ಚೆನ್ನೈ: ಮೊದಲ ಇನ್ನಿಂಗ್ಸ್ನಲ್ಲಿ ರಿಷಬ್ ಪಂತ್ ದಂಡಿಸಿದ ಸಂದರ್ಭದಲ್ಲಿ ತಂಡದ ಆಟಗಾರರು ತುಂಬಿದ ಬಲವೇ ನನ್ನ ಪುನರಾಗಮನಕ್ಕೆ ಕಾರಣ ಎಂದು ಮೊದಲ ಟೆಸ್ಟ್ನಲ್ಲಿ ಭಾರತದ ವಿರುದ್ಧ ಗೆಲುವು ಸಾಧಿಸಿದ ಬಳಿಕ ಇಂಗ್ಲೆಂಡ್ ಎಡಗೈ ಸ್ಪಿನ್ನರ್ ಜಾಕ್ ಲೀಚ್ ಹೇಳಿದರು.
ಎರಡನೇ ಇನ್ನಿಂಗ್ಸ್ನಲ್ಲಿ 26 ಓವರ್ ಎಸೆದ ಲೀಚ್, 76 ರನ್ ನೀಡಿ ಪ್ರಮುಖ 4 ವಿಕೆಟ್ಗಳನ್ನು ಪಡೆದು ಮಿಂಚಿದರು. ಆದರೆ, ಪ್ರಥಮ ಇನ್ನಿಂಗ್ಸ್ನಲ್ಲಿ ಲೀಚ್ ದುಬಾರಿ ಬೌಲರ್ ಎನಿಸಿಕೊಂಡರು. ಲೀಚ್ ಅವರ ಒಂದೇ ಓವರ್ನಲ್ಲಿ 3 ಸಿಕ್ಸರ್ ಸೇರಿ 5 ಸಿಕ್ಸರ್ ಪಂತ್ ಸಿಡಿಸಿ ಸವಾರಿ ಮಾಡಿದ್ದರು.
ಪಂತ್ ಅವರು ಟೆಸ್ಟ್ ಆಡುತ್ತಿದ್ದಾರೋ ಅಥವಾ ಐಪಿಎಲ್ ಆಡುತ್ತಿದ್ದಾರೋ ಎಂದು ಯೋಚಿಸಿದೆ. ಆದರೆ, ನನಗಂತೂ ಅದು ಸವಾಲಾಗಿ ಪರಿಣಮಿಸಿತು. ಸಹ ಆಟಗಾರರು ನನ್ನ ಬಳಿ ಬಂದು ಧೈರ್ಯ ತುಂಬಿದರು. ಅವರು ತುಂಬಿದ ಬಲವೇ ಎರಡನೇ ಇನ್ನಿಂಗ್ಸ್ನಲ್ಲಿ ಯಶಸ್ಸಿಗೆ ಕಾರಣ ಎಂದು ಹೇಳಿದರು.
ಇದನ್ನೂ ಓದಿ...ಚೆನ್ನೈ ಟೆಸ್ಟ್: ಇಂಗ್ಲೆಂಡ್ ವಿರುದ್ಧ ಭಾರತಕ್ಕೆ 227 ರನ್ಗಳ ಹೀನಾಯ ಸೋಲು
ಭಾರತದಲ್ಲಿ ನನಗಿದು ಮೊದಲ ಪಂದ್ಯ. ಇಂಡಿಯಾ ಉತ್ತಮ ಬ್ಯಾಟಿಂಗ್ ಲೈನ್ ಅಪ್ ತಂಡ ಹೊಂದಿದ್ದು, ನನಗೆ ಹೆಚ್ಚು ಒತ್ತಡ ತಂದಿಟ್ಟಿತ್ತು. ಆದರೆ, ವಿಕೆಟ್ಗಳನ್ನು ಪಡೆದುಕೊಂಡಿದ್ದು ಸಂತೋಷವಾಗಿದೆ ಎಂದು 29 ವರ್ಷದ ಸ್ಪಿನ್ನರ್ ತಿಳಿಸಿದರು.
ದಾಖಲೆಯ 420 ರನ್ ಬೆನ್ನಟ್ಟಿದ ಭಾರತ ತಂಡ, ನಾಯಕ ವಿರಾಟ್ ಕೊಹ್ಲಿ (72), ಶುಭಮನ್ ಗಿಲ್ (50) ಅವರ ಕೊಡುಗೆ ಹೊರತುಪಡಿಸಿ ಉಳಿದವರಿಂದ ಉತ್ತಮ ಪ್ರದರ್ಶನ ಮೂಡಿಬರಲಿಲ್ಲ. 192 ರನ್ಗಳಿಗೆ ಆಲೌಟಾದ ಭಾರತ, ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮೊದಲ ಪಂದ್ಯ 227 ರನ್‌ಗಳಿಂದ ಸೋಲನುಭವಿಸಿತು. ಈ ಮೂಲಕ 1-0 ಅಂತರದಿಂದ ಮುನ್ನಡೆ ಸಾಧಿಸಿರುವ ಆಂಗ್ಲರು, ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೇರುವ ತವಕದಲ್ಲಿದ್ದಾರೆ.