ಹೈದರಾಬಾದ್: ಸಾಮಾನ್ಯವಾಗಿ ಒಬ್ಬ ಕ್ರಿಕೆಟಿಗನಿಗೆ ದೊಡ್ಡ ಗಾಯವಾಗಿ ಕೆಲವು ತಿಂಗಳುಗಳ ಕಾಲ ಆಟ ತಪ್ಪಿದರೆ ಮತ್ತೆ ಅವರು ಫಾರ್ಮ್ಗೆ ಬರುವುದು ಕಷ್ಟ. ಗಾಯದಿಂದ ಚೇತರಿಸಿಕೊಂಡ ನಂತರವೂ ಗಾಯದ ಪರಿಣಾಮಗಳು ಮುಂದುವರಿಯುತ್ತವೆ. ಮತ್ತೆ ಗಾಯಗೊಳ್ಳುತ್ತೇವೆ ಎಂಬ ಭಯವು ಅವರ ಪ್ರದರ್ಶನದ ಮೇಲೆ ಪರಿಣಾಮ ಬೀರುತ್ತದೆ. ಕೆಲ ತಿಂಗಳ ವಿರಾಮದ ನಂತರ ಆಟಗಾರರು ಲಯಕ್ಕೆ ಮರಳಲು ಹೆಣಗಾಡುತ್ತಾರೆ. ಆದರೆ ಕೆಎಲ್ ರಾಹುಲ್ ಕಥೆಯೇ ಬೇರೆ. ಗಾಯದ ಸಮಸ್ಯೆಯಿಂದ ಐದು ತಿಂಗಳ ಕಾಲ ಆಟದಿಂದ ದೂರ ಉಳಿದಿದ್ದ ರಾಹುಲ್, ಪುನರಾಗಮನಕ್ಕೆ ಉತ್ಸುಕರಾಗಿದ್ದರು. ಅವರು ವೃತ್ತಿಜೀವನದ ಅತ್ಯುತ್ತಮ ಫಾರ್ಮ್‌ನೊಂದಿಗೆ ಅಚ್ಚರಿ ಮೂಡಿಸಿದ್ದಾರೆ.
8 ಏಕದಿನ.. 7 ಇನ್ನಿಂಗ್ಸ್.. 402 ರನ್.. 100.50 ಸರಾಸರಿ.. 1 ಶತಕ.. 3 ಅರ್ಧಶತಕ.. ಗಾಯದಿಂದ ಕಮ್ ಬ್ಯಾಕ್ ಮಾಡಿದ ನಂತರ ಕೆಎಲ್ ರಾಹುಲ್ ಅಂಕಿ- ಅಂಶವಿದು. ಅವರು ಹೇಗೆ ಉತ್ತಮ ಪ್ರದರ್ಶನ ನೀಡಿದ್ದಾರೆ ಎಂಬುದನ್ನು ಇದು ವಿವರಿಸುತ್ತದೆ. ಅವರು ತಮ್ಮ ವೃತ್ತಿಜೀವನದಲ್ಲಿ ಅಂತಹ ಸ್ಥಿರತೆಯನ್ನು ತೋರಿಸಿಲ್ಲ. ನಿರೀಕ್ಷೆಗಳೇ ಇಲ್ಲದ ಪರಿಸ್ಥಿತಿಯಲ್ಲಿ ಅಮೋಘ ಅಭಿನಯದ ಮೂಲಕ ಅಚ್ಚರಿ ಮೂಡಿಸಿದ್ದಾರೆ ರಾಹುಲ್.
ಇತ್ತೀಚಿನ ಏಕದಿನ ವಿಶ್ವಕಪ್‌ನಲ್ಲಿ ಭಾರತ ಆಡಿದ ಮೊದಲ ಪಂದ್ಯದಲ್ಲಿ ರಾಹುಲ್ 'ಪ್ಲೇಯರ್ ಆಫ್ ದಿ ಮ್ಯಾಚ್' ಆಗಿ ಹೊರ ಹೊಮ್ಮಿರುವುದು ಗೊತ್ತಿರುವ ಸಂಗತಿ. ಭಾರತ 2 ರನ್ಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಕೊಹ್ಲಿ ಜತೆ ಅಮೋಘ ಬ್ಯಾಟಿಂಗ್ ನಡೆಸಿ ತಂಡವನ್ನು ಗೆಲ್ಲಿಸಿದರು. ಗೆಲುವಿನ ಹಾದಿ ಮುಟ್ಟುವವರೆಗೂ ಅವರು ಕ್ರೀಸ್ ಬಿಡಲಿಲ್ಲ. 97 ರನ್ ಗಳಿಸಿ ಅಜೇಯರಾಗಿ ಉಳಿದಿರುವ ರಾಹುಲ್ಗೆ ಪ್ರಶಂಸೆಯ ಸುರಿಮಳೆಯಾಗುತ್ತಿದೆ.
ಆರಂಭದಲ್ಲಿ ಪರಿಸ್ಥಿತಿಗೆ ಹೊಂದಿಕೊಳ್ಳಲು ತೋರಿದ ಸಂಯಮ, ನಂತರ ಸಮಯೋಚಿತ ಹೊಡೆತಗಳನ್ನು ಆಡಿದ ರೀತಿ ಅಭಿಮಾನಿಗಳನ್ನು ಆಕರ್ಷಿಸಿತು. ಸ್ಪಿನ್ ಪಿಚ್‌ನಲ್ಲಿ ಅವರು ಆಸೀಸ್‌ನ ಅತ್ಯುತ್ತಮ ಸ್ಪಿನ್ನರ್ ಝಂಪಾ ಅವರನ್ನು ಎದುರಿಸಿದರು. ವಿಶ್ವಕಪ್‌ಗೂ ಮುನ್ನ ಆಸ್ಟ್ರೇಲಿಯ ವಿರುದ್ಧದ ಏಕದಿನ ಸರಣಿಯಲ್ಲೂ ತಮ್ಮ ಶಕ್ತಿ ಪ್ರದರ್ಶಿಸಿದ್ದರು ರಾಹುಲ್. ಅವರ ನಾಯಕತ್ವದಲ್ಲಿ ಭಾರತ ಸತತ ಎರಡು ಪಂದ್ಯಗಳಲ್ಲಿ ಗೆಲುವು ದಾಖಲಿಸಿ ಸರಣಿಯನ್ನು ಗೆದ್ದುಕೊಂಡಿತು. ಔಟಾಗದೇ 58, 52, 26.. ಸರಣಿಯಲ್ಲಿ ಅವರ ಸ್ಕೋರ್.
ರಾಹುಲ್ ತಮ್ಮ ಪುನರಾಗಮನ ಟೂರ್ನಮೆಂಟ್ ಏಷ್ಯಾ ಕಪ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ 111 ರನ್ಗಳ ಅಜೇಯ ಇನ್ನಿಂಗ್ಸ್ ಆಡಿದರು. ಶ್ರೀಲಂಕಾ ವಿರುದ್ಧವೂ 39 ರನ್ ಗಳಿಸಿದ್ದರು. ತಂಡಕ್ಕೆ ಮರಳಿದ ನಂತರ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಒಂದು ಕಾಲದಲ್ಲಿ ಸ್ಥಿರತೆ ಮತ್ತು ಸ್ಟ್ರೈಕ್ ರೇಟ್ ಕೊರತೆಯಿಂದ ತೀವ್ರ ಟೀಕೆಗೆ ಗುರಿಯಾಗಿದ್ದ ರಾಹುಲ್ ಈಗ ಆ ವಿಚಾರದಲ್ಲೂ ಮೇಲಕ್ಕೆ ಎದ್ದಿದ್ದಾರೆ. ಅವರ ಪುನರಾಗಮನದಲ್ಲಿ ಅವರ ಸ್ಟ್ರೈಕ್ ರೇಟ್ 92.41 ಆಗಿದೆ.
ಐಪಿಎಲ್‌ನಲ್ಲಿ ಲಖನೌ ಪರ ಆಡುತ್ತಿದ್ದ ವೇಳೆ ರಾಹುಲ್ ಪಂದ್ಯವೊಂದರಲ್ಲಿ ಗಾಯಗೊಂಡಿದ್ದರು. ತೊಡೆಯ ಗಾಯದಿಂದಾಗಿ ಅವರು ಐಪಿಎಲ್‌ನಿಂದ ಹಿಂದೆ ಸರಿದಿದ್ದರು. ನಂತರ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು ಮತ್ತು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ನಾಲ್ಕು ತಿಂಗಳು ಕಾಲ ಕಳೆದರು. ಈ ಗಾಯಕ್ಕೂ ಮುನ್ನ ರಾಹುಲ್ ಪ್ರದರ್ಶನ ಆಶಾದಾಯಕವಾಗಿರಲಿಲ್ಲ. ಸ್ಥಿರ ಪ್ರದರ್ಶನ ನೀಡಲು ಸಾಧ್ಯವಾಗದ ಅವರು ತಂಡದಲ್ಲಿ ಸ್ಥಾನವನ್ನು ಪ್ರಶ್ನಿಸಿದರು.
ಕೆಎಲ್ ರಾಹುಲ್ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ನಿರೀಕ್ಷಿತ ವೇಗದಲ್ಲಿ ಆಡಲಿಲ್ಲ ಎಂಬ ಟೀಕೆಗಳನ್ನೂ ಎದುರಿಸಿದರು. ಒಂದು ಹಂತದಲ್ಲಿ ಅವರನ್ನು ತಂಡದಿಂದ ಕೈಬಿಡುವಂತೆ ಒತ್ತಾಯಗಳು ಕೇಳಿ ಬಂದಿದ್ದವು. ವಿಶ್ವಕಪ್‌ಗೂ ಮುನ್ನ ರಾಹುಲ್ ಫಿಟ್‌ನೆಸ್ ಬಗ್ಗೆ ಅನುಮಾನಗಳಿದ್ದು, ಅವರನ್ನು ವಿಶ್ವಕಪ್ ತಂಡಕ್ಕೆ ಆಯ್ಕೆ ಮಾಡುವ ಅಗತ್ಯವಿತ್ತೇ ಎಂಬ ಪ್ರಶ್ನೆಗಳೂ ಕೇಳಿಬಂದಿದ್ದವು.
ಏಷ್ಯಾಕಪ್ ತಂಡಕ್ಕೆ ಆಯ್ಕೆಯಾದ ನಂತರವೂ ಫಿಟ್ನೆಸ್ ಸಮಸ್ಯೆಯಿಂದಾಗಿ ಮೊದಲೆರಡು ಪಂದ್ಯಗಳಿಂದ ಹೊರಗುಳಿದಿದ್ದರು. ಇದರಿಂದ ಅವರ ಮೇಲಿನ ವಿರೋಧ ಹೆಚ್ಚಾಯಿತು. ಆದರೆ ಪಾಕಿಸ್ತಾನ ವಿರುದ್ಧದ ಮೊದಲ ಪಂದ್ಯದಲ್ಲಿ ಅದ್ಭುತ ಇನ್ನಿಂಗ್ಸ್ ಆಡಿದ್ದರು. ಗಾಯದಿಂದ ಚೇತರಿಸಿಕೊಂಡ ನಂತರ, ಅವರು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ತಮ್ಮ ಬ್ಯಾಟಿಂಗ್‌ನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಮಾನಸಿಕವಾಗಿಯೂ ಸದೃಢವಾಗುವ ಲಕ್ಷಣಗಳಿವೆ. ಒಟ್ಟಾರೆಯಾಗಿ ರಾಹುಲ್ ಇದೇ ಸ್ಥಿರತೆಯನ್ನು ಮುಂದುವರಿಸಿದರೆ ವಿಶ್ವಕಪ್‌ನಲ್ಲಿ ಭಾರತ ಉತ್ತಮ ಪ್ರದರ್ಶನ ನೀಡುವುದರಲ್ಲಿ ಅನುಮಾನವಿಲ್ಲ.
ಓದಿ: ಟಾಸ್ ಗೆದ್ದ ಶ್ರೀಲಂಕಾ ಬ್ಯಾಟಿಂಗ್ ಆಯ್ಕೆ, ಪಾಕ್ ವಿರುದ್ಧ ಸಿಗುವುದೇ ಮೊದಲ ಜಯ!