ಹೈದರಾಬಾದ್: ವೈಯಕ್ತಿಕ ಕಾರಣದಿಂದ 2020ರ ಆವೃತ್ತಿಯಿಂದ ಹೊರಗುಳಿದಿದ್ದ ವೆಸ್ಟ್ ಇಂಡೀಸ್ ದೈತ್ಯ ಕ್ರಿಸ್ ಗೇಲ್ ಮತ್ತೆ ಕೆರಿಬಿಯಲ್ ಲೀಗ್ಗೆ ಮರಳಿದ್ದಾರೆ.
ಯುನಿವರ್ಸಲ್ ಬಾಸ್ ಸೇಂಟ್ ಕಿಟ್ಸ್ ಮತ್ತು ನೇವಿಸ್ ಪೇಟ್ರಿಯೋಟ್ಸ್ ತಂಡದ ಪರ ಕಣಕ್ಕಿಳಿಯಲಿದ್ದಾರೆ. ಫ್ರಾಂಚೈಸಿ ತನ್ನ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡುವ ಮೂಲಕ ಖಚಿತಪಡಿಸಿದೆ.
ಗೇಲ್ ತಮ್ಮ ಹಳೆಯ ತಂಡಕ್ಕೆ ಮರಳುತ್ತಿರುವುದು ಇದೇ ಮೊದಲೇನಲ್ಲ. ಮೊದಲ ನಾಲ್ಕು ಆವೃತ್ತಿಗಳಲ್ಲಿ ತಮ್ಮ ತವರು ತಂಡವಾದ ಜಮೈಕಾ ತಂಡದ ಪರ ಆಡಿ 2 ಪ್ರಶಸ್ತಿ ತಂದುಕೊಟ್ಟಿದ್ದರು. ನಂತರ 2017ರಲ್ಲಿ ಎಸ್ಎನ್ಪಿಗೆ ಜಂಪ್ ಆಗಿದ್ದರು. ಆ ಆವೃತ್ತಿಯಲ್ಲಿ ತಂಡ ಫೈನಲ್ ಪ್ರವೇಶಿಸಲು ನೆರವಾಗಿದ್ದರು. ಮತ್ತೆ 2019ರಲ್ಲಿ ಜಮೈಕಾ ತಂಡಕ್ಕೆ ವಾಪಸ್ ಆಗಿದ್ದರು. ಆದರೆ, ಶತಕ ಸಿಡಿಸಿದ್ದ ಗೇಲ್ ನಂತರ ಲಯ ಕಳೆದುಕೊಂಡರು, ಪರಿಣಾಮ ತಲವಾಸ್ ತಂಡದ ಕೊನೆಯ ಸ್ಥಾನಕ್ಕಿಳಿದಿತ್ತು.
ಆದರೆ, 2020ರ ಆವೃತ್ತಿಗೂ ಮೊದಲು ತಾವೂ ತಂಡದಿಂದ ಹೊರಬರುವುದಕ್ಕೆ ಮುಖ್ಯ ಕೋಚ್ ರಾಮನರೇಶ್ ಸರವಣ್ ಕಾರಣವೆಂದು ಸಾರ್ವಜನಿಕವಾಗಿ ಆರೋಪ ಮಾಡಿ ವಿವಾದ ಸೃಷ್ಟಿಸಿದ್ದರು. ಇದೀಗ ಕಳೆದ ಆವೃತ್ತಿಯಲ್ಲಿ 10 ಪಂದ್ಯಗಳಿಂದ ಕೇವಲ ಒಂದು ಪಂದ್ಯವನ್ನಷ್ಟೇ ಗೆಲ್ಲಲು ಸಾಧ್ಯವಾಗಿದ್ದ ಪೇಟ್ರಿಯೋಟ್ಸ್ ತಂಡದ ಪರ ಕಣಕ್ಕಿಳಿಯಲ ಸಜ್ಜಾಗಿದ್ದಾರೆ.
ಗೇಲ್ ಜೊತೆಗೆ ದಕ್ಷಿಣ ಆಫ್ರಿಕಾದ ಫಾಫ್ ಡು ಪ್ಲೆಸಿಸ್ ಹಾಗೂ ಬಾಂಗ್ಲಾದೇಶ ಶಕಿಬ್ ಅಲ್ ಹಸನ್ ಕೂಡ ಸಿಪಿಎಲ್ಗೆ ಮರಳಿದ್ದಾರೆ. ಪ್ಲೆಸಿಸ್ ಲೂಸಿಯಾ ಜೌಕ್ಸ್ ತಂಡಕ್ಕೆ ಮತ್ತು ಶಕಿಬ್ ತಲೈವಾಸ್ ತಂಡದ ಪರ ಕಣಕ್ಕಿಳಿಯಲಿದ್ದಾರೆ.
ಇದನ್ನು ಓದಿ: ಐಪಿಎಲ್ನ ದ್ವಿತೀಯಾರ್ಧದಲ್ಲಿ ಆಡಲು ನಮ್ಮ ಆಟಗಾರರಿಗೆ ಅವಕಾಶ ಕೊಡಲ್ಲ: ಇಸಿಬಿ ಸ್ಪಷ್ಟನೆ