ಲಾಹೋರ್: ನೂತನವಾಗಿ ಪಾಕಿಸ್ತಾನ ತಂಡದ ಬ್ಯಾಟಿಂಗ್ ಕೋಚ್ ಆಗಿ ಆಯ್ಕೆ ಆಗಿರುವ ಯೂನಿಸ್ ಖಾನ್ ತಮ್ಮ ತಂಡದ ನಾಯಕನಾಗಿರುವ ಬಾಬರ್ ಅಜಂ ಮುಂದಿನ ಕೆಲವು ವರ್ಷಗಳಲ್ಲಿ ಹಲವು ದಾಖಲೆಗಳನ್ನು ಮುರಿಯಲಿದ್ದಾರೆ ಎಂದಿದ್ದಾರೆ. ಆದರೆ, ಅವರನ್ನು ಈಗಲೇ ಕೊಹ್ಲಿ ಜೊತೆಯಾಗಲಿ ಅಥವಾ ತೆಂಡೂಲ್ಕರ್ ಹಾಗೂ ಮಿಯಾಂದಾದ್ ಅವರಂತಹ ಮಹಾನ್ ಆಟಗಾರರ ಜೊತೆ ಹೋಲಿಕೆ ಮಾಡುವುದು ಸರಿಯಲ್ಲ ಎಂದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಬರ್ ಇನ್ನೂ ಅನೇಕ ಉತ್ತಮ ಕಾರ್ಯಗಳನ್ನು ಸಾಧಿಸಿ ದಂತಕಥೆಯಾಗುವುದನ್ನು ನೋಡಲು ನಾನು ಇಷ್ಟಪಡುತ್ತೇನೆ ಎಂದು ಖಾನ್ ತಿಳಿಸಿದ್ದಾರೆ.
ಈ ಹಿಂದೆ ಪಿಸಿಬಿ ಜೊತೆ ಹಲವು ಸಮಸ್ಯೆಗಳನ್ನು ಹೊಂದಿದ್ದ ಯೂನಿಸ್ ಇದೀಗ ಪಾಕ್ ತಂಡಕ್ಕೆ ಕೋಚ್ ಆಗಿ ಆಯ್ಕೆಯಾಗಿದ್ದಾರೆ. "ನಾನು ನನ್ನೊಂದಿಗೆ ಯಾವುದೇ ರೀತಿಯ ಅಹಂ ಸಮಸ್ಯೆಗಳನ್ನು ಹೊಂದಿಲ್ಲ ಎಂದು ನಿಮಗೆ ಭರವಸೆ ನೀಡಬಲ್ಲೆ. ಅಹಂ ಎಂಬುದು ನಿಮ್ಮ ಪ್ರದರ್ಶನದಲ್ಲಿರಬೇಕೇ ಹೊರತು, ನಡವಳಿಕೆಯಲ್ಲಲ್ಲ ಎಂದು ನಾನು ಯಾವಾಗಲೂ ಭಾವಿಸಿದ್ದೇನೆ. ಕಳೆದ ಕೆಲವು ವರ್ಷಗಳಲ್ಲಿ ನನ್ನಲ್ಲಿದ್ದ ಆಕ್ರಮಣಶೀಲತೆಯನ್ನು ನಿಗ್ರಹಿಸಿ, ಹೆಚ್ಚು ವಿನಮ್ರವಾಗಿರಲು ಹಾಗೂ ಹೆಚ್ಚು ಕಲಿಯಲು ಪ್ರಯತ್ನಿಸುತ್ತಿದ್ದೇನೆ" ಎಂದು ಹೇಳಿದ್ದಾರೆ.
ಇನ್ನು ಪಾಕ್ ಬ್ಯಾಟ್ಸ್ಮನ್ ಬಾಬರ್ ಅಜಮ್ ಮತ್ತು ಕೊಹ್ಲಿ ನಡುವಿನ ಹೋಲಿಕೆ ಕುರಿತು ಮಾತನಾಡಿರುವ ಖಾನ್, ಈ ಹಂತದಲ್ಲಿ ಇವರಿಬ್ಬರನ್ನು ಹೋಲಿಕೆ ಮಾಡುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
"ಹೋಲಿಕೆ ಮಾಡುವುದನ್ನು ನಾನು ಇಷ್ಟಪಡುವುದಿಲ್ಲ. ವಿರಾಟ್ ಈ ಆಟದಲ್ಲಿ ಸದ್ಯ ಟಾಪ್ನಲ್ಲಿದ್ದಾರೆ. ಅವರು ಎಲ್ಲ ಮಾದರಿಯ ಕ್ರಿಕೆಟ್ನಲ್ಲಿ ನೀಡುವ ಪ್ರದರ್ಶನ ನೋಡಿದರೆ ಅವರೊಬ್ಬ ಟಾಪ್ ಬ್ಯಾಟ್ಸ್ಮನ್ ಎಂಬುದರಲ್ಲಿ ಯಾವುದೇ ಅನುಮಾನಗಳಿಲ್ಲ. ಬಾಬರ್ ಕೂಡ ಎಲ್ಲ ಮಾದರಿ ಕ್ರಿಕೆಟ್ನಲ್ಲಿ ಇತ್ತೀಚಿನ ದಿನಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ನಾನು ನೋಡುವ ಪ್ರಕಾರ, ವಿರಾಟ್ ಕೊಹ್ಲಿ ಇಂದು ಏನು ಸಾಧಿಸಿದ್ದಾರೋ ಅದನ್ನು ಬಾಬರ್ ಅಜಂ ಮುಂದಿನ 5 ವರ್ಷಗಳಲ್ಲಿ ಸಾಧಿಸಲಿದ್ದಾರೆ".
"ಮುಂದಿನ ನಾಲ್ಕೈದು ವರ್ಷಗಳ ನಂತರ ಬಾಬರ್ ಮತ್ತು ಕೊಹ್ಲಿಯನ್ನು ಹೋಲಿಕೆ ಮಾಡಿದರೆ ಸೂಕ್ತ ಎನಿಸಲಿದೆ. ಆದರೆ, ನಾವು ಅವರ ಸುತ್ತಲೂ ಅನೇಕ ನಿರೀಕ್ಷೆಯ ಭಾರವನ್ನು ಹೆಚ್ಚಿಸುವ ಅಗತ್ಯವಿಲ್ಲ. ಲೆಜೆಂಡ್ಗಳಾದ ಸಚಿನ್ ಅಥವಾ ಮಿಯಾಂದಾದ್ ಅಂತಹ ಆಟಗಾರರೊಡನೆ ಹೋಲಿಕೆ ಮಾಡಬೇಕಾದರೆ ಅವರಿಗೆ ಸಮಯ ಮತ್ತು ಸ್ಥಳಾವಕಾಶ ನೀಡಬೇಕಿದೆ" ಎಂದು ಅವರು ತಿಳಿಸಿದ್ದಾರೆ.