ಮುಂಬೈ(ಮಹಾರಾಷ್ಟ್ರ): ಏಕದಿನ ವಿಶ್ವಕಪ್ ಕ್ರಿಕೆಟ್ನಲ್ಲಿ ಭಾರತ ಬೃಹತ್ ಗೆಲುವು ದಾಖಲಿಸಿ ಸೆಮೀಸ್‌ಗೆ ಮುನ್ನಡೆದಿದೆ. ಶ್ರೀಲಂಕಾವನ್ನು 302 ರನ್‌ಗಳಿಂದ ರೋಹಿತ್ ಟೀಂ ಸೋಲಿಸಿದೆ. ಕಳೆದ ಏಷ್ಯಾಕಪ್‌ನ ಫೈನಲ್ ಪಂದ್ಯದ ಪ್ರದರ್ಶನವನ್ನು ಭಾರತ ಪುನರಾವರ್ತಿಸಿದೆ. ಆಗ ಶ್ರೀಲಂಕಾ 50 ರನ್‌ಗಳಿಗೆ ಆಲೌಟಾಗಿತ್ತು. ಈಗ 55 ರನ್‌ಗಳಿಗೆ ಕುಸಿದಿದೆ. ನಿನ್ನೆಯ ಪಂದ್ಯದಲ್ಲಿ ಲಂಕಾ ಕೇವಲ 19.4 ಓವರ್‌ಗಳಲ್ಲಿ ಪತನಗೊಂಡಿತು.
73 ರನ್‌ಗಳಿಗೆ ಶ್ರೀಲಂಕಾ ಆಲೌಟ್: ಈ ವರ್ಷಾರಂಭದಲ್ಲಿ ಶ್ರೀಲಂಕಾ ತಂಡ ಭಾರತಕ್ಕೆ ಪ್ರವಾಸ ಬಂದಿತ್ತು. ಮೂರು ಟಿ20 ಸರಣಿ ಮತ್ತು ಮೂರು ಏಕದಿನ ಪಂದ್ಯಗಳ ಸರಣಿಯನ್ನು ಭಾರತ ಗೆದ್ದು ಬೀಗಿತ್ತು. 2023ರ ಜನವರಿ 15 ಭಾನುವಾರ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾವನ್ನು 317 ರನ್‌ಗಳಿಂದ ಸೋಲಿಸಿದ ಭಾರತ ಏಕದಿನ ಸರಣಿಯನ್ನು 3-0 ಅಂತರದಿಂದ ವಶಪಡಿಸಿಕೊಂಡಿತು. ಮೊದಲು ಬ್ಯಾಟ್ ಮಾಡಿದ್ದ ಭಾರತ ನಿಗದಿತ 50 ಓವರ್ಗಳಿಗೆ 5 ವಿಕೆಟ್ ಕಳೆದುಕೊಂಡು 390 ರನ್ಕಲೆ ಹಾಕಿತ್ತು. ಪಂದ್ಯದಲ್ಲಿ ಶುಭ್ಮನ್ ಗಿಲ್ 116 ರನ್ ಗಳಿಸಿ ಮಿಂಚಿದ್ರೆ, ವಿರಾಟ್ 166 ರನ್ ಗಳಿಸಿ ಅಜೇಯರಾಗುಳಿದಿದ್ದರು. ಬೃಹತ್ ಗುರಿ ಬೆನ್ನತ್ತಿದ್ದ ಶ್ರೀಲಂಕಾ ಆರಂಭದಿಂದಲೇ ಆಘಾತ ಎದುರಿಸುತ್ತಲೇ ಬಂತು. ಸಿರಾಜ್ 4 ವಿಕೆಟ್, ಶಮಿ ಮತ್ತು ಕುಲ್ದೀಪ್ ಯಾದವ್ ತಲಾ ಎರಡು ವಿಕೆಟ್ ಪಡೆಯುವ ಮೂಲಕ ಮತ್ತು ಸಂಘಟಿತ ಬೌಲಿಂಗ್ಗೆ ಶ್ರೀಲಂಕಾ 22 ಓವರ್‌ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು ಕೇವಲ 73 ರನ್ ಗಳಿಸಿತು. ಹಾರ್ದಿಕ್ ಪಾಂಡ್ಯ ನೇತೃತ್ವದ ಯುವ ಭಾರತ ತಂಡವು ಟಿ20 ಸರಣಿಯಲ್ಲಿ ಶ್ರೀಲಂಕಾವನ್ನು 2-1 ಅಂತರದಲ್ಲಿ ಸೋಲಿಸಿದ ನಂತರ ಏಕದಿನ ಸರಣಿಯಲ್ಲಿ ಭರ್ಜರಿ ಗೆಲುವು ಸಾಧಿಸಿತ್ತು.
ಏಷ್ಯಾಕಪ್ ಫೈನಲ್ನಲ್ಲಿ ಭಾರತ ಮಿಂಚು: 100 ಓವರ್ಗಳ ಏಷ್ಯಾಕಪ್ ಫೈನಲ್ ಪಂದ್ಯ ಕೇವಲ 22 ಓವರ್ಗಳಿಂದ ಮುಕ್ತಾಯವಾಗಿತ್ತು. ಮೊದಲ ಇನ್ನಿಂಗ್ಸ್ನಲ್ಲಿ ಭಾರತ ವೇಗದ ಬೌಲಿಂಗ್ ದಾಳಿಗೆ ಲಂಕಾದ ಬ್ಯಾಟರ್ಗಳು ತತ್ತರಿಸಿ ಹೋಗಿದ್ದರು. ಹೈದರಾಬಾದ್ ವೇಗಿ ಮೊಹಮದ್ ಸಿರಾಜ್ ಮಾಡಿದ ಮಾರಕ ಬೌಲಿಂಗ್ನಿಂದಾಗಿ ಲಂಕಾ ತಂಡ ಫೈನಲ್ ಪಂದ್ಯದಲ್ಲಿ ನೆಲಕಚ್ಚಿತ್ತು. ಸಿರಾಜ್ ಪಂದ್ಯದ ಪ್ರಮುಖ 6 ವಿಕೆಟ್ ಕಬಳಿಸಿದರೆ, ಉಪನಾಯಕ ಹಾರ್ದಿಕ್ ಮೂರು ವಿಕೆಟ್ ಪಡೆದರು. ಬುಮ್ರಾ 1 ವಿಕೆಟ್ ಉರುಳಿಸಿದ್ದರು. 15.2 ಓವರ್ಗೆ ಶ್ರೀಲಂಕಾ ತಂಡ ಕೇವಲ 50 ರನ್ಗೆ ಸರ್ವಪತನ ಕಂಡಿತು. ಸಣ್ಣ ಮೊತ್ತ ಬೆನ್ನತ್ತಲು ಯುವ ಬ್ಯಾಟರ್ಗಳಾದ ಶುಭ್ಮನ್ ಗಿಲ್ ಮತ್ತು ಇಶಾನ್ ಕಿಶನ್ ಮೈದಾನಕ್ಕಿಳಿದ್ದರು. ಫಾರ್ಮ್ನಲ್ಲಿರುವ ಇಬ್ಬರು ಆಟಗಾರರು ತಮ್ಮ ಶೈಲಿಯ ಆಟವನ್ನು ಮುಂದುವರೆಸಿದರು. 19 ಬಾಲ್ ಎದುರಿಸಿದ ಗಿಲ್ 6 ಬೌಂಡರಿಯ ಸಹಾಯದಿಂದ 27 ರನ್ ಕಲೆಹಾಕಿದರೆ, 3 ಬೌಂಡರಿಯಿಂದ ಕಿಶನ್ 23 ರನ್ ಸೇರಿಸಿದರು. ಭಾರತ ತಂಡ ಕೇವಲ 6.1 ಓವರ್ಗೆ ವಿಕೆಟ್ ನಷ್ಟವಿಲ್ಲದೆ 51 ರನ್ ಕಲೆ ಹಾಕುವ ಮೂಲಕ ಗುರಿ ತಲುಪಿತು. ಫೈನಲ್ನಲ್ಲಿ ಲಂಕಾವನ್ನು ಭಾರತ ಮಣಿಸಿ 2018ರ ನಂತರ ಮತ್ತೆ ಏಷ್ಯಾಕಪ್ ಅನ್ನು ತನ್ನ ಮುಡಿಗೇರಿಸಿಕೊಂಡಿತು.
55ಕ್ಕೆ ಸರ್ವಪತನ ಕಂಡ ಸಿಂಹಳೀಯರು: ಸದ್ಯ ನಡೆಯುತ್ತಿರುವ ವಿಶ್ವಕಪ್ ಟೂರ್ನಿಯಲ್ಲಿ ಲಂಕಾ ಪಡೆಯ ಪ್ರದರ್ಶನ ಕಳಪೆಯಾಗುತ್ತಿದೆ. ವಿಶ್ವಕಪ್ ಟೂರ್ನಿಯಲ್ಲಿ ಭಾರತ ಸತತ 7ನೇ ಗೆಲುವು ದಾಖಲಿಸಿದೆ. ರೋಹಿತ್ ಶರ್ಮಾ ನಾಯಕತ್ವದ ತಂಡ ಅಬ್ಬರದ ಬೌಲಿಂಗ್ ಮಾಡಿದ್ದು, ಸಿಂಹಳೀಯರು ತತ್ತರಿಸಿದ್ದರು. ಲಂಕಾ ಆಟಗಾರರು 19.4 ಓವರ್‌ಗಳಲ್ಲಿ ಕೇವಲ 55 ರನ್‌ಗಳಿಗೆ ಸರ್ವಪತನ ಕಂಡು ಹೀನಾಯ ಸೋಲುಂಡಿದ್ದಾರೆ. ಇದರಿಂದ ಟೀಂ ಇಂಡಿಯಾ ದಾಖಲೆಯ 302 ರನ್‌ಗಳಿಂದ ಜಯ ಸಾಧಿಸಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ ತಂಡ ಮೊದಲು ಬ್ಯಾಟಿಂಗ್ ಮಾಡಿ ಎಂಟು ವಿಕೆಟ್ ನಷ್ಟಕ್ಕೆ 357 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು. ಈ ಗುರಿ ಬೆನ್ನಟ್ಟಿದ್ದ ಲಂಕಾ ಆಟಗಾರರ ಮೇಲೆ ಆರಂಭದಲ್ಲೇ ಟೀಂ ಇಂಡಿಯಾದ ಬೌಲರ್ಗಳು ಸವಾರಿ ಮಾಡಿದ್ದು, ಕೇವಲ 55 ರನ್‌ಗಳಿಗೆ ಕಟ್ಟಿಹಾಕಿದರು.
ಇದನ್ನೂ ಓದಿ: ಸಿಂಹಳೀಯರ ಗೆಲುವಿಗೆ ದುಸ್ವಪ್ನವಾದ ಶಮಿ: ಭಾರತ - ಶ್ರೀಲಂಕಾ 'ವಿಶ್ವ'ಸಮರದ ಚಿತ್ರಣಗಳು...