ನವದೆಹಲಿ: ಐಸಿಸಿ ಮಂಗಳವಾರ ಟಿ-20 ವಿಶ್ವಕಪ್ ವೇಳಾಪಟ್ಟಿ ಪ್ರಕಟಿಸುತ್ತಿದ್ದಂತೆ ಯಾವ ತಂಡ ಚಾಂಪಿಯನ್ ಆಗಲಿದೆ, ಯಾವ ತಂಡ ಬಲಿಷ್ಠ ಎಂಬ ಚರ್ಚೆ ಬರದಿಂದ ಸಾಗುತ್ತಿದೆ. ವಿಂಡೀಸ್ ಎರಡು ಟಿ-20 ವಿಶ್ವಕಪ್ ತಂದುಕೊಟ್ಟಿರುವ ಡರೇನ್ ಸಾಮಿ ವಿಶ್ವಕಪ್ ಗೆಲ್ಲಬೇಕೆನ್ನುವ ಯಾವುದೇ ತಂಡವಾದರೂ ಭಾರತವನ್ನು ಮಣಿಸಿ ಮುಂದೇ ಹೋಗಬೇಕು ಎಂದು ತಿಳಿಸಿದ್ದಾರೆ.
ಅಕ್ಟೋಬರ್ 17ರಿಂದ ಪುರುಷರ ಟಿ -20 ವಿಶ್ವಕಪ್ ಟೂರ್ನಿ ಯುನೈಟೆಡ್ ಯುಎಇನಲ್ಲಿ ಶುರುವಾಗಲಿದೆ. ಲೀಗ್ ಹಂತದಲ್ಲಿ 8 ತಂಡಗಳು ಸ್ಪರ್ಧಿಸಲಿದ್ದು, ಇದರಲ್ಲಿ 4 ತಂಡಗಳು ಸೂಪರ್ 12ಗೆ ತೇರ್ಗಡೆಯಾಗಲಿವೆ.
ಭಾರತ ತಂಡದ ಪಾಕಿಸ್ತಾನ, ನ್ಯೂಜಿಲ್ಯಾಂಡ್, ಅಫ್ಘಾನಿಸ್ತಾನ ಮತ್ತು 2 ಕ್ವಾಲಿಫೈಯರ್ ತಂಡಗಳಿರುವ ಗುಂಪಿನಲ್ಲಿ ಸ್ಥಾನ ಪಡೆದುಕೊಂಡಿದೆ. ತನ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ.
"ವಿಶ್ವಕಪ್‌ನಲ್ಲಿ ಎಲ್ಲ ತಂಡಗಳು ಸೋಲಿಸಬೇಕಾದ ತಂಡ ಎಂದರೆ ಅದು ಭಾರತ. ಅಲ್ಲಿನ ಪ್ರತಿಭೆಗಳು ಭಾರತದ ದೇಸಿ ಕ್ರಿಕೆಟ್‌ನಿಂದ ಬಂದಿರಲಿ ಅಥವಾ ಐಪಿಎಲ್‌ನಿಂದ ಬಂದಿರಲಿ. ವಿಶ್ವದ ಎಲ್ಲ ಕ್ರಿಕೆಟಿಗರು ಭಾರತಕ್ಕೆ ಹೋಗಿ ಟಿ -20 ಕ್ರಿಕೆಟ್‌ನ ಅನುಭವ ಪಡೆದುಕೊಳ್ಳಲು ಬಯಸುವುದನ್ನು ನೀವು ನೋಡಿದ್ದೀರಿ.
ಆದ್ದರಿಂದ ಟಿ -20 ವಿಶ್ವಕಪ್‌ನಲ್ಲಿ ಬಲಿಷ್ಠ ತಂಡ ಎನಿಸಿರುವ ಭಾರತವನ್ನು ಉಳಿದ ತಂಡಗಳು ಸೋಲಿಸಬೇಕು. ಆಗ ಮಾತ್ರ ಆ ತಂಡಗಳು ಪ್ರಶಸ್ತಿ ಕಡೆಗೆ ಹೋಗಲು ಸಾಧ್ಯ ಎಂದು ವಿಂಡೀಸ್ ಮಾಜಿ ನಾಯಕ ಡೆರೇನ್ ಸಾಮಿ ಸ್ಟಾರ್ ಸ್ಪೋರ್ಟ್ಸ್ನ ಗೇಮ್ ಪ್ಲಾನ್ ಕಾರ್ಯಕ್ರಮದ ವೇಳೆ ತಿಳಿಸಿದ್ದಾರೆ.
2016ರ ವಿಶ್ವಕಪ್‌ನಲ್ಲಿ ನಾವು ಆಡುವಾಗ, ನಾನು ನಮ್ಮ ತಂಡದ ಕೋಚ್ ಮತ್ತು ಇತರ ಆಟಗಾರರಿಗೆ, ನಾವು ಚಾಂಪಿಯನ್ ಆಗಬೇಕಾದರೆ ಭಾರತವನ್ನು ಎದುರಿಸಿಯೇ ಹೋಗಬೇಕು. ಅದು ಯಾವುದೇ ಹಂತದಲ್ಲಿರಲಿ, ನೀವು ಭಾರತ ತಂಡವನ್ನು ಸೋಲಿಸಿಯೇ ಮುನ್ನಡೆಯಬೇಕು. ಅದು ಫೈನಲ್ ಆಗಿರಲಿ ಅಥವಾ ಸೆಮಿಫೈನಲ್ ಆಗಿರಲಿ. ನೀವು ಭಾರತವನ್ನು ಸೋಲಿಸಬೇಕಾಗುತ್ತದೆ ಎಂದು ನಾನು ಮೊದಲೇ ತಿಳಿಸಿದ್ದೆ ಎಂದು 2016ರ ಘಟನೆಯನ್ನು ನೆನೆದಿದ್ದಾರೆ.
ಟಿ-20 ವಿಶ್ವಕಪ್ ಮಾತ್ರವಲ್ಲ ನೀವು ಯಾವುದೇ ಐಸಿಸಿ ಟೂರ್ನಮೆಂಟ್ ಆದರೂ ಭಾರತವನ್ನು ಎದುರಿಸಿ ಹೋಗಬೇಕು. ಬೇಕಾದರೆ ನೀವು ಕಳೆದ ಕೆಲವು ಐಸಿಸಿ ಟೂರ್ನಮೆಂಟ್ಗಳನ್ನು ನೋಡಿ. ಟೆಸ್ಟ್ ಚಾಂಪಿಯನ್ಶಿಪ್ ಅಥವಾ ಏಕದಿನ ವಿಶ್ವಕಪ್ನಲ್ಲಾದರೂ ಭಾರತ ಎದುರಿಸಿಯೇ ಮುನ್ನಡೆಯಬೇಕು ಎಂದು ಸಾಮಿ ಹೇಳಿದ್ದಾರೆ.
ಇದನ್ನು ಓದಿ:ಇಂಗ್ಲೆಂಡ್ 2 ಆಟಗಾರರ ತಂಡ, ಭಾರತ 4 0ದಿಂದ ಸರಣಿ ಗೆಲ್ಲುತ್ತದೆ ಎಂಬ ನಂಬಿಕೆಯಿದೆ: ಗವಾಸ್ಕರ್