ಮುಂಬೈ: ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಸ್ಟ್ರೇಲಿಯಾ ಕ್ರಿಕೆಟರ್ ಮಿಚೆಲ್ ಮಾರ್ಷ್ ಕೋವಿಡ್ ಪರೀಕ್ಷೆಯಲ್ಲಿ ಪಾಸಿಟಿವ್ ಪಡೆದಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಇಂಡಿಯನ್ ಪ್ರೀಮಿಯರ್ ಲೀಗ್ ಫ್ರಾಂಚೈಸಿ ಸೋಮವಾರ ಖಚಿತಪಡಿಸಿದೆ. ಮಿಚೆಲ್ ಮಾರ್ಷ್ ಅಲ್ಲದೆ ಬಯೋಬಬಲ್ನಲ್ಲಿದ್ದ ಇತರೆ ಕೆಲವು ಸದಸ್ಯರೂ ಕೂಡ ಕೋವಿಡ್ ಟೆಸ್ಟ್ನಲ್ಲಿ ಪಾಸಿಟಿವ್ ಪಡೆದಿದ್ದಾರೆ. ಆದರೆ ಅವರಲ್ಲರೂ ಲಕ್ಷಣರಹಿತರು. ಫ್ರಾಂಚೈಸಿಯ ವೈದ್ಯಕೀಯ ಮಂಡಳಿ ನಿರಂತರ ವೈದ್ಯಕೀಯ ಮೇಲ್ವಿಚಾರಣೆ ಮಾಡುತ್ತಿದೆ ಎಂದು ಫ್ರಾಂಚೈಸಿ ಪ್ರಕಟಣೆಯಲ್ಲಿ ತಿಳಿಸಿದೆ.
ಇದರ ಮಧ್ಯೆ ಐಪಿಎಲ್ ಆಡಳಿತ ಮಂಡಳಿ ಹೇಳಿಕೆ ಬಿಡುಗಡೆ ಮಾಡಿದ್ದು, ಏಪ್ರಿಲ್ 20ರಂದು ಪುಣೆಯಲ್ಲಿ ನಡೆಯಬೇಕಿದ್ದ ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯವನ್ನು ಬ್ರೆಬೋರ್ನ್ನಲ್ಲಿ ಆಯೋಜಿಸಲಾಗುವುದು ಎಂದು ಹೇಳಿದೆ. 'ಆಟಗಾರರೆಲ್ಲರೂ ತಮ್ಮ ತಮ್ಮ ರೂಮಿನಲ್ಲಿ ಪ್ರತ್ಯೇಕತೆಗೆ ಒಳಗಾಗಿದ್ದಾರೆ. ಈ ಸಂದರ್ಭದಲ್ಲಿ ಕೋವಿಡ್ ಪ್ರಕರಣಗಳು ಸಂಭವಿಸಿವೆ. ಹಾಗಾಗಿ ದೀರ್ಘ ಪ್ರಯಾಣವನ್ನು ತಪ್ಪಿಸುವ ಸಲುವಾಗಿ ಬುಧವಾರ ಪುಣೆಯಲ್ಲಿ ನಡೆಯಬೇಕಿದ್ದ ಪಂದ್ಯವನ್ನು ಬ್ರೆಬೋರ್ನ್ ಸ್ಟೇಡಿಯಂನಲ್ಲಿ ನಡೆಸಲು ತೀರ್ಮಾನಿಸಲಾಗಿದೆ' ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ತಿಳಿಸಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ನಲ್ಲಿ ಫಿಸಿಯೋ ಫರ್ಹಾರ್ತ್ ಅವರಿಗೆ ಮೊದಲು ಕೋವಿಡ್ ಸೋಂಕು ಕಾಣಿಸಿಕೊಂಡಿತ್ತು. ಮಿಚೆಲ್ ಮಾರ್ಷ್ಗೆ 16ರಂದು ಹಾಗೂ ಸೋಮವಾರ ಸ್ಪೋರ್ಟ್ಸ್ ಮಸಾಜ್ ಥೆರಪಿಸ್ಟ್ ಚೇತನ್ ಕುಮಾರ್, ವೈದ್ಯ ಅಭಿಜಿತ್ ಸಲ್ವಿ, ಸೋಷಿಯಲ್ ಮೀಡಿಯಾ ಕಂಟೆಂಟ್ ಟೀಮ್ ಸದಸ್ಯ ಆಕಾಶ್ ಮಾನೆ ಅವರಿಗೆ ಸೋಂಕು ಬಾಧಿಸಿತ್ತು.
ಇವರೆಲ್ಲರೂ ಸದ್ಯ ಐಸೊಲೇಷನ್ನಲ್ಲಿದ್ದು, ವೈದ್ಯರ ಮೇಲ್ವಿಚಾರಣೆಯಲ್ಲಿದ್ದಾರೆ. 6 ಮತ್ತು 7ನೇ ದಿನ ಇವರನ್ನು ಮತ್ತೊಮ್ಮೆ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗುವುದು. ಇವುಗಳಲ್ಲಿ ನೆಗೆಟಿವ್ ಬಂದ ತಕ್ಷಣ ಮತ್ತೆ ಬಯೋಬಬಲ್ ಸೇರಿಕೊಳ್ಳಲಿದ್ದಾರೆ ಎಂದು ತಿಳಿಸಲಾಗಿದೆ. ಏಪ್ರಿಲ್ 16ರಿಂದ ಇಡೀ ಡೆಲ್ಲಿ ಕ್ಯಾಪಿಟಲ್ಸ್ ಬಳಗ ಪ್ರತಿನಿತ್ಯ ಆರ್ಟಿ-ಪಿಸಿಆರ್ ಟೆಸ್ಟ್ಗೆ ಒಳಗಾಗುತ್ತಿದ್ದಾರೆ. ಏಪ್ರಿಲ್ 19ರಂದು ನಡೆಸಿದ 4ನೇ ಸುತ್ತಿನ ಪರೀಕ್ಷೆಯಲ್ಲಿ ಎಲ್ಲರಿಗೂ ನೆಗೆಟಿವ್ ಬಂದಿದೆ. ಪಂದ್ಯದ ದಿನವಾದ ಏಪ್ರಿಲ್ 20ರಂದೂ ಕೂಡ ಮತ್ತೊಂದು ಪರೀಕ್ಷೆ ಮಾಡಲಾಗುವುದು ಎಂದು ಬಿಸಿಸಿಐ ವಿವರಣೆ ನೀಡಿದೆ.
ಇದನ್ನೂ ಓದಿ:ಬಟ್ಲರ್ ಶತಕ, ಚಹಾಲ್ ಬೌಲಿಂಗ್ ಅಬ್ಬರಕ್ಕೆ ಕೋಲ್ಕತ್ತಾ ತತ್ತರ: ರಾಜಸ್ಥಾನಕ್ಕೆ ಏಳು ರನ್ಗಳ ಜಯ