ಭಾರತ ಕ್ರಿಕೆಟ್ ತಂಡವು ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಿಂದ ಹೊರಬೀಳುತ್ತಿದ್ದಂತೆ ಹಲವು ಮಾಜಿ ಕ್ರಿಕೆಟ್ ದಿಗ್ಗಜರು, ವಿಶ್ಲೇಷಕರು ಟೀಕಾಪ್ರಹಾರ ನಡೆಸಿದ್ದಾರೆ. ರೋಹಿತ್ ಶರ್ಮಾ ನಾಯಕತ್ವ ಹಾಗೂ ಆರಂಭಿಕ ಆಟಗಾರ ಕೆಎಲ್ ರಾಹುಲ್ ಕಳಪೆ ಪ್ರದರ್ಶನ ಸೇರಿ ತಂಡದ ಇತರ ಆಟಗಾರರ ಬಗ್ಗೆಯೂ ಎಲ್ಲೆಡೆ ಅಪಸ್ವರ ಎದ್ದಿದೆ. ಕಳೆದ 10 ವರ್ಷಗಳಿಂದ ಭಾರತ ತಂಡ ಯಾವುದೇ ಐಸಿಸಿ ಟ್ರೋಫಿ ಗೆಲ್ಲದಿರುವುದೂ ಸಹ ಧೋನಿ ನಂತರ ಬಂದ ನಾಯಕರ ಬಗ್ಗೆ ಟೀಕೆಗೆ ಕಾರಣವಾಗಿದೆ.
ಉತ್ತಮ ಕ್ರಿಕೆಟ್ ಆಟಗಾರರು ಯಾವಾಗಲೂ ಉತ್ತಮ ನಾಯಕರಾಗಿರಬೇಕೇಂದೇನಿಲ್ಲ. ಆದರೆ 2013ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಜಯದ ನಂತರ ಭಾರತ ತಂಡ ಐಸಿಸಿ ಟ್ರೋಫಿಯ ಬರ ಎದುರಿಸುತ್ತಿದೆ. ಎಂಎಸ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ ಬಳಿಕ ವಿರಾಟ್ ಕೊಹ್ಲಿ ಹಾಗೂ ಇದೀಗ ರೋಹಿತ್ ಶರ್ಮಾ ತಂಡದ ನಾಯಕರಾಗಿದ್ದಾರೆ. ಕೊಹ್ಲಿ ನಾಯಕತ್ವದಲ್ಲಿ, ಭಾರತವು 2021ರಲ್ಲಿ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಟ್ರೋಫಿ ಗೆಲ್ಲುವ ಸಮೀಪಕ್ಕೆ ಬಂದು ಎಡವಿತ್ತು. ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಯಶಸ್ವಿ ನಾಯಕ ರೋಹಿತ್ ಬಗ್ಗೆ ಕ್ರಿಕೆಟ್ ತಜ್ಞರು ಭಾರಿ ನಿರೀಕ್ಷೆ ಹೊಂದಿದ್ದರು. ಆದರೆ ಇತ್ತೀಚೆಗೆ ಏಷ್ಯಾ ಕಪ್ ಮತ್ತು ಈಗ ಟಿ20 ವಿಶ್ವಕಪ್‌ನಲ್ಲಿ ರೋಹಿತ್ ಬಳಗ ಮುಗ್ಗರಿಸಿದೆ. ಇದು ಅಂತಾರಾಷ್ಟ್ರೀಯ ನಾಯಕತ್ವ ಸುಲಭವಲ್ಲ ಎಂಬುದನ್ನು ಸಾಬೀತುಪಡಿಸಿದೆ.
ಈ ನಡುವೆ ಟೀಂ ಇಂಡಿಯಾ ನಾಯಕತ್ವ ಹಾಗೂ ಪ್ರದರ್ಶನದ ಬಗ್ಗೆ ಮಾತನಾಡಿರುವ ಗೌತಮ್ ಗಂಭೀರ್, 'ಭವಿಷ್ಯದ ಕ್ರಿಕೆಟ್ನಲ್ಲಿ ಯಾರಾದರೂ ಬಹುಶಃ ರೋಹಿತ್ ಶರ್ಮಾಗಿಂತ ಹೆಚ್ಚು ಡಬಲ್ ಸೆಂಚುರಿ ಮತ್ತು ವಿರಾಟ್ ಕೊಹ್ಲಿಗಿಂತ ಹೆಚ್ಚು ಶತಕ ಬಾರಿಸಬಹುದು. ಆದರೆ, ಧೋನಿ ಬಳಿಕ ಯಾವುದೇ ಭಾರತೀಯ ನಾಯಕ ಕೂಡ ಮೂರೂ ಐಸಿಸಿ ಟ್ರೋಫಿಗಳನ್ನು ಗೆಲ್ಲಲು ಸಾಧ್ಯವಿಲ್ಲ' ಎಂದು ಹೇಳಿದ್ದಾರೆ.
ಭಾರತದ ಮಾಜಿ ನಾಯಕ ಧೋನಿ ಎಲ್ಲಾ ಮೂರು ಪ್ರತಿಷ್ಠಿತ ಐಸಿಸಿ ಟ್ರೋಫಿ ಗೆದ್ದ ಏಕೈಕ ಭಾರತೀಯ ನಾಯಕರಾಗಿದ್ದಾರೆ. ಧೋನಿ 2007ರಲ್ಲಿ T20 ವಿಶ್ವಕಪ್, 2011ರಲ್ಲಿ ಏಕದಿನ ವಿಶ್ವಕಪ್ ಮತ್ತು 2013ರಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದ ತಂಡದ ನಾಯಕರಾಗಿದ್ದರು. 2007 ಮತ್ತು 2011ರಲ್ಲಿ ಭಾರತವು ವಿಶ್ವ ಚಾಂಪಿಯನ್ ಆಗಿದ್ದಾಗ ಗಂಭೀರ್ ಟೀಮ್ ಇಂಡಿಯಾ ಭಾಗವಾಗಿದ್ದರು. ಈ ಎರಡೂ ಟೂರ್ನಿಯ ಫೈನಲ್ ಪಂದ್ಯಗಳಲ್ಲಿ ಅದ್ಭುತ ಆಟವಾಡಿದ್ದ ಗೌತಮ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಇದನ್ನೂ ಓದಿ: ಟಿ20 ವಿಶ್ವಕಪ್‌ನಲ್ಲಿ ಭಾರತದ ನಿರಾಶಾದಾಯಕ ಪ್ರದರ್ಶನ: ಈ ತಪ್ಪುಗಳನ್ನು ತಿದ್ದಿಕೊಳ್ಳದಿದ್ದರೆ ಇನ್ನೂ ಬೆಲೆ ತೆರಬೇಕಾಗುತ್ತದೆ