ಶಾರ್ಜಾ: ಸುದೀರ್ಘ ಸಮಯದ ನಂತರ ಭಾರತೀಯ ಮಹಿಳಾ ಕ್ರಿಕೆಟಿಗರು ಟಿ20 ಚಾಲೆಂಜ್ ಮೂಲಕ ಮತ್ತೆ ಮೈದಾನಕ್ಕೆ ಕಣಕ್ಕಿಳಿಯಲಿದ್ದಾರೆ. ಈ 4 ಪಂದ್ಯಗಳಲ್ಲಿ ಟೂರ್ನಿಯಲ್ಲಿ ಭಾರತ ತಂಡದ ಪ್ರಸಿದ್ಧ ಆಟಗಾರ್ತಿಯರು ಭಾಗವಹಿಸಲಿದ್ದಾರೆ.
ಮಹಿಳಾ ಟಿ20 ಚಾಲೆಂಜ್ ನವೆಂಬರ್ 4 ರಿಂದ 9ರವರೆಗೆ ಶಾರ್ಜಾದಲ್ಲಿ ನಡೆಯಲಿದೆ. ಈ ಟೂರ್ನಿಯಲ್ಲಿ ಟ್ರೈಲ್ಬ್ಲೇಜರ್ಸ್, ಸೂಪರ್ನೊವಾಸ್ ಹಾಗೂ ವೆಲಾಸಿಟಿ ತಂಡಗಳು ಭಾಗವಹಿಸಲಿವೆ. ಈ ತಂಡಗಳನ್ನು ಕ್ರಮವಾಗಿ ಸ್ಮೃತಿ ಮಂಧಾನ, ಹರ್ಮನ್ಪ್ರೀತ್ ಕೌರ್ ಹಾಗೂ ಮಿಥಾಲಿ ರಾಜ್ ಮುನ್ನಡೆಸಲಿದ್ದಾರೆ.
ಈ ಟೂರ್ನಮೆಂಟ್ಗೂ ಮುನ್ನ ಟೂರ್ನಿಯಲ್ಲಿ ಮಿಂಚಬಹುದಾದ ಟಾಪ್ 5 ಆಟಗಾರರನ್ನು ಇಲ್ಲಿ ನೋಡಬಹುದು.
ಮಿಥಾಲಿ ರಾಜ್(ವೆಲಾಸಿಟಿ)
ಮಹಿಳಾ ಕ್ರಿಕೆಟ್ ಜಗತ್ತಿನಲ್ಲಿ ಅತ್ಯುತ್ತಮ ಆಟಗಾರ್ತಿಯರಲ್ಲಿ ಒಬ್ಬರಾಗಿರುವ ಮಿಥಾಲಿರಾಜ್ ವೆಲಾಸಿಟಿ ತಂಡದ ನಾಯಕಿಯಾಗಿದ್ದಾರೆ. 37 ವರ್ಷದ ಆಟಗಾರ್ತಿ 2019 ಮಾರ್ಚ್ನಲ್ಲಿ ತಮ್ಮ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ್ದರು. ಅವರು 89 ಟಿ20 ಪಂದ್ಯಗಳಲ್ಲಿ 2364 ರನ್ಗಳಿಸಿದ್ದಾರೆ. ಅವರ ಗರಿಷ್ಠ ಸ್ಕೋರ್ 87 ಆಗಿದೆ.
ಶೆಫಾಲಿ ವರ್ಮಾ(ವೆಲಾಸಿಟಿ)
ಟಿ20 ಕ್ರಿಕೆಟ್ನಲ್ಲಿ ಕ್ರಿಸ್ಗೇಲ್ ರೀತಿ ಬ್ಯಾಟಿಂಗ್ ಮಾಡುವ ಯುವ ಆಟಗಾರ್ತಿ ತಮ್ಮ ಸ್ಫೋಟಕ ಬ್ಯಾಟಿಂಗ್ಅನ್ನು ಟೂರ್ನಮೆಂಟ್ನಲ್ಲಿ ಮುಂದುವರಿಸಲಿದ್ದಾರೆ ಎಂಬ ನಿರೀಕ್ಷೆಯಿದೆ. 16 ವರ್ಷದ ಯುವ ಆಟಗಾರ್ತಿ ಭಾರತದ ಪರ ಟಿ20 ಕ್ರಿಕೆಟ್ ಆಡಿದ ಕಿರಿಯ ಆಟಗಾರ್ತಿ ಎಂಬ ದಾಖಲೆಗೆ ಪಾತ್ರರಾಗಿದ್ದರು. ಟಿ20 ವಿಶ್ವಕಪ್ನಲ್ಲಿ ಅಬ್ಬರಿಸುವ ಮೂಲಕ ಟಿ20 ಶ್ರೇಯಾಂಕದಲ್ಲಿ ನಂಬರ್ ಒನ್ ಸ್ಥಾನಕ್ಕೇರಿದ್ದರು. ಟಿ20 ವಿಶ್ವಕಪ್ನಲ್ಲಿ ಶೆಫಾಲಿ ಗರಿಷ್ಠ ಸಿಕ್ಸರ್ಗಳಿಸಿದ ಬ್ಯಾಟರ್ ಎನಿಸಿಕೊಂಡಿದ್ದರು.
ಜಮಿಮಾ ರೋಡ್ರಿಗಸ್(ಸೂಪರ್ನೊವಾಸ್)
ಮುಂಬೈನ 20 ವರ್ಷದ ಪ್ರತಿಭಾನ್ವಿತ ಬ್ಯಾಟ್ಸ್ವುಮನ್ ಜೆಮಿಮಾ 2019ರ ಮಹಿಳಾ ಟಿ20 ಚಾಲೆಂಜ್ನಲ್ಲಿ ಗರಿಷ್ಠ ರನ್ಗಳಿಸುವ ಮೂಲಕ ಟೂರ್ನಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. ಇವರು ಸೂಪರ್ ನೊವಾಸ್ನ ಪ್ರಮುಖ ಬ್ಯಾಟರ್ ಆಗಲಿದ್ದಾರೆ.
ಹರ್ಮನ್ ಪ್ರೀತ್ ಕೌರ್(ಸೂಪರ್ನೊವಾಸ್)
ಹರ್ಮನ್ ಪ್ರೀತ್ ಕೌರ್ ಮಹಿಳಾ ಟಿ20 ಚಾಲೆಂಜ್ ಇತಿಹಾಸದಲ್ಲೇ ಯಶಸ್ವಿ ಆಟಗಾರ್ತಿಯರಾಗಿದ್ದಾರೆ. ಇವರ ನೇತೃತ್ವದ ತಂಡ ಸತತವಾಗಿ 2 ಬಾರಿ ಚಾಂಪಿಯನ್ ಆಗಿದೆ. ಅವರು ಭಾರತದ ಪರ ಟಿ20ಯಲ್ಲಿ ಸೆಂಚುರಿ ಸಿಡಿಸಿದ ಮೊದಲ ಮಹಿಳಾ ಕ್ರಿಕೆಟಿಗೆ ಹಾಗೂ 100 ಟಿ20 ಪಂದ್ಯವನ್ನಾಡಿದ ಮೊದಲ ಆಟಗಾರ್ತಿ ಎಂಬ ದಾಖಲೆ ಹೊಂದಿದ್ದಾರೆ.
ಸ್ಮೃತಿ ಮಂಧಾನ(ಟ್ರೈಲ್ಬ್ಲೇಜರ್ಸ್)
ಮಹಿಳಾ ಟಿ20 ಟೂರ್ನಿಯಲ್ಲೇ ಅತ್ಯಂತ ಕಿರಿಯ ನಾಯಕಿ ಎಂಬ ದಾಖಲೆಯನ್ನ ಸ್ಮೃತಿ ಮಂಧಾನ ಹೊಂದಿದ್ದಾರೆ. ಕಳೆದ ವರ್ಷದ ಸೋಲಿಗೆ ಸೇಡು ತೀರಿಸಿಕೊಳ್ಳುವ ಹಂಬಲದಲ್ಲಿದ್ದಾರೆ. ಮಂಧಾನ ಟಿ20 ವಿಶ್ವಕಪ್ನಲ್ಲಿ 4 ಇನ್ನಿಂಗ್ಸ್ಗಳಲ್ಲಿ ಕೇವಲ 49 ರನ್ಗಳಿಸಿ ವಿಫಲರಾಗಿದ್ದರು. ಆದರೆ ಮಹಿಳಾ ಟಿ20 ಚಾಲೆಂಜ್ ಮೂಲಕ ಮತ್ತೆ ಫಾರ್ಮ್ ಕಳೆದುಕೊಳ್ಳುವ ನಿರೀಕ್ಷೆಯಲ್ಲಿ ಟ್ರೈಲ್ಬ್ಲೇಜರ್ಸ್ ನಾಯಕಿಯಿದ್ದಾರೆ.
ಮಹಿಳಾ ಟಿ20 ಚಾಲೆಂಜ್ ಪಂದ್ಯಗಳು ಶಾರ್ಜಾ ಮೈದಾನದಲ್ಲಿ ನಡೆಯಲಿವೆ. ಸ್ಟಾರ್ ಸ್ಫೋರ್ಟ್ಸ್ ಮತ್ತು ಡೆಸ್ಟಿನಿ ಹಾಟ್ಸ್ಟಾರ್ನಲ್ಲಿ ನೇರಪ್ರಸಾರವಾಗಲಿದೆ.