ಲೀಡ್ಸ್: ಭಾರತದ ಎದುರಿನ ಮೂರನೇ ಟೆಸ್ಟ್ ಪಂದ್ಯದಲ್ಲೂ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಶತಕ ಸಿಡಿಸಿದ್ದಾರೆ. ಈ ಮೂಲಕ ತಂಡ ಭಾರೀ ಮುನ್ನಡೆ ಸಾಧಿಸಿದೆ.
ಬುಧವಾರ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ವಿರಾಟ್ ಪಡೆ ಕೇವಲ 78 ರನ್ಗೆ ಆಟ ಮುಗಿಸಿತ್ತು. ಬಳಿಕ ಆಟ ಆರಂಭಿಸಿದ್ದ ಇಂಗ್ಲೆಂಡ್ ತಂಡವು ದಿನದಾಟದ ಕೊನೆಗೆ ವಿಕೆಟ್ ನಷ್ಟವಿಲ್ಲದೇ 120 ರನ್ ಗಳಿಸಿತ್ತು.
ಗುರುವಾರ ಆಟ ಮುಂದುವರಿಸಿದ ಆರಂಭಿಕ ಜೋಡಿ ಉತ್ತಮ ಅಡಿಪಾಯ ಹಾಕಿತು. ಅರ್ಧಶತಕ ಗಳಿಸಿ ರೋರಿ ಬರ್ನ್ಸ್ (61 ರನ್) ಅವರು ಮೊಹಮ್ಮದ್ ಶಮಿ ಬೌಲಿಂಗ್ನಲ್ಲಿ ಔಟ್ ಆದರು. ಬಳಿಕ 63ನೇ ಓವರ್‌ನಲ್ಲಿ ರವೀಂದ್ರ ಜಡೇಜ ಬೌಲಿಂಗ್ನಲ್ಲಿ ಹಮೀದ್ (68 ರನ್) ಔಟಾಗಿ ಹೊರ ನಡೆದರು.
ಬಳಿಕ ಡೇವಿಡ್ ಮಲಾನ್ ಜೊತೆ ಸೇರಿದ ನಾಯಕ ರೂಟ್ ಭಾರತದ ಬೌಲರ್‌ಗಳಿಗೆ ಮತ್ತೊಮ್ಮೆ ಕಾಡಿದರು. ಮಲಾನ್, ರೂಟ್ ಉತ್ತಮ ಜೊತೆಯಾಟಕ್ಕೆ ರನ್ಗಳು ಹರಿದುಬಂದವು. ಈ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಶತಕ ಗಳಿಸಿದ್ದ ರೂಟ್, ಇಲ್ಲಿಯೂ 132 ಎಸೆತಗಳಲ್ಲಿ ಶತಕ ಪೂರೈಸಿದರು. ಮಲಾನ್ ಜೊತೆ ಮೂರನೇ ವಿಕೆಟ್‌ಗೆ 139 ರನ್‌ಗಳನ್ನೂ ಪೇರಿಸಿದರು.
(ಜೋ ರೂಟ್ ಹ್ಯಾಟ್ರಿಕ್ ಶತಕ.. ಭಾರತದ ವಿರುದ್ಧ ಹೆಚ್ಚು ಶತಕ ಬಾರಿಸಿದ ಇಂಗ್ಲೀಷ್ ಬ್ಯಾಟ್ಸ್ಮನ್!)
ಸಿರಾಜ್ ಎಸೆತದಲ್ಲಿ ಮಲಾನ್ ಔಟಾದ ನಂತರ ಜಾನಿ ಬೆಸ್ಟೊ ಜೊತೆಗೆ ರೂಟ್ 51 ರನ್‌ಗಳ ಜೊತೆಯಾಟವಾಡಿದರು. ಬಳಿಕ ತಂಡದ ಮೊತ್ತ 383 ರನ್ ತಲುಪಿದಾಗ ಜೋ ರೂಟ್ (121) ಬೂಮ್ರಾಗೆ ವಿಕೆಟ್ ಒಪ್ಪಿಸಿದರು. ನಂತರ ಜೋಸ್ ಬಟ್ಟರ್, ಮೋಯಿನ್ ಅಲಿ, ಶ್ಯಾಮ್ ಕುರಾನ್ ಬಂದಷ್ಟೇ ವೇಗವಾಗಿ ಔಟಾದರು. ಕ್ರಿಸ್ನಲ್ಲಿ ಕ್ರೈಗ್ ಓವರ್ಟನ್ ಹಾಗೂ ಒಲ್ಲೈ ರಾಬಿನ್ಸನ್ ಆಟ ಕಾಯ್ದಿರಿಸಿಕೊಂಡಿದ್ದಾರೆ. ದಿನದಾಂತ್ಯಕ್ಕೆ ಇಂಗ್ಲೆಂಡ್ 129 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 423 ರನ್ ಗಳಿಸಿ 345 ರನ್‌ಗಳ ಮುನ್ನಡೆ ಸಾಧಿಸಿದೆ.
ಸ್ಕೋರ್:
ಭಾರತ: 78
ಇಂಗ್ಲೆಂಡ್: 423/8 (129)