ಬೆಂಗಳೂರು: ಮಹಾರಾಜ ಟ್ರೋಫಿ ಕ್ರಿಕೆಟ್ 2022ರ ಪಂದ್ಯಾವಳಿಯಲ್ಲಿ ಆಟಗಾರರು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ನಿನ್ನೆ ನಡೆದ ಪಂದ್ಯದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಮಿಂಚಿದ ಗುಲ್ಬರ್ಗ ಮಿಸ್ಟಿಕ್ಸ್ ತಂಡ ಮಹಾರಾಜ ಟ್ರೋಫಿಯಲ್ಲಿ ಮಂಗಳೂರು ಯುನೈಟೆಡ್ ವಿರುದ್ಧ 28 ರನ್‌ಗಳ ಅಂತರದಲ್ಲಿ ಅದ್ಭುತ ಜಯ ದಾಖಲಿಸಿದೆ.
ಗುಲ್ಬರ್ಗಾ ವಿರುದ್ಧ ಮಂಗಳೂರಿಗೆ ಸೋಲು: ಜಯ ಗಳಿಸಲು ಗುಲ್ಬರ್ಗ ತಂಡ ಮಂಗಳೂರಿಗೆ 165 ರನ್‌ಗಳ ಕಠಿಣ ಸವಾಲು ನೀಡಿತ್ತು. ಅಭಿನವ್ ಮನೋಹರ್ (51) ಕ್ರೀಸಿನಲ್ಲಿ ಇರುವವರೆಗೂ ಮಂಗಳೂರು ಗೆಲ್ಲುವ ಲಕ್ಷಣ ತೋರಿತ್ತು. ಆದರೆ, ಗುಲ್ಬರ್ಗದ ಬೌಲರ್‌ಗಳಾದ ವಾಧ್ವಾನಿ ಹಾಗೂ ಕಾರ್ತಿಕ್ ಎರಡು ಓವರ್‌ಗಳಲ್ಲಿ 5 ವಿಕೆಟ್ ಬೀಳಿಸುವ ಮೂಲಕ ಮಂಗಳೂರು ಸೋಲಿನ ಅಂಚಿಗೆ ಸಿಲುಕಿತು. ಅಂತಿಮವಾಗಿ 8 ಎಸೆತ ಬಾಕಿ ಇರುವಾಗಲೇ ಮಂಗಳೂರು 136 ರನ್ ಗಳಿಸಿ ಸರ್ವ ಪತನ ಕಂಡು ಸೋಲನ್ನು ಒಪ್ಪಿಕೊಂಡಿತು.
ಸವಾಲಿನ ಮೊತ್ತ ಗಳಿಸಿದ ಗುಲ್ಬರ್ಗಾ ಮಿಸ್ಟಿಕ್ಸ್: ನಾಯಕ ಮನೀಶ್ ಪಾಂಡೆ (58) ಹಾಗೂ ಕೋದಂಡ ಅಜಿತ್ (38) ಅವರ ಆಕರ್ಷಕ ಬ್ಯಾಟಿಂಗ್ ನೆರವಿನಿಂದ ಗುಲ್ಬರ್ಗಾ ಮಿಸ್ಟಿಕ್ಸ್ ತಂಡ 6 ವಿಕೆಟ್‌ಗಳ ನಷ್ಟಕ್ಕೆ 164 ರನ್ ಗಳಿಸಿ ಮಂಗಳೂರು ಯುನೈಟೆಡ್ಕ್ಕೆ 165 ರನ್‌ಗಳ ಸವಾಲು ನೀಡಿತು. ದೇವದತ್ತ ಪಡಿಕ್ಕಲ್ 25 ರನ್ ಗಳಿಸಿ ಗುಲ್ಬರ್ಗಕ್ಕೆ ಉತ್ತಮ ಆರಂಭ ಕಲ್ಪಿಸಿದ್ದರು.
ಓದಿ: ಮೈದಾನಕ್ಕಿಳಿದು ಅಬ್ಬರಿಸಲು ರೆಡಿಯಾದ ಗೌತಮ್ ಗಂಭೀರ್: ಲೆಜೆಂಡ್ಸ್ ಲೀಗ್ ಟೂರ್ನಿಯಲ್ಲಿ ಭಾಗಿ
ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ನಾಯಕ ಮನೀಶ್ ಪಾಂಡೆ: ನಾಯಕ ಪಾಂಡೆ 40 ಎಸೆಗಳನ್ನೆದುರಿಸಿ 4 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 58 ರನ್ ಗಳಿಸಿ ತಂಡದ ಮೊತ್ತವನ್ನೇರಿಸುವಲ್ಲಿ ನೆರವಾದರು. ಪಡಿಕ್ಕಲ್ ಅವರ ಇನ್ನಿಂಗ್ಸ್‌ನಲ್ಲಿ 4 ಬೌಂಡರಿ ಸೇರಿತ್ತು. ಅಜಿತ್ ಕಾರ್ತಿಕ್ 38* ರನ್ ಗಳಿಸಲು 5.2 ಓವರ್‌ಗಳನ್ನು ವಿನಿಯೋಗಿಸಿದರು. ಇದು ಮಂದಗತಿಯ ರನ್ ಗಳಿಕೆಯಾಗಿ ಕಾಣಬಹುದು. ಆದರೆ ವಿಕೆಟ್ ಉರುಳುತ್ತಿರುವಾಗ ನಾಯಕನಿಗೆ ಉತ್ತಮ ರೀತಿಯಲ್ಲಿ ಸಾಥ್ ನೀಡಿ ಇನ್ನಿಂಗ್ಸ್ ಕಟ್ಟುವುದೂ ಮುಖ್ಯವಾಗಿತ್ತು. ಕಾರ್ತಿಕ್ ಇನ್ನಿಂಗ್ಸ್‌ನಲ್ಲಿ 3 ಬೌಂಡರಿ ಹಾಗೂ 1 ಸಿಕ್ಸರ್ ಸೇರಿತ್ತು.
ಕೊನೆಯ ಕ್ಷಣದಲ್ಲಿ ರಿತೇಶ್ ಭಟ್ಕಳ್ ಕಮಾಲ್: ಕೊನೆಯ ಕ್ಷಣದಲ್ಲಿ ರಿತೇಶ್ ಭಟ್ಕಳ್ 6 ಎಸೆತಗಳನ್ನೆದುರಿಸಿ ಗಳಿಸಿದ 18 ರನ್‌ನಿಂದಾಗಿ ಗುಲ್ಬರ್ಗ ಸವಾಲಿನ ಮೊತ್ತ ಗಳಿಸುವಲ್ಲಿ ಯಶಸ್ವಿಯಾಯಿತು. ಮಂಗಳೂರು ಯುನೈಟೆಡ್ ಪರ ಎಚ್.ಎಸ್ ಶರತ್ ಹಾಗೂ ವೈಶಾಖ್ ವಿಜಯ್ ಕುಮಾರ್ ತಲಾ 2 ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್: ಗುಲ್ಬರ್ಗ ಮಿಸ್ಟಿಕ್ಸ್: 20 ಓವರ್‌ಗಳಲ್ಲಿ 6 ವಿಕೆಟ್‌ಗೆ 164 (ಮನೀಶ್ ಪಾಂಡೆ 58, ದೇವದತ್ತ ಪಡಿಕ್ಕಲ್ 25, ಅಜಯ್ ಕಾರ್ತಿಕ್ 38* ವೈಶಾಖ್ ವಿಜಯ್ ಕುಮಾರ್ 31ಕ್ಕೆ 2, ಶರತ್ 43ಕ್ಕೆ 2).
ಮಂಗಳೂರು ಯುನೈಟೆಡ್: 18.4 ಓವರ್‌ಗಳಲ್ಲಿ 136 (ಅಭಿನವ್ ಮನೋಹರ್ 51, ಸುಜಯ್ ಸತರ್ 22, ಕೌಶಲ್ ವಾಧ್ವಾನಿ 48ಕ್ಕೆ 3, ಕಾರ್ತಿಕ್ 9ಕ್ಕೆ 2, ಪವನ್ ಭಾಟಿಯಾ 26ಕ್ಕೆ 2).
ಓದಿ: ಮಹಾರಾಜ ಟ್ರೋಫಿ ಟಿ20: ಹುಬ್ಬಳ್ಳಿ ಟೈಗರ್ಸ್‌ಗೆ ಶರಣಾದ ಶಿವಮೊಗ್ಗ ಸ್ಟ್ರೈಕರ್ಸ್