ಮುಂಬೈ: ಭಾರತದ ಪರ 2 ವಿಶ್ವಕಪ್ ಗೆದ್ದ ತಂಡದಲ್ಲಿದ್ದ ಕೆಲವೇ ಆಟಗಾರರಲ್ಲಿ ಒಬ್ಬರಾದ ಯೂಸುಫ್ ಪಠಾಣ್ ಇನ್‌ಸ್ಟಾಗ್ರಾಮ್‌ನ ಲೈವ್ ವೇಳೆ ಕೆಲ ಆಸಕ್ತಿದಾಯಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಕೊರೊನಾ ಲಾಕ್ಡೌನ್ನಿಂದಾಗಿ ಕ್ರಿಕೆಟ್ ಲೋಕ ಕೂಡ ಸಂಪೂರ್ಣ ಸ್ತಬ್ಧಗೊಂಡಿದೆ. ಈ ಸಮಯದಲ್ಲಿ ಕ್ರಿಕೆಟಿಗರು ಕುಟುಂಬದವರ ಜೊತೆಗೆ ಮತ್ತು ಕೆಲ ಸಾಮಾಜಿಕ ಜಾಲತಾಣಗಳಲ್ಲಿ ಕ್ರಿಕೆಟ್ ಕುರಿತಂತೆ ಅಭಿಮಾನಿಗಳ ಜತೆಗೆ ಮತ್ತು ತಮ್ಮಿಷ್ಟದ ಆಟಗಾರರೊಂದಿಗೂ ಸಂವಾದ ನಡೆಸುತ್ತಿದ್ದಾರೆ.
ಭಾರತದ ಪರ 2007 ಹಾಗೂ 2011ರ ವಿಶ್ವಕಪ್ ಗೆದ್ದ ತಂಡದಲ್ಲಿದ್ದ ಯೂಸುಫ್ ಪಠಾಣ್ ಕ್ರಿಕೆಟ್ ಟ್ರ್ಯಾಕರ್ ಜೊತೆ ನಡೆಸಿದ ಇನ್‌ಸ್ಟಾಗ್ರಾಮ್ ಲೈವ್ನಲ್ಲಿ ಕೆಲ ವಿಶೇಷ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಹಲವಾರು ಪ್ರಶ್ನೆಗಳಿಗೆ ಉತ್ತರಿಸಿದ ಬಳಿಕ ಕೆಲ ಕ್ರಿಕೆಟಿಗರ ಬಗ್ಗೆ ಒಂದು ಪದದಲ್ಲಿ ಉತ್ತರಿಸಿಬೇಕಾದ ಸುತ್ತಿನಲ್ಲಿ ಪಠಾಣ್ ಅದ್ಭುತ ಆಡಿದ್ದಾರೆ. ಈ ವೇಳೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಬಂದಾಗ 37 ವರ್ಷದ ಪಠಾಣ್, ಸಚಿನ್ ಬಗ್ಗೆ ನಾನೇನು ಹೇಳಬೇಕು ? ಅವರ ಬಗ್ಗೆ ತುಂಬಾ ಹೇಳಬಹುದು. ಆದರೆ, ನಾನು ಅವರನ್ನು ‘ಗಾಡ್ ಆಫ್ ಕ್ರಿಕೆಟ್’ ಎಂದು ಮಾತ್ರ ಸದ್ಯಕ್ಕೆ ಹೇಳುತ್ತೇನೆ ಎಂದಿದ್ದಾರೆ.
ಅದೇ ರೀತಿ ಭಾರತದ ಯಶಸ್ವಿ ನಾಯಕ ಎಂಸ್ ಧೋನಿ ಬಗ್ಗೆ ಕೇಳಿದಾಗ ಪಠಾಣ್, 'ಕ್ಲೆವರ್' ಎಂಬ ಉತ್ತರ ನೀಡಿದರು. ಅದಕ್ಕೆ ಅವರ ನಾಯಕತ್ವದ ಗುಣಕ್ಕಾಗಿ ಆ ಉತ್ತರ ನೀಡಿರುವುದಾಗಿ ಸಮರ್ಥಿಸಿಕೊಂಡರು. ಪಠಾಣ್ 2 ವಿಶ್ವಕಪ್ ಗೆಲುವಿನ ಭಾಗವಾಗಿರುವ ಸಂದರ್ಭ ಧೋನಿಯೇ ಟೀಂ ಇಂಡಿಯಾ ನಾಯಕ ಎಂಬುದನ್ನು ಇಲ್ಲಿ ಸ್ಮರಿಸಬಹುದು.
ಸ್ಫೋಟಕ ಬ್ಯಾಟ್ಸ್ಮನ್ ಯುವರಾಜ್ ರಾಜ್ಗೆ ಪಠಾಣ್ 'ರಾಕ್‌ಸ್ಟಾರ್' ಎಂದು ಉತ್ತರಿಸಿದ್ದಾರೆ. ಯುವಿ ಜೊತೆಗೆ ಆಸ್ಟ್ರೇಲಿಯಾ ಸ್ಪಿನ್ನರ್ ಶೇನ್ ವಾರ್ನ್ರನ್ನು ರಾಕ್‌ಸ್ಟಾರ್ ಎಂತಲೂ, ತಾವೂ ಐಪಿಎಲ್ನಲ್ಲಿ ಹೆಚ್ಚು ಆಡಿದ ಕೆಕೆಆರ್ನಲ್ಲಿದ್ದ ಗಂಭೀರ್ರನ್ನು ‘ಗಂಭೀರ ’ ಎಂತಲೂ ವಿವರಿಸಿದ್ದಾರೆ. ಇದೇ ಸಂದರ್ಭದಲ್ಲಿ ಶೇನ್ ವಾರ್ನ್ ನಾಯಕತ್ವದ ಬಗ್ಗೆ ಕೊಂಡಾಡಿದ್ದಾರೆ. ಮೊದಲ 3 ಆವೃತ್ತಿಯ ಐಪಿಎಲ್ನಲ್ಲಿ ಪಠಾಣ್ ರಾಜಸ್ಥಾನ ರಾಯಲ್ಸ್ ಪರ ಆಡಿದ್ದರು.