ್ಬರೂ ಆಟಗಾರರು ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡಿ ಕಾಂಗರೂ ಬೌಲರ್‌ಗಳನ್ನು ಹಿಮ್ಮೆಟ್ಟಿಸುತ್ತಿದ್ದರು.
ನಿಸ್ಸಾಂಕ ಮತ್ತು ಕುಸಲ್ ಮೊದಲ ವಿಕೆಟ್‌ಗೆ 125 ರನ್‌ಗಳ ಜೊತೆಯಾಟವಾಡಿದರು. ಆಸ್ಟ್ರೇಲಿಯಾ ವಿಕೆಟ್ ಪಡೆಯುವ ಹಂಬಲದಲ್ಲಿತ್ತು. ಇನ್ನಿಂಗ್ಸ್ ನ 17ನೇ ಓವರ್ನ ಕೊನೆಯ ಎಸೆತದಲ್ಲಿ ಮಾರ್ಕಸ್ ಸ್ಟೊಯಿನಿಸ್ ಅಪಾಯಕಾರಿ ಬೌನ್ಸರ್ ಎಸೆದರು. ಇದು ನೇರವಾಗಿ ಕುಸಲ್ ಪೆರೇರಾ ಅವರ ತಲೆ ಮೇಲಿದ್ದ ಹೆಲ್ಮಟ್ಗೆ ಬಡಿಯಿತು. ಬಾಲ್ ಬಡಿದ ನಂತರ ಬ್ಯಾಟ್ಸ್‌ಮನ್ ಸಂಪೂರ್ಣವಾಗಿ ಆಘಾತಕ್ಕೊಳಗಾದರು. ಅದರ ನಂತರ ಫಿಜಿಯೋ ತೆರಪಿಸ್ಟ್ರನ್ನು ತಕ್ಷಣವೇ ತಪಾಸಣೆಗಾಗಿ ಮೈದಾನಕ್ಕೆ ಕರೆಸಲಾಯಿತು. ತಲೆಗೆ ಬಾಲ್ ಬಿದ್ದ ತಕ್ಷಣ ಆಸ್ಟ್ರೇಲಿಯಾ ಆಟಗಾರರು ಪೆರೆರಾ ಬಳಿ ಬಂದು ಆರೋಗ್ಯ ವಿಚಾರಿಸಿದರು. ಬ್ಯಾಟ್ಸ್‌ಮನ್‌ಗೆ ಯಾವುದೇ ಗಾಯಗಳಾಗದೇ ದೊಡ್ಡ ಅಪಘಾತದಿಂದ ಸ್ವಲ್ಪದರಲ್ಲೇ ಪಾರಾಗಿರುವುದು ಸಮಾಧಾನದ ಸಂಗತಿ.
ಕ್ರೀಡಾ ಸ್ಪೂರ್ತಿ ಮೆರೆದ ಮಿಚೆಲ್: ಶ್ರೀಲಂಕಾದ ಸ್ಫೋಟಕ ಬ್ಯಾಟ್ಸ್‌ಮನ್ ಕುಸಲ್ ಪೆರೆರಾ ಅವರನ್ನು ಮೊದಲ ಓವರ್‌ನಲ್ಲಿ ರನೌಟ್ ಮಾಡಲು ಮಿಚೆಲ್ ಸ್ಟಾರ್ಕ್‌ಗೆ ಉತ್ತಮ ಅವಕಾಶವಿತ್ತು. ಮಿಚೆಲ್ ಸ್ಟಾರ್ಕ್ ಬಾಲ್ ಎಸೆಯುವ ಮೊದಲೇ ಕುಸಲ್ ಪೆರೆರಾ ನಾನ್ ಸ್ಟ್ರೈಕರ್ ಎಂಡ್ನ ಕ್ರೀಸ್ನಿಂದ ಹೊರ ಹೋಗುತ್ತಿದ್ದರು. ಇದನ್ನು ಗಮನಿಸಿದ ಮಿಚೆಲ್ ಸ್ಟಾರ್ಕ್ ಅವರನ್ನು ಔಟ್ ಮಾಡಲು ಅವಕಾಶವಿತ್ತು. ಆದ್ರೆ ಮಿಚೆಲ್ ಸ್ಟಾರ್ಕ್ ಹಾಗೇ ಮಾಡಲಿಲ್ಲ. ಬದಲಿಗೆ ಮತ್ತೊಮ್ಮೆ ಈ ರೀತಿ ಮಾಡಬಾರದು, ಮುಂದಿನ ಬಾರಿ ಹೀಗಾದರೆ ನಿಮ್ಮನ್ನು ರನ್ ಔಟ್ ಮಾಡುತ್ತೇನೆ ಎಂದು ಕುಸಲ್ ಪೆರೆರಾಗೆ ಮಿಚೆಲ್ ಸ್ಟಾರ್ಕ್ ಎಚ್ಚರಿಕೆ ನೀಡಿದರು.
ICC ODI ವಿಶ್ವಕಪ್ 2023 ರ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಶ್ರೀಲಂಕಾ 102 ರನ್‌ಗಳಿಂದ ಹೀನಾಯ ಸೋಲನ್ನು ಅನುಭವಿಸಿದರೆ, ಪಾಕಿಸ್ತಾನದ ವಿರುದ್ಧ 6 ವಿಕೆಟ್‌ಗಳಿಂದ ಸೋಲನ್ನು ಎದುರಿಸಬೇಕಾಯಿತು. 2023ರ ಐಸಿಸಿ ಏಕದಿನ ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ಭಾರತದ ವಿರುದ್ಧ ಆರು ವಿಕೆಟ್‌ಗಳಿಂದ ಸೋತಿದ್ದರೆ, ಎರಡನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 134 ರನ್‌ಗಳ ಸೋಲನ್ನು ಎದುರಿಸಬೇಕಾಯಿತು.
ಈ ಪಂದ್ಯವನ್ನು ಗೆಲ್ಲುವುದು ಉಭಯ ತಂಡಗಳಿಗೆ ಬಹಳ ಮುಖ್ಯವಾಗಿತ್ತು. ಆದ್ರೆ ಆಸ್ಟ್ರೇಲಿಯಾ ಈ ಪಂದ್ಯವನ್ನು ಗೆಲ್ಲುವ ಮೂಲಕ ತನ್ನ ಲಯವನ್ನು ಕಂಡುಕೊಂಡಿದೆ. ಈ ಪಂದ್ಯದಲ್ಲಿ ಕುಸಲ್ ಮೆಂಡಿಸ್ ಶ್ರೀಲಂಕಾ ತಂಡದ ನಾಯಕರಾಗಿದ್ದರು. ಗಾಯದ ಸಮಸ್ಯೆಯಿಂದ ದಸುನ್ ಶನಕ ಈ ಮಹತ್ವದ ಟೂರ್ನಿಯಿಂದ ಸಂಪೂರ್ಣವಾಗಿ ಹೊರಗುಳಿದಿದ್ದಾರೆ.
ಓದಿ: ಆಸ್ಟ್ರೇಲಿಯಾ-ಶ್ರೀಲಂಕಾ ಪಂದ್ಯಕ್ಕೆ ವರುಣ ಅಡ್ಡಿ.. ಗ್ರೌಂಡ್ಸ್ಮನ್ಗೆ ಸಹಾಯ ಮಾಡಿದ ವಾರ್ನರ್ಗೆ ಪ್ರಶಂಸೆಯ ಸುರಿಮಳೆ