ನವದೆಹಲಿ: ಇಂದು ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಜನ್ಮದಿನ. 35ನೇ ಹುಟ್ಟಹಬ್ಬ ಆಚರಿಸುತ್ತಿರುವ ವಿರಾಟ್, ವಿಶ್ವದ ಅಗ್ರಗಣ್ಯ ಕ್ರಿಕೆಟ್ ತಾರೆಗಳಲ್ಲಿ ಒಬ್ಬರು. ತಮ್ಮ ಬ್ಯಾಟ್ ಮೂಲಕವೇ ಎದುರಾಳಿಗಳನ್ನು ನಡುಗಿಸುವ, ರನ್ಗಳ ಸುರಿಮಳೆ ಹರಿಸುವ ಇವರು 'ರನ್ ಮಷಿನ್' ಎಂದೇ ಖ್ಯಾತರು. ಅಪಾರ ಸಂಖ್ಯೆಯ ಅಭಿಮಾನಿಗಳು ಇವರ ಬೆನ್ನಿಗಿದ್ದಾರೆ. ಸದಾ ಅದ್ಭುತ ಬ್ಯಾಟಿಂಗ್ನಿಂದ ಟೀಮ್ ಇಂಡಿಯಾಗೆ ನೆರವಾಗುವ ಕೊಹ್ಲಿ, 'ಚೇಸ್ ಮಾಸ್ಟರ್' ಎಂದು ಪ್ರಸಿದ್ಧಿ ಗಳಿಸಿದ್ದಾರೆ. ಅಮೋಘ ಕೌಶಲದ ಮೂಲಕ ಭಾರತ ತಂಡದ ಬ್ಯಾಟಿಂಗ್ ಬಲವಾಗಿರುವ ಕೊಹ್ಲಿ, ದಾಖಲೆಗಳ ಸರದಾರ.
ವಿರಾಟ್ ಕೊಹ್ಲಿ ಕ್ರೀಸಿಗೆ ಬಂದರೆಂದರೆ ಸಾಕು ಅಭಿಮಾನಿಗಳ ಉತ್ಸಾಹ ಉತ್ತುಂಗಕ್ಕೇರುತ್ತದೆ. ವಿರಾಟ್ ಎಂಬ ಹೆಸರು ಮೈದಾನದಲ್ಲೆಲ್ಲಾ ಮಾರ್ದನಿಸುತ್ತದೆ. ಅಭಿಮಾನಿಗಳ ಇಂಥ ಉತ್ಸಾಹಕ್ಕೆ ಎದುರಾಳಿ ತಂಡ ಪ್ರಾರಂಭದಲ್ಲೇ ತನ್ನ ಆತ್ಮವಿಶ್ವಾಸ ಕಳೆದುಕೊಳ್ಳುವಂತಾಗುತ್ತದೆ. ಪ್ರತಿ ಪಂದ್ಯಗಳಲ್ಲಿ ಅಗ್ರೆಸ್ಸಿವ್ ಆಗಿ ಆಡುವ ವಿರಾಟ್, ಎದುರಾಳಿ ತಂಡದ ಜಂಘಾಬಲ ಉಡುಗಿಸಬಲ್ಲರು. ಮೈದಾನಕ್ಕಿಳಿದರೆ ಕೊಹ್ಲಿಯನ್ನು ಕಟ್ಟಿ ಹಾಕುವವರಿಲ್ಲ. ಬ್ಯಾಟಿಂಗ್, ಫೀಲ್ಡಿಂಗ್ನಲ್ಲೂ ಮ್ಯಾಜಿಕ್ ಮಾಡಿ ಅಭಿಮಾನಿಗಳನ್ನು ರಂಜಿಸುತ್ತಾರೆ. ಇವರ ಸಾಧನೆಗಳ ಮಾತೇ ಹೆಚ್ಚು.
ದಾಖಲೆಗಳ ಸರದಾರ: ವಿರಾಟ್ ಕೊಹ್ಲಿ ಬ್ಯಾಟ್ ಬೀಸಿದರೆ ಒಂದಲ್ಲೊಂದು ದಾಖಲೆಯಾಗುತ್ತದೆ. ಇವರ ಹೆಸರು ಮುನ್ನಲೆಗೆ ಬಂದಿದ್ದು 2008ರಲ್ಲಿ ನಡೆದ U19 ವಿಶ್ವಕಪ್ನಲ್ಲಿ. ಅದೇ ವರ್ಷ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ್ದರು. ನಂತರ ಬಳಿಕ ಉತ್ತಮ ಪ್ರದರ್ಶನ ನೀಡುತ್ತಾ, ಏಕಾಂಗಿಯಾಗಿ ಅದೆಷ್ಟೋ ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ.
ವಿರಾಟ್ ಕೊಹ್ಲಿ ತಮ್ಮ ಕ್ರಿಕೆಟ್ ವೃತ್ತಿ ಜೀವನದಲ್ಲಿ ಟೆಸ್ಟ್, ಟಿ20, ಏಕದಿನ ಕ್ರಿಕೆಟ್ ಮಾದರಿಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಒಟ್ಟು 111 ಟೆಸ್ಟ್ ಪಂದ್ಯಗಳನ್ನಾಡಿದ್ದು, 8,676 ರನ್ ಗಳಿಸಿದ್ದಾರೆ. 49.29 ರನ್ ಸರಾಸರಿ ಹೊಂದಿದ್ದು, 29 ಶತಕ ಮತ್ತು 29 ಅರ್ಧಶತಕ ಸಿಡಿಸಿದ್ದಾರೆ. 254 ವಿರಾಟ್ ಕೊಹ್ಲಿ ಇದುವರೆಗೆ ಗಳಿಸಿರುವ ಅತಿ ಹೆಚ್ಚು ರನ್ ಗಳಿಕೆ. ವಿಶ್ವದ ಟಾಪ್ 10 ಟೆಸ್ಟ್ ಶತಕ ಗಳಿಸಿದವರ ಪಟ್ಟಿಯಲ್ಲಿ ಇವರು ನಾಲ್ಕನೇ ಸ್ಥಾನದಲ್ಲಿದ್ದಾರೆ. ಕೊಹ್ಲಿ ನಾಯಕತ್ವದಲ್ಲಿ ಒಟ್ಟು 68 ಟೆಸ್ಟ್ ಪಂದ್ಯಗಳನ್ನು ಭಾರತ ಆಡಿದ್ದು, 40ರಲ್ಲಿ ಗೆಲುವು, 17 ಪಂದ್ಯದಲ್ಲಿ ಸೋಲು, 11 ಪಂದ್ಯ ಡ್ರಾ ಆಗಿದೆ. ಹೀಗಾಗಿ ಅತ್ಯುತ್ತಮ ಟೆಸ್ಟ್ ಕ್ಯಾಪ್ಟನ್ ಕೂಡಾ ಹೌದು.
ಒಟ್ಟು 288 ಏಕದಿನ ಪಂದ್ಯಗಳನ್ನಾಡಿದ್ದು, 13,525 ರನ್ ಗಳಿಸಿದ್ದಾರೆ. ಒಟ್ಟು 58.04 ರನ್ ಸರಾಸರಿ ಹೊಂದಿದ್ದು, 276 ಇನ್ನಿಂಗ್ಸ್ನಲ್ಲಿ 48 ಶತಕ ಮತ್ತು 70 ಅರ್ಧಶತಕ ಸಂಪಾದಿಸಿದ್ದಾರೆ. 183 ಇವರು ಏಕದಿನ ಪಂದ್ಯದಲ್ಲಿ ಗಳಿಸಿರುವ ಅತಿ ಹೆಚ್ಚು ರನ್. ಏಕದಿನ ಪಂದ್ಯದಲ್ಲಿ ಅತಿ ಹೆಚ್ಚು ರನ್ ಗಳಿಸಿರುವ ಬ್ಯಾಟರ್ಗಳಲ್ಲಿ 4ನೇ ಸ್ಥಾನ ಮತ್ತು ಭಾರತ ಬ್ಯಾಟರ್ಗಳಲ್ಲಿ ಎರಡನೇ ಸ್ಥಾನ ಗಳಿಸಿದ್ದಾರೆ. ಏಕದಿನ ಪಂದ್ಯದಲ್ಲಿ ಸಚಿನ್ ಅವರ 49 ಶತಕದ ದಾಖಲೆ ಸರಿಗಟ್ಟಲು ವಿರಾಟ್ಗೆ 1 ಶತಕದ ಅವಶ್ಯಕತೆ ಇದೆ.
ಟಿ20ಯಲ್ಲಿ ಒಟ್ಟು 115 ಪಂದ್ಯಗಳನ್ನು ಆಡಿರುವ ವಿರಾಟ್ 107 ಇನ್ನಿಂಗ್ಸ್ನಲ್ಲಿ 4,008 ರನ್ ಗಳಿಸಿದ್ದಾರೆ. ಒಟ್ಟು 52.73 ರನ್ ಸರಾಸರಿ ಹೊಂದಿದ್ದು, ಒಂದು ಶತಕ, 37 ಅರ್ಧಶತಕ ಗಳಿಸಿದ್ದಾರೆ. 122 ರನ್ ಟಿ20ಯಲ್ಲಿ ಇವರು ಗಳಿಸಿರುವ ಅತ್ಯಧಿಕ ಸ್ಕೋರ್. ವಿರಾಟ್ ಟಿ20 ಪಂದ್ಯದಲ್ಲಿ ಅತಿ ಹೆಚ್ಚು ರನ್ ಗಳಿಸಿರುವ ಆಟಗಾರರಲ್ಲಿ ಅಗ್ರಗಣ್ಯರಾಗಿದ್ದು, ಅತಿ ಹೆಚ್ಚು ಪಂದ್ಯಶ್ರೇಷ್ಠ (15) ಮತ್ತು ಸರಣಿ ಶ್ರೇಷ್ಠ (7) ಪಡೆದಿದ್ದಾರೆ. ಒಟ್ಟು 514 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ವಿರಾಟ್ 26,209 ರನ್ ಗಳಿಸಿದ್ದು, 54.03 ರನ್ ಸರಾಸರಿ ಹೊಂದಿದ್ದಾರೆ. ಇದು ಒಟ್ಟು 78 ಶತಕ ಮತ್ತು 136 ಅರ್ಧ ಶತಕ ಹೊಂದಿದೆ. 2011ರ ವಿಶ್ವಕಪ್ ಮತ್ತು 2013ರಲ್ಲಿ ಚಾಂಪಿಯನ್ ಟ್ರೋಫಿ ಗೆಲುವಿನಲ್ಲಿ ವಿರಾಟ್ ಪ್ರಮುಖ ಪಾತ್ರ ವಹಿಸಿದ್ದರು.
ರಾಯಲ್ ಚಾಲೆಂಜರ್ಸ್ನಲ್ಲಿ ಆಡುವ ಕಿಂಗ್: ಕ್ರಿಕೆಟ್ ಹಬ್ಬ ಐಪಿಎಲ್ನಲ್ಲಿ ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುತ್ತಾರೆ. ಐಪಿಎಲ್ ಶುರುವಾದಾಗಿನಿಂದಲೂ ಕೊಹ್ಲಿ ಆರ್ಸಿಬಿ ತಂಡದ ಪರ ಆಟ ಆಡಿಕೊಂಡು ಬಂದಿದ್ದಾರೆ. ಐಪಿಎಲ್ನಲ್ಲಿ ಆಡಿರುವ 237 ಪಂದ್ಯದಲ್ಲಿ ಒಟ್ಟು 7263 ರನ್ ಗಳಿಸಿದ್ದಾರೆ. 37.24 ರನ್ ಸರಾಸರಿ ಹೊಂದಿರುವ ವಿರಾಟ್, ಐಪಿಎಲ್ ಇತಿಹಾಸದಲ್ಲೇ ಅತಿ ಹೆಚ್ಚು ರನ್ ಗಳಿಸಿರುವ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಒಟ್ಟು 7 ಶತಕಗಳನ್ನು ಗಳಿಸಿರುವ ಇವರು ಐಪಿಎಲ್ನಲ್ಲಿ ಅತಿ ಹೆಚ್ಚು ಶತಕ ಗಳಿಸಿರುವ ಆಟಗಾರರೂ ಆಗಿದ್ದಾರೆ. 2016ರ ಐಪಿಎಲ್ನಲ್ಲಿ ಇವರಾಡಿದ 16 ಪಂದ್ಯಗಳಲ್ಲಿ ಒಟ್ಟು 976 ರನ್ ಗಳಿಸಿದ್ದರು. 4 ಶತಕ, 5 ಅರ್ಧಶತಕಗಳನ್ನು ಗಳಿಸಿದ್ದ ಇವರು 81.08 ರನ್ ಸರಾಸರಿ ಹೊಂದಿದ್ದರು.
ಪ್ರಶಸ್ತಿಗಳು: 2018ರಲ್ಲಿ ವಿರಾಟ್ ಕೊಹ್ಲಿಗೆ ಭಾರತದ ಅತ್ಯುನ್ನತ ಕ್ರೀಡಾ ಪ್ರಶಸ್ತಿ ಮೇಜರ್ ಧ್ಯಾನ್ಚಂದ್ ಖೇಲ್ ರತ್ನ ನೀಡಿ ಗೌರವಿಸಲಾಗಿದೆ. ಐಸಿಸಿ ದಶಕದ ಆಟಗಾರ ಪ್ರಶಸ್ತಿ, ಐಸಿಸಿ ವರ್ಷದ ಆಟಗಾರ, ಐಸಿಸಿ ಟೆಸ್ಟ್ ಆಟಗಾರ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ವಿರಾಟ್ ಪಡೆದಿದ್ದಾರೆ.
ಇದನ್ನೂ ಓದಿ: ಹರಿಣಗಳನ್ನು ಮಣಿಸಿ ನಂ.1 ಪಟ್ಟ ಉಳಿಸಿಕೊಳ್ಳುತ್ತಾ ಭಾರತ: ನಾಳೆ ರೋಹಿತ್ ಪಡೆಗೆ ದಕ್ಷಿಣ ಆಫ್ರಿಕಾ ಸವಾಲು